Advertisement

ಫ್ಲೈಟ್‌ ರೆಡಿ; ರೈಲು ಮತ್ತೂ ವಿಸ್ತಾರ : ವಿಮಾನಯಾನಿಗಳೇ ಗಮನಿಸಿ…

03:07 AM May 22, 2020 | Hari Prasad |

ಬಹುನಿರೀಕ್ಷಿತ ದೇಶಿಯ ವಿಮಾನ ಯಾನ ಆಂಶಿಕವಾಗಿ 25ರಂದು ಶುರುವಾಗಲಿದೆ. ಅದಕ್ಕಾಗಿ ನಿಯಮಗಳನ್ನೂ ಪ್ರಕಟಿಸಲಾಗಿದೆ. ಜತೆಗೆ ಜೂ.1ರಿಂದ ಶುರುವಾಗುವ 200 ರೈಲುಗಳ ಟಿಕೆಟ್‌ ಬುಕ್ಕಿಂಗ್‌ಗೆ ಚಾಲನೆ ಸಿಕ್ಕಿದೆ.

Advertisement

ಹೊಸದಿಲ್ಲಿ: ಎರಡು ತಿಂಗಳಿಂದ ನಿಂತಲ್ಲೇ ನಿಂತು ಬೋರಾಗಿದ್ದ ಉಕ್ಕಿನ ಹಕ್ಕಿಗಳು ಈ ಸೋಮವಾರ (ಮೇ 25) ಆಗಸದೆಡೆಗೆ ಹಾರಲಿವೆ.

ಮೊದಲ ಹಂತದಲ್ಲಿ ದೇಶದೊಳಗಿನ ನಗರಗಳಿಗೆ ಮಾತ್ರ ವಿಮಾನ ಸೇವೆ ಲಭ್ಯವಾಗಲಿದ್ದು, ಬಹುದಿನಗಳ ಬಳಿಕ ವಿಮಾನಗಳಲ್ಲಿ ಕುಳಿತು ಹಾರಾಟ ನಡೆಸಲು ಪ್ರಯಾಣಿಕರು ಸಹ ಸಜ್ಜಾಗಿದ್ದಾರೆ.

ಆದರೆ, ದೇಶದ ಎಲ್ಲ ಮೆಟ್ರೋ ಸಿಟಿಗಳೂ ಸೇರಿ ಬಹುತೇಕ ನಗರಗಳಲ್ಲಿ ಕೋವಿಡ್ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು, ಏರ್‌ಪೋರ್ಟ್‌ನ ಹೊರಗೆ ಮತ್ತು ಒಳಗೆ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ಆಡಳಿತ ಕಡ್ಡಾಯವಾಗಿ ಪಾಲಿಸಬೇಕಿರುವ ಕೆಲವಾರು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದರೊಂದಿಗೆ ವಿಮಾನಯಾನ ಸಂಸ್ಥೆಗಳು ತಮ್ಮಲ್ಲಿನ ಮೂರನೇ ಒಂದು ಭಾಗದಷ್ಟು ವಿಮಾನಗಳನ್ನು ಮಾತ್ರ ಕಾರ್ಯಾಚರಣೆಗೆ ಬಳಸಲು ಅವಕಾಶ ನೀಡಿರುವುದಾಗಿ ವಿಮಾನಯಾನ ಸಚಿವಾಲಯ ಹೇಳಿದೆ.

ಕನಿಷ್ಠ, ಗರಿಷ್ಠ ದರನಿಗದಿ: ಪ್ರಯಾಣಕ್ಕೆ ತಗುಲುವ ಅವಧಿ ಆಧರಿಸಿ ಎಲ್ಲ ದೇಶಿ ವಿಮಾನ ಮಾರ್ಗಗಳನ್ನು ಏಳು ವಿಭಾಗಗಳಾಗಿ ವಿಂಗಡಿಸಿರುವ ಸರ್ಕಾರ, ಪ್ರತಿ ವಿಭಾಗಕ್ಕೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡಿದೆ. ಅದರಂತೆ ದೆಹಲಿ – ಮುಂಬೈ ನಡುವಿನ ವಿಮಾನ ಪ್ರಯಾಣ ದರವನ್ನು ಕನಿಷ್ಠ 3,500 ರೂ. ಮತ್ತು ಗರಿಷ್ಠ 10,000 ರೂ. ನಿಗದಿಪಡಿಸಲಾಗಿದೆ. ಈ ದರ ನಿಯಂತ್ರಣ ಮುಂದಿನ ಎರಡು ತಿಂಗಳವರೆಗೆ ಅನ್ವಯವಾಗಲಿದೆ.

Advertisement

ಈ ಕುರಿತು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ, ವಿಮಾನಯಾನ ಸಂಸ್ಥೆಗಳು ಗರಿಷ್ಠ ದರವನ್ನೇ ಎಲ್ಲ ಪ್ರಯಾಣಿಕರಿಂದ ವಸೂಲಿ ಮಾಡುವ ಅಪಾಯ ಇದೆ. ಹೀಗಾಗಿ ಅದನ್ನು ತಪ್ಪಿಸಲು ಏರ್‌ಲೈನ್‌ಗಳು ತಮ್ಮ ವಿಮಾನದಲ್ಲಿನ ಶೇ.40 ಆಸನಗಳನ್ನು ಕನಿಷ್ಠ ಮತ್ತು ಗರಿಷ್ಠ ದರದ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು ಎಂದು ತಿಳಿಸಲಾಗಿದೆ.

ಉದಾಹರಣೆಗೆ ದೆಹಲಿ – ಮುಂಬೆ„ ನಡುವೆ ಕನಿಷ್ಠ 3,500ರೂ. ಮತ್ತು ಗರಿಷ್ಠ 10,000 ರೂ. ಪ್ರಯಾಣ ದರ ಇದ್ದು, ಸಂಸ್ಥೆಗಳು ಶೇ.40 ಸೀಟುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕು ಎಂದು ಸಚಿವರು ವಿವರಿಸಿದರು.

ಏರ್‌ಪೋರ್ಟ್‌ ತಲುಪುವ ಮುನ್ನ
– ವಿಮಾನ ಹೊರಡುವ ಎರಡು ಗಂಟೆ ಮೊದಲು ನಿಲ್ದಾಣದಲ್ಲಿರಿ.

– ಮಾಸ್ಕ್ ಅನ್ನು ಮರೆಯದೇ ಇರಿಸಿಕೊಳ್ಳಿ.

– ಮನೆಯಲ್ಲೇ ವೆಬ್‌ ಚೆಕ್‌ – ಇನ್‌ ಮಾಡಿಕೊಂಡು, ಆನ್ಲೈನ್‌ನಲ್ಲೇ ಬ್ಯಾಗೇಜ್‌ ಟ್ಯಾಗ್‌ ಪಡೆದುಕೊಳ್ಳಿ.

– ಒಬ್ಬರು ಒಂದೇ ಚೆಕ್‌ – ಇನ್‌ ಬ್ಯಾಗ್‌ ಕೊಂಡೊಯ್ಯಲು ಅವಕಾಶ.

– ಆನ್ಲೈನ್‌ನಲ್ಲಿ ಪಡೆದ ಟ್ಯಾಗ್‌ನ ಪ್ರಿಂಟ್‌ ತೆಗೆದು ಬ್ಯಾಗ್‌ಗೆ ಲಗತ್ತಿಸಿ.

– ಕಂಟೈನ್‌ಮೆಂಟ್‌ ವಲಯದಲ್ಲಿನ ಜನರಿಗೆ ಪ್ರಯಾಣಾವಕಾಶವಿಲ್ಲ.

– ಆರೋಗ್ಯ ಸೇತು ಆ್ಯಪ್‌ ಇಲ್ಲದಿದ್ದರೆ ಡೌನ್ ‌ಲೋಡ್‌ ಮಾಡಿಕೊಳ್ಳಿ.

ವಿಮಾನ ನಿಲ್ದಾಣದಲ್ಲಿ
– ಪ್ರತಿಯೊಬ್ಬ ಪ್ರಯಾಣಿಕರೂ ಮಾಸ್ಕ್ ಧರಿಸುವುದು ಕಡ್ಡಾಯ.

– ಪ್ರಯಾಣಿಕರು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಬೇಕು.

– ಕೌಂಟರ್‌ನಲ್ಲಿ ಬ್ಯಾಗೇಜ್‌ ಕೊಟ್ಟ ಬಳಿಕ ಮೊಬೈಲ್‌ಗೆ ಸಂದೇಶ ಕಳುಹಿಸುವ ಮೂಲಕ ದೃಢಪಡಿಸಲಾಗುತ್ತದೆ.

– ವಿಮಾನ ಹೊರಡುವ ಗಂಟೆ ಮೊದಲೇ ಬ್ಯಾಗ್‌ ಡೆಪಾಸಿಟ್‌ ಮಾಡಬೇಕು.

– ಆರೋಗ್ಯ ಸೇತು ಆ್ಯಪ್‌ನಲ್ಲಿನ ಸ್ಟೇಟಸ್‌ ಅನ್ನು ಸಿಬ್ಬಂದಿಗೆ ತೋರಿಸಬೇಕು.

– ಆ್ಯಪ್‌ ಇಲ್ಲದಿದ್ದಲ್ಲಿ ಸ್ಥಳದಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

– 14 ವರ್ಷದೊಳಗಿನ ಮಕ್ಕಳಿಗೆ ಆ್ಯಪ್‌ ಬೇಕಿಲ್ಲ.

– ಪರಸ್ಪರ ಅಂತರ ಕಾಯ್ದುಕೊಳ್ಳಲು ವೃತ್ತ, ಚೌಕ, ಟೆನ್ಸರ್‌ ಬ್ಯಾರಿಯರ್‌ ಗಮನಿಸಿ.

– ‘ನಾಟ್‌ ಫಾರ್‌ ಯೂಸ್‌’ ಎಂದು ಬರೆದ ಚೇರ್‌ಗಳ ಮೇಲೆ ಕೂರಬೇಡಿ.

– ಬೋರ್ಡಿಂಗ್‌ ಗೇಟ್‌ ಬಳಿ ಸುರಕ್ಷತಾ ಕಿಟ್‌, ಫೇಸ್‌ ಶೀಲ್ಡ್‌, ಸ್ಯಾನಿಟೈಸರ್‌ ಪಡೆದುಕೊಳ್ಳಿ.

– ಗೇಟ್‌ ಬಳಿ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಿಸಿ, ಸಿಬ್ಬಂದಿಗೆ ಗುರುತಿನ ಚೀಟಿ ತೋರಿಸಿ.

ವಿಮಾನಗಳಲ್ಲಿ…
– ಒಬ್ಬರ ನಂತರ ಒಬ್ಬರಂತೆ ಅನುಕ್ರಮ ವಿಧಾನದಲ್ಲಿ ವಿಮಾನ ಏರಬೇಕು

– ಶೌಚಾಲಯವನ್ನು ಸಾಧ್ಯವಾದಷ್ಟು ಕಡಿಮೆ ಬಳಸಬೇಕು

– ಬಾತ್‌ರೂಮ್‌ಗೆ ಹೋಗಲು ಸರತಿ ಸಾಲು ನಿಲ್ಲುವಂತಿಲ್ಲ

– ಬಾತ್‌ರೂಮ್‌ಗೆ ಮಕ್ಕಳು, ಹಿರಿಯರ ಜತೆ ಒಬ್ಬರು ಮಾತ್ರ ಹೋಗಬಹುದು

– ವಿಮಾನದಲ್ಲಿ ಊಟ ನೀಡುವುದಿಲ್ಲ; ಪ್ರಯಾಣಿಕರೂ ಊಟ ಪಾರ್ಸೆಲ್‌ ತರುವಂತಿಲ್ಲ

– ಪ್ರತಿ ಸೀಟಿನ ಬಳಿ ನೀರಿನ ಬಾಟಿಲಿ ಇರಿಸಲಾಗಿರುತ್ತದೆ

– ದಿನ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಕೊಂಡೊಯ್ಯುವಂತಿಲ್ಲ

– ನಿಗದಿತ ಸ್ಥಳ ತಲುಪಿದ ನಂತರ ಬ್ಯಾಗೇಜ್‌ ತೆಗೆದುಕೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಪ್ರಯಾಣಿಕ ರೈಲುಗಳ ಟಿಕೆಟ್‌ ಬುಕ್ಕಿಂಗ್‌ ಆರಂಭ
ದೇಶದಲ್ಲಿ 4ನೇ ಹಂತದ ಲಾಕ್‌ ಡೌನ್‌ ಆರಂಭವಾಗಿ, ಬಹುತೇಕ ಚಟುವಟಿಕೆಗಳು ಪುನಾರಂಭಗೊಂಡಿರುವಂತೆಯೇ ಜೂ.1 ರಿಂದ ಸುಮಾರು 200 ಪ್ರಯಾಣಿಕ ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ.

ತುರಂತೋ, ಸಂಪರ್ಕ ಕ್ರಾಂತಿ, ಜನಶತಾಬ್ದಿ, ಪೂರ್ವ ಎಕ್ಸ್‌ಪ್ರೆಸ್‌ನಂಥ ಜನಪ್ರಿಯ ರೈಲುಗಳ ಸಂಚಾರ ಶುರುವಾಗಲಿದ್ದು, ಗುರುವಾರದಿಂದಲೇ ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಲು ಆರಂಭಿಸಿದ್ದಾರೆ.ಟಿಕೆಟ್‌ ಕಾಯ್ದಿರಿಸುವಿಕೆ, ಪ್ರಯಾಣಕ್ಕೆ ಸಂಬಂಧಿಸಿದ ಹಲವು ಮಾರ್ಗಸೂಚಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಸದ್ಯಕ್ಕೆ ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಮಾತ್ರವೇ ಟಿಕೆಟ್‌ ಬುಕಿಂಗ್‌ ಮಾಡಬಹುದಾಗಿದೆ. ಮುಂಗಡ ಕಾಯ್ದಿರಿಸುವಿಕೆ ಅವಧಿ ಗರಿಷ್ಠ 30 ದಿನಗಳು. ವೈಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ರೈಲು ಹತ್ತಲು ಅವಕಾಶವಿರುವುದಿಲ್ಲ.

ಎಲ್ಲ ಪ್ರಯಾಣಿಕರಿಗೂ ಸ್ಕ್ರೀನಿಂಗ್‌ ಕಡ್ಡಾಯವಾಗಿದ್ದು, ರೋಗಲಕ್ಷಣ ಇರದವರಿಗೆ ಮಾತ್ರವೇ ರೈಲು ಏರಲು ಅವಕಾಶ. ರೈಲಲ್ಲಿ ಹೊದಿಕೆ, ಕರ್ಟನ್‌ಗಳನ್ನು ಒದಗಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next