ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್ ಗುರುವಾರ (ಜನವರಿ 7, 2021) ಜೋ ಬೈಡೆನ್ ಅವರ ಗೆಲುವನ್ನು ಔಪಚಾರಿಕವಾಗಿ ಘೋಷಿಸಿದ ನಂತರ ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಳ್ಳುವುದಾಗಿ ಘೋಷಿಸಿದ್ದು, ತಾನು ಬದಲಾವಣೆ ಆದೇಶವನ್ನು ಪುರಸ್ಕರಿಸುವುದಾಗಿ ತಿಳಿಸಿದ್ದಾರೆ.
ಎಲೆಕ್ಟೋರಲ್ ಕಾಲೇಜ್ ಫಲಿತಾಂಶವನ್ನು ಅಂಗೀಕರಿಸುವುದಾಗಿ ಅಮೆರಿಕ ಕಾಂಗ್ರೆಸ್ ಹೇಳುವ ಮೂಲಕ ಜೋ ಬೈಡೆನ್ ಅವರು ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಅನುವು ಮಾಡಿಕೊಟ್ಟಿದೆ.
ಆದರೂ ತಾನು ಚುನಾವಣಾ ಫಲಿತಾಂಶವನ್ನು ಸಂಪೂರ್ಣವಾಗಿ ತಿರಸ್ಕರಿಸುವುದಾಗಿ ತಿಳಿಸಿದ್ದು, ನೈಜಾಂಶ ತುಂಬಾ ದೂರ ಸರಿದುಬಿಟ್ಟಿದೆ. ಆದರೂ ಜನವರಿ 20ರಂದು ಶ್ವೇತಭವನದಿಂದ ನಿರ್ಗಮಿಸುವುದಾಗಿ ಟ್ರಂಪ್ ಹೇಳಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಘೋಷಣೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದರು. ಘಟನೆಯಲ್ಲಿ ಐದಾರು ಮಂದಿ ಸಾವನ್ನಪ್ಪಿದ್ದರು. ಘರ್ಷಣೆ, ಹಿಂಸಾಚಾರದಲ್ಲಿ ಭಾಗಿಯಾದ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
2020ರ ನವೆಂಬರ್ 3ರ ಚುನಾವಣೆಯಲ್ಲಿ ಟ್ರಂಪ್ ಪರಾಜಯ ಒಪ್ಪಿಕೊಳ್ಳದ ಬೆಂಬಲಿಗರು ಪ್ರತಿಭಟನೆ ನಡೆಸಿ ಹಿಂಸಾಚಾರಕ್ಕೆ ಮುಂದಾಗಿದ್ದರು. ಪ್ರತಿಭಟನಾನಿರತ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದ್ದು, ಉಳಿದವರು ಹಿಂಸಾಚಾರದಲ್ಲಿ ಗಾಯಗೊಂಡು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.