ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ನಂತರ ಈಗ ಅಮೆರಿಕದಲ್ಲೂ ಭಾರತದ ರಾಲಿಯನ್ನೇ ಪುನರುಚ್ಚರಿಸಿದ್ದಾರೆ.
ರಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ ಭೇಟಿಯ ವೇಳೆ ಅಹಮದಾಬಾದ್ ನ ಮೊಟೆರಾ ಸ್ಟೇಡಿಯಂ ನಲ್ಲಿ ಸೇರಿದ್ದ ಲಕ್ಷಕ್ಕೂ ಹೆಚ್ಚಿನ ಜನರ ಎದುರು ಭಾಷಣ ಮಾಡಿದ ನಂತರ ಈಗ ಅಮೆರಿಕದಲ್ಲಿ ಭಾಷಣ ಮಾಡುವಾಗ ಯಾವುದೇ ಅಚ್ಚರಿಯಾಗುವುದಿಲ್ಲ ಎಂದಿದ್ದಾರೆ.
ಮೊಟೆರಾ ಮೈದಾನದಲ್ಲಿ ಭಾಷಣ ಮಾಡುವಾಗ ಲಕ್ಷಕ್ಕೂ ಹೆಚ್ಚಿನ ಜನರು ಸೇರಿದ್ದರು. ಬಹಳಷ್ಟು ಉತ್ಸುಕತೆಯಿಂದ, ಅಚ್ಚರಿಯಿಂದ ಮಾತನಾಡಿದ್ದೆ. ಅಷ್ಟು ದೊಡ್ಡ ಕ್ರೀಡಾಂಗಣ ಬಹುತೇಕ ತುಂಬಿತ್ತು.
ಅಮೆರಿಕದಲ್ಲಿ ನಡೆಯುವ ರಾಲಿಗಳು ನನಗೆ ಈಗ ದೊಡ್ಡದೆನಿಸುವುದಿಲ್ಲ. ಇಲ್ಲಿ ಅಷ್ಟು ಜನರು ಸೇರುವುದಿಲ್ಲ. ಈ ಹಾಲ್ ನಲ್ಲಿ 60 ಸಾವಿರ ಜನರು ಕೂರಲು ಅವಕಾಶವಿದೆ, ಆದರೆ ಇಲ್ಲಿ 15 ಸಾವಿರ ಜನರು ಸೇರಿರಬಹುದು ಎಂದು ಬೇಸರದಿಂದಲೇ ಹೇಳಿದರು.
ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24 ಮತ್ತು 25ರಂದು ಭಾರತಕ್ಕೆ ಭೇಟಿ ನೀಡಿದ್ದರು. 24ರಂದು ಅಹಮದಾಬಾದ್ ನ ಮೊಟೆರಾ ಸ್ಟೇಡಿಯಂನಲ್ಲಿ ಭಾಷಣ ಮಾಡಿದ್ದರು.