ವಿಶ್ವಕ್ಕೆ ಕೋವಿಡ್ 19 ವೈರಸ್ ಸೋಂಕು ಹಬ್ಬಿಸಿದ ಚೀನಾದ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕೋವಿಡ್ 19 ವೈರಸ್ ಹರಡಲು ಚೀನಾವೇ ಕಾರಣ. ಆರಂಭದಲ್ಲಿಯೇ ಅದನ್ನು ಮಟ್ಟ ಹಾಕಬಹುದಿತ್ತು.
ಆದರೆ, ಅದನ್ನು ನಿಯಂತ್ರಿಸದೇ ಹರಡಲು ಬಿಟ್ಟಿತು. ಈ ಬಗ್ಗೆ ನಾವು ಗಂಭೀರವಾಗಿ ತನಿಖೆ ನಡೆಸುತ್ತೇವೆ. ಚೀನಾದಿಂದ ಜರ್ಮನಿ 130 ಬಿಲಿಯನ್ ಡಾಲರ್ ಮೊತ್ತದ ಪರಿಹಾರ ಕೇಳಿದೆ. ಆದರೆ, ಅಮೆರಿಕ ಅದಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರ ಕೋರಲಿದೆ ಎಂದರು.
ಪರೀಕ್ಷಾ ಪ್ರಮಾಣ ಹೆಚ್ಚಳಕ್ಕೆ ಸೂಚನೆ: ಇದೇ ವೇಳೆ, ದೇಶದಲ್ಲಿ ಕೋವಿಡ್ 19 ವೈರಸ್ ಪೀಡಿತರನ್ನು ಪತ್ತೆ ಹಚ್ಚಲು ನಡೆಸಲಾಗುವ ಪರೀಕ್ಷೆಯ ಪ್ರಮಾಣ ತುಂಬಾ ಕಡಿಮೆ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಂಬರುವ ವಾರಗಳಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ನೀಲನಕ್ಷೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಇದರ ಪ್ರಕಾರ ಪ್ರತಿ ರಾಜ್ಯ, ಪ್ರತಿ ತಿಂಗಳು ಕನಿಷ್ಟವೆಂದರೂ ಜನಸಂಖ್ಯೆಯ ಶೇ.2.6ರಷ್ಟು ಜನರ ಪರೀಕ್ಷೆ ನಡೆಸಲೇಬೇಕು. ಸೋಂಕಿನ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಪರೀಕ್ಷೆಯ ಪ್ರಮಾಣವನ್ನು ದ್ವಿಗುಣಗೊಳಿಸಬೇಕು. ಈ ಮಧ್ಯೆ, ಲಾಕ್‌ಡೌನ್ ಸಡಿಲಗೊಳಿಸಿ, ಆರ್ಥಿಕ ಚಟುವಟಿಕೆಗಳ ಪುನಾರಂಭಕ್ಕೆ ಹೆಚ್ಚಿನ ರಾಜ್ಯಗಳು ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗದರ್ಶನ ಕುರಿತಾದ ಕರಡು ಪ್ರತಿಯೊಂದನ್ನು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಶ್ವೇತಭವನಕ್ಕೆ ಕಳುಹಿಸಿದೆ ಎಂದು ಮೂಲಗಳು ಹೇಳಿವೆ.
ಪರಿಸ್ಥಿತಿಯಲ್ಲಿ ಸುಧಾರಣೆ: ಈ ನಡುವೆ, ಕೋವಿಡ್ 19 ವೈರಸ್ ನಿಂದಾಗಿ ಸೋಮವಾರ ನ್ಯೂಯಾರ್ಕ್‌ನಲ್ಲಿ 337 ಮಂದಿ, ನ್ಯೂಜೆರ್ಸಿಯಲ್ಲಿ 106 ಮಂದಿ ಮೃತಪಟ್ಟಿದ್ದು, ಕಳೆದೊಂದು ತಿಂಗಳ ಅವಧಿಯಲ್ಲಿ ದಿನವೊಂದರಲ್ಲಿ ಮೃತಪಟ್ಟವರ ಅತಿ ಕನಿಷ್ಟ ಸಂಖ್ಯೆ ಇದಾಗಿದೆ. ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಎಂದು ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕುಮೊ, ನ್ಯೂಜೆರ್ಸಿ ಗವರ್ನರ್ ಫಿಲಿಪ್ ಮರ್ಫಿ ತಿಳಿಸಿದ್ದಾರೆ.