Advertisement

ಟ್ರಂಪ್‌ಗೆ ಗೇಟ್‌ಪಾಸ್‌?

01:56 AM Jan 09, 2021 | Team Udayavani |

ವಾಷಿಂಗ್ಟನ್‌: “ಬೇಲಿಯೇ ಎದ್ದು ಹೊಲ ಮೇಯ್ದಂತೆ’ ವರ್ತಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಜಗತ್ತಿನ ಕಣ್ಣಿಗೆ ವಿವಾದದ ಬೆಂಕಿ ಚೆಂಡು. ಸಂಸತ್ತಿನ ಮೇಲೆ ದಂಗೆಗೆ ಛೂಬಿಟ್ಟು ರಂಪಾಟ ಎಬ್ಬಿಸಿದ್ದ ಟ್ರಂಪ್‌ರನ್ನು ಜ.20ರ ಅಧಿಕಾರ ಹಸ್ತಾಂತರಕ್ಕೂ ಮುನ್ನವೇ ಅಧ್ಯಕ್ಷ ಸ್ಥಾನದಿಂದ ಕಿತ್ತೂಗೆಯಲು ಸಾಧ್ಯವೇ?

Advertisement

– ಈ ಲೆಕ್ಕಾಚಾರವೀಗ ಅಮೆರಿಕದಾದ್ಯಂತ ಚರ್ಚೆಗೀಡಾಗಿದೆ. ಕ್ಯಾಪಿಟಲ್‌ ದಂಗೆಗೆ ಪ್ರಚೋದನೆ ನೀಡಿದ ಆರೋಪ ಮುಂದಿಟ್ಟು, ಸಂಸತ್‌ ಸ್ಪೀಕರ್‌ ನ್ಯಾನ್ಸಿ ಪೆಲ್ಸೊಯಿ ಸೇರಿದಂತೆ ಹಲವರು ಕ್ರುದ್ಧರಾಗಿದ್ದಾರೆ. ಟ್ರಂಪ್‌ರನ್ನು ಜೋ ಬೈಡೆನ್‌ ಪದಗ್ರಹಣಕ್ಕೂ ಮುಂಚಿತವಾಗಿಯೇ ವೈಟ್‌ಹೌಸ್‌ನಿಂದ ಹೊರಗೆ ಕಳುಹಿಸಬೇಕೆಂದು ಕಟುವಾಗಿ ಪ್ರತಿಪಾದಿಸಿದ್ದಾರೆ.

ಸಾಧ್ಯತೆಗೆ ಕನ್ನಡಿ ಹಿಡಿದಾಗ, 3 ದಾರಿಗಳು ಕಾಣಿಸುತ್ತವೆ…

  1. ಸಂವಿಧಾನದ 25ನೇ ತಿದ್ದುಪಡಿ: ಈ ಕಾನೂನು ಉಪಾಧ್ಯಕ್ಷನ ಅಧಿಕಾರವನ್ನು ಎತ್ತಿಹಿಡಿಯುತ್ತದೆ. “ಒಂದು ವೇಳೆ ಅಧ್ಯಕ್ಷ ಅಧಿಕಾರ ನಡೆಸಲು ದೈಹಿಕವಾಗಿ ಅಥವಾ ಮಾನಸಿಕವಾಗಿ ಅಸಮರ್ಥನಾದರೆ ಆ ಸ್ಥಾನಕ್ಕೆ ಉಪಾಧ್ಯಕ್ಷ ಅರ್ಹನಾಗುತ್ತಾನೆ’ ಎಂದು 25ನೇ ತಿದ್ದುಪಡಿ ಹೇಳಿದೆ.

ಇದನ್ನೊಪ್ಪಿಕೊಂಡು ಅಧ್ಯಕ್ಷ ತನ್ನ ಸಹಿಯೊಂದಿಗೆ ಸ್ಪೀಕರ್‌ಗೆ ಒಪ್ಪಿಗೆ ಪತ್ರ ನೀಡಿದರೆ, ಉಪಾಧ್ಯಕ್ಷನಾದವನು ಅಮೆರಿಕದ ಸಾರಥ್ಯ ವಹಿಸಬಹುದು. ಆದರೆ ಟ್ರಂಪ್‌ ವಿಚಾರದಲ್ಲಿ ಇದು ಅಸಾಧ್ಯ. ಹಾಗಾಗಿ, ಸಂಸತ್ತಿನ ಉಭಯ ಸದನಗಳು ಅಧ್ಯಕ್ಷನನ್ನು ಅಸಮರ್ಥ ಎಂದು ಘೋಷಿಸಲು, ವೋಟಿಂಗ್‌ ನಡೆಸಬಹುದು. 3ನೇ 2ರಷ್ಟು ಬಹುಮತ ಪಡೆದರಷ್ಟೇ ಮೈಕ್‌ ಪೆನ್ಸ್‌ ಅಧ್ಯಕ್ಷಗಾದಿಗೇರಬಹುದು. ಈ ಸಂದರ್ಭದಲ್ಲಿ ಟ್ರಂಪ್‌ರನ್ನು ವಿರೋಧಿಸುವ, ಕ್ಯಾಬಿನೆಟ್‌ನ 8 ಸಚಿವರು ಮೈಕ್‌ ಪೆನ್ಸ್‌ರನ್ನು ಕಡ್ಡಾಯವಾಗಿ ಬೆಂಬಲಿಸಲೇಬೇಕಾಗುತ್ತದೆ.

  1. ದೋಷಾರೋಪಣೆ: ಇದು ಅಧ್ಯಕ್ಷರನ್ನು ಅನೂ ರ್ಜಿತಗೊಳಿಸಲು ಇರುವ 2ನೇ ಹಾದಿ. ಅಂದರೆ, ಅಮೆ ರಿಕ ಅಧ್ಯಕ್ಷ ಯಾವುದಾದರೂ ಪ್ರಕರಣದಲ್ಲಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದರೆ, ಆತನ ಆಯ್ಕೆಯನ್ನು ಅಸಿಂಧು ಗೊಳಿಸುವ ಅಧಿಕಾರ ಸಂಸತ್ತಿಗಿರುತ್ತದೆ. ಇದು ಕೂಡ ಮತದಾನದ ಮೂಲಕವೇ ನಡೆಯುತ್ತದೆ. ಹಿಂದೆಯೂ ಟ್ರಂಪ್‌ ವಿರುದ್ಧ ದೋಷಾರೋಪಣೆ ಅಸ್ತ್ರ ಪ್ರಯೋಗಿ ಸಲಾಗಿತ್ತು. ಉಕ್ರೇನ್‌ ಅಧ್ಯಕ್ಷರೊಂದಿಗೆ ನಡೆಸಿದ “ಚುನಾವಣ ಸಹಕಾರ’ ಕುರಿತ ದೂರವಾಣಿ ಸಂಭಾ ಷಣೆ ವಿವಾದ ಸಂಸತ್ತಿನ ಮುಂದೆ ಬಂದಿತ್ತು. ಆದರೆ ಬಹುಮತ ಸಿಗದೆ ಅಂದು ಟ್ರಂಪ್‌ ಬಚಾವಾಗಿದ್ದರು.

ಪ್ರಸ್ತುತ, ಸ್ಪೀಕರ್‌ ಪೆಲ್ಸೊಯಿ ಈ ಅಸ್ತ್ರವನ್ನು ಟ್ರಂಪ್‌ ವಿರುದ್ಧ ಪ್ರಯೋಗಿಸಲು ಒಲವು ತೋರಿದ್ದಾರೆ. ಇದು ಘಟಿಸಿದರೂ, ಮೈಕ್‌ ಪೆನ್ಸ್‌ ಕಿರು ಅವಧಿಗೆ ಅಧ್ಯಕ್ಷರಾಗುವುದು ನಿಶ್ಚಿತ.

  1. ಸ್ವಯಂ ಕ್ಷಮೆಯಾಚನೆ: ಕ್ಯಾಪಿಟಲ್‌ ದಂಗೆಗೆ ಕುಮ್ಮಕ್ಕು ನೀಡಿರುವುದು ಟ್ರಂಪ್‌ ವಿರುದ್ಧ ಸದ್ಯವಿರುವ ಗಂಭೀರ ಕಾನೂನು ಉಲ್ಲಂಘನೆ ಆರೋಪ. ತಮ್ಮ ವರ್ತನೆ ಕುರಿತು ಕ್ಷಮೆಯಾಚಿಸಿ, ಅಧಿಕಾರ ಬಿಟ್ಟು ಕೊಡಲೂ ಟ್ರಂಪ್‌ಗೆ ಅವಕಾಶವಿದೆ. ಆದರೆ, ಟ್ರಂಪ್‌ ಮೇಲೆ ಕೇವಲ ಇದೊಂದೇ ಆರೋಪ- ತನಿಖೆಗಳಿಲ್ಲ. ತೆರಿಗೆ ಅಧಿಕಾರಿಗಳು, ಬ್ಯಾಂಕ್‌, ಉದ್ಯಮಿಗಳನ್ನು ದಾರಿತಪ್ಪಿಸಿರುವ ಪ್ರಕರಣಗಳ ತನಿಖೆಯ ತೂಗುಕತ್ತಿಯೂ ನೇತಾಡುತ್ತಿದೆ.
Advertisement

ಇಲ್ಲಿಯತನಕ ಅಮೆರಿಕದ ಯಾವ ಅಧ್ಯಕ್ಷರೂ ಕ್ಷಮೆಯಾಚಿಸಿದ ಪ್ರಸಂಗ ನಡೆದಿಲ್ಲ. “ವ್ಯಕ್ತಿ ತನಗೆ ತಾನೇ ತೀರ್ಪುಗಾರನಾಗುವುದೂ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧ’ ಎನ್ನುವ ಅಭಿಪ್ರಾಯಗಳನ್ನು° ಅಮೆರಿಕದ ಕಾನೂನು ತಜ್ಞರು ಹೊಂದಿದ್ದಾರೆ.

ಸ್ವಯಂ ಕ್ಷಮೆಯಾಚಿಸಲು ಟ್ರಂಪ್‌ ಒಲವು?  :

ತಾನೆಸಗಿದ ಪ್ರಮಾದದ ಬಗ್ಗೆ ಸ್ವಯಂ ಕ್ಷಮೆ ಯಾಚಿಸುವ ಕುರಿತು ಟ್ರಂಪ್‌ ತಮ್ಮ ಕಾನೂನು ಸಲಹೆಗಾರರ ಬಳಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಯಾವತ್ತು ಕ್ಷಮೆ ಯಾಚಿಸುತ್ತಾರೆ? ಎಂಬುದು ಇನ್ನೂ ಸ್ಪಷ್ಟವಿಲ್ಲ. ಈ ಕ್ರಮದ ಸಿಂಧುತ್ವದ ಕುರಿತೂ ಅಮೆರಿಕ ಸಂವಿಧಾನ ಗೊಂದಲದ ನೀತಿಗಳನ್ನೇ ಹೊಂದಿರುವುದರಿಂದ, ಇದು ಅಸಾಧ್ಯದ ಮಾತು ಎಂದೇ ವಿಶ್ಲೇಷಿಸಲಾಗುತ್ತಿದೆ.

ಭಾರತ ಧ್ವಜ ಕಂಡಿದ್ದೇಕೆ?  :

ಟ್ರಂಪ್‌ ಬೆಂಬಲಿಗರ ದಾಂಧ‌ಲೆ ವೇಳೆ ಕೊಚ್ಚಿಯ ಚೆಂಬಕ್ಕರದ  ವಿನ್ಸೆಂಟ್‌ ಕ್ಲೇವಿಯರ್‌ ಪಾಲತ್ತಿಂಗಲ್‌ ಎಂಬಾತ ತಿರಂಗಾ ಧ್ವಜ ಹಾರಿಸಿ ರುವುದು, ಇಂಡೋ- ಅಮೆರಿಕನ್ನರ ಆಕ್ರೋಶಕ್ಕೆ ಗುರಿಯಾಗಿದೆ. ಕೊಚ್ಚಿಯ ಚೆಂಬಕ್ಕರದ ವಿನ್ಸೆಂಟ್‌, ತಾನು ಕ್ಯಾಪಿಟಲ್‌ ದಂಗೆ ಪರವಾಗಿ ರಾಷ್ಟ್ರಧ್ವಜ ಹಾರಿಸಿಲ್ಲ. ಕೇವಲ ಟ್ರಂಪ್‌ ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಹಾರಿಸಿದ್ದೇನೆ ಎಂದು ಸಬೂಬು ಹೇಳಿದ್ದಾನೆ.

ಟ್ರಂಪ್‌ ನಡೆಗೆ ಪ್ರತಿಷ್ಠಿತ ಪತ್ರಿಕೆಗಳ “ಅಕ್ಷರ ಕಿಡಿ’ :

ಟ್ರಂಪ್‌ ಬೆಂಬಲಿಗರ ಸಂಸತ್‌ ದಾಂಧ‌ಲೆ ಪ್ರಕರಣ, ಇಡೀ ಅಮೆರಿಕವನ್ನು ತಲೆತಗ್ಗಿಸುವಂತೆ ಮಾಡಿದೆ. ಅದರಲ್ಲೂ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಗಳು ಕಟುವಾಗಿ ಇದನ್ನು ವರದಿ ಮಾಡಿವೆ.

ದಿ ವಾಷಿಂಗ್ಟನ್‌ ಪೋಸ್ಟ್‌- “ಟ್ರಂಪ್‌ ಸಮೂಹದಿಂದ ಕ್ಯಾಪಿಟಲ್‌ನಲ್ಲಿ ಕೋಲಾಹಲ’, ದಿ ಗಾರ್ಡಿಯನ್‌- “ದಂಗೆಕೋರರಾದ ಟ್ರಂಪ್‌ ಬೆಂಬಲಿಗರು, ಯುಎಸ್‌ ಕ್ಯಾಪಿಟಲ್‌ನಲ್ಲಿ ಕೋಲಾಹಲ’, ದಿ ನ್ಯೂಯಾರ್ಕ್‌ ಟೈಮ್ಸ್‌ - “ಟ್ರಂಪ್‌ ದಂಗೆ ಪ್ರಚೋದನೆ’, ದಿ ಡೈಲಿ ಟೆಲಿಗ್ರಾಫ್- “ಮುತ್ತಿಗೆಯೊಳಗೆ ಪ್ರಜಾಪ್ರಭುತ್ವ’ ಎನ್ನುವ ಶೀರ್ಷಿಕೆ ನೀಡಿ ಘಟನೆ ಖಂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next