ಮಿಯಾಮಿ/ವಾಷಿಂಗ್ಟನ್:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿದೆ. ಈ ಬಗ್ಗೆ ಖುದ್ದು ಡೊನಾಲ್ಡ್ ಟ್ರಂಪ್ ಅವರೇ ತನ್ನದೇ ಮಾಲಿಕತ್ವದ ಸಾಮಾಜಿಕ ಜಾಲತಾಣ “ಟ್ರಾತ್ ಸೋಶಿಯಲ್’ ನಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ಮಂಗಳವಾರ (ಜೂ.13) ಫ್ಲೋರಿಡಾದ ಮಿಯಾಮಿಯಲ್ಲಿ ಇರುವ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಇಂಥ ಬೆಳವಣಿಗೆ ಉಂಟಾಗಲಿದೆ ಎಂಬ ಊಹೆಯೂ ಇರಲಿಲ್ಲ. ಭ್ರಷ್ಟ ಬೈಡೆನ್ ಸರ್ಕಾರದಲ್ಲಿ ಎಲ್ಲವೂ ಸಾಧ್ಯವಾಗಿದೆ’ ಎಂದು ಟೀಕಿಸಿದ್ದಾರೆ.
2020ರಲ್ಲಿ ಅಧಿಕಾರದ ಅವಧಿ ಮುಕ್ತಾಯವಾದ ಬಳಿಕವೂ ಕೂಡ ಸರ್ಕಾರದ ಪರಮ ರಹಸ್ಯ ದಾಖಲೆಗಳನ್ನು ನಿಯಮ ಮೀರಿ ತನ್ನ ಬಳಿ ಇರಿಸಿಕೊಂಡ ಆರೋಪದಡಿಯಲ್ಲಿ ಟ್ರಂಪ್ ವಿರುದ್ಧ ಕೇಸು ದಾಖಲಾಗಿತ್ತು. ಗುರುತರ ಆರೋಪಗಳನ್ನು ಎದುರಿಸಿ ತಪ್ಪಿತಸ್ಥ ಎಂಬ ಆರೋಪಕ್ಕೆ ಗುರಿಯಾದ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಕೂಡ ಟ್ರಂಪ್ ಪಾತ್ರರಾಗಿದ್ದಾರೆ.
ಟ್ರಂಪ್ ವಿರುದ್ಧ ಪ್ರಮುಖ ಸರ್ಕಾರಿ ದಾಖಲೆಗಳ ಅಸಮರ್ಪಕ ನಿರ್ವಹಣೆ, ತನಿಖಾ ಸಂಸ್ಥೆಗಳಿಗೆ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿ ಸೇರಿದಂತೆ ಒಟ್ಟು ಏಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲಿಯೇ ಇದೊಂದು ಕರಾಳ ದಿನ ಎಂದು ದೂರಿರುವ ಟ್ರಂಪ್, ಮಂಗಳವಾರ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದೂ ಹೇಳಿಕೊಂಡಿದ್ದಾರೆ. ಮುಂದಿನ ವಾರ ಮಿಯಾಮಿ ಕೋರ್ಟ್‌ನಲ್ಲಿ ಟ್ರಂಪ್ ಹಾಜರಾಗಲಿರುವ ಹಿನ್ನೆಲೆಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥ ಮಾಜಿ ಅಧ್ಯಕ್ಷರ ಆಪ್ತ ವಲಯವನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಸಾಧ್ಯ:
ಸದರಿ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಹೊರಿಸಲಾಗಿರುವ ಆರೋಪಗಳು ಸಾಬೀತಾಗಿ ಕಾರಾಗೃಹವಾಸ ಶಿಕ್ಷೆ ಅನುಭವಿಸುವಂತಾದರೂ 2024ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಸಿಗುತ್ತದೆ. ಒಂದು ವೇಳೆ ಶಿಕ್ಷೆ ಅನುಭವಿಸುತ್ತಿದ್ದರೂ, ಗೆಲುವು ಸಾಧಿಸಿದರೆ ಸಂವಿಧಾನಾತ್ಮಕವಾಗಿ ಅಧಿಕಾರ ನಡೆಸಲು ಸಾಧ್ಯವಾಗುತ್ತದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ಫ್ಲೋರಿಡಾದಲ್ಲಿ ಇರುವ ಟ್ರಂಪ್ ರೆಸಾರ್ಟ್‌ಗೆ ದಾಳಿ ನಡೆಸಿದ್ದ ಸಂದರ್ಭದಲ್ಲಿ 11 ಸಾವಿರ ಪುಟಗಳಷ್ಟು ಸರ್ಕಾರದ ದಾಖಲೆಗಳು ಇದ್ದಿರುವುದನ್ನು ವಶಪಡಿಸಿಕೊಂಡಿತ್ತು.