ಡೊಮಿನಿಕಾ: ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರೋದ್ಯೋಮಿ ಮೆಹುಲ್ ಚೋಕ್ಸಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಡೊಮಿನಿಕಾ ಹೈಕೋರ್ಟ್ ಜೂನ್ 11ಕ್ಕೆ ಮುಂದೂಡಿರುವುದಾಗಿ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:ಪಾಸಿಟಿವ್ ಗೆದ್ದೇ ಗೆಲ್ಲುತ್ತದೆ : ಓದುಗರೊಬ್ಬರಿಂದ ಪಿಡಿಎಫ್ ಆದ ಉದಯವಾಣಿ ಸುದ್ದಿಗಳು ವೈರಲ್
ಡೊಮಿನಿಕಾ ದ್ವೀಪಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದಾಗಿ ಆರೋಪಿಸಿ ಪೊಲೀಸ್ ಅಧಿಕಾರಿಗಳು ಬಂಧಿಸಿದ ನಂತರ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ವಜಾಗೊಳಿಸಿದ ನಂತರ ಮೆಹುಲ್ ಚೋಕ್ಸಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಮೆಹುಲ್ ಚೋಕ್ಸಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಾಧೀಶ ವೈನಾಂಟೆ ಆ್ಯಡ್ರಿಯನ್ ರಾಬರ್ಟ್ಸ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ್ದರು. ಈ ಸಂದರ್ಭದಲ್ಲಿ ಚೋಕ್ಸಿಯ ಕಾನೂನು ತಂಡ ಹಾಜರಾಗಿರುವುದಾಗಿ ವರದಿ ವಿವರಿಸಿದೆ.
ಡೊಮಿನಿಕಾ ಸರ್ಕಾರದ ಪರವಾಗಿ ಡೈರೆಕ್ಟರ್ ಆಫ್ ಪಬ್ಲಿಕ್ ಪ್ರಾಸಿಕ್ಯೂಷನ್ (ಡಿಪಿಪಿ) ಶೆರ್ಮಾ ಡಾಲ್ರಿಂಪಲ್, ಚೋಕ್ಸಿಯ ಅರ್ಜಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಡೊಮಿನಿಕಾ ನ್ಯೂಸ್ ಆನ್ ಲೈನ್ ವರದಿ ಮಾಡಿದೆ. ಆದರೆ ನ್ಯಾಯಾಧೀಶರು ಅರ್ಜಿಯ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿರುವುದಾಗಿ ವರದಿ ತಿಳಿಸಿದೆ.