ಇಸ್ಲಾಮಾಬಾದ್ : 26/11ರ ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಜಮಾತ್ ಉದ್ ದಾವಾ ಮುಖ್ಯಸ್ಥ ಹಾಫೀಜ್ ಸಯೀದ್ ನನ್ನು ಪಾಕ್ ಸರಕಾರ ಲಾಹೋರ್‌ನಲ್ಲಿನ ಆತನ ಮನೆಯಲ್ಲಿ ಗೃಹ ಬಂಧನದಲ್ಲಿರಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ನಡುವಿನ ಹೆಚ್ಚುತ್ತಿರುವ ದೋಸ್ತಿಯಿಂದಾಗಿ ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿರುವ ಸಯೀದ್, ಈ ಬಗ್ಗೆ ನಿನ್ನೆ ಸೋಮವಾರ ವಿಡಿಯೋ ಚಿತ್ರಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾನೆ.
ಹಾಫೀಜ್ ಸಯೀದ್ ಜತೆಗೆ ಇನ್ನೂ ನಾಲ್ವರನ್ನು ಪಾಕ್ ಸರಕಾರ ಪಂಜಾಬ್ ಪ್ರಾಂತ್ಯದಲ್ಲಿ ನಿನ್ನೆ ಸೋಮವಾರ ರಾತ್ರಿ ಗೃಹ ಬಂಧನದಲ್ಲಿರಿಸಿದೆ.
ಜಮಾತ್ ಉದ್ ದಾವಾದ ಪ್ರಧಾನ ಕಾರ್ಯಾಲಯವನ್ನು ಭಾರೀ ಸಂಖ್ಯೆಯ ಪೊಲೀಸರು ಸುತ್ತುವರಿದಿದ್ದಾಗ ಹಾಫೀಜ್ ಸಯೀದ್ ಆ ಹೊತ್ತಿಗೆ ಮಸ್‌ಜಿದ್ ಎ ಕದೀಸಾ ಚೌಬುರ್ಜಿ ಯಲ್ಲಿ ಇದ್ದ ಎಂದು ಮೂಲಗಳು ತಿಳಿಸಿವೆ. ಅಲ್ಲಿಂದ ಆತನನ್ನು ಲಾಹೋರ್‌ನ ಜೋಹರ್ ಪಟ್ಟಣದಲ್ಲಿನ ಆತನ ನಿವಾಸಕ್ಕೆ ಕರೆದೊಯ್ದು ಅಲ್ಲಿ ಗೃಹ ಬಂಧನದಲ್ಲಿರಿಸಿ ಆ ತಾಣವನ್ನು ಸಬ್ ಜೈಲ್ ಎಂದು ಅಧಿಕೃತವಾಗಿ ಸರಕಾರ ಪ್ರಕಟಿಸಿತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯ ಸ್ನೇಹವನ್ನು ಬಯಸಿರುವುದರ ಫಲವಾಗಿ ತನ್ನ ಬಂಧನಕ್ಕೆ ಒತ್ತಡ ಹೇರಲಾಗಿದ್ದು ಆ ಪ್ರಕಾರ ನನ್ನನ್ನು ಬಂಧಿಸಿಡಲಾಗಿದೆ ಎಂದು ಹೇಳಿರುವ ವಿಡಿಯೋವನ್ನು ಹಾಫೀಜ್ ಸಯೀದ್ ಬಿಡುಗಡೆ ಮಾಡಿದ್ದಾನೆ.