ಹುಬ್ಬಳ್ಳಿ: ಕುರಿ ಕಾಯುವ ಯುವಕ ಇಂದು ನಾಡಿನ ಹೆಮ್ಮೆಯ ಗಾಯಕ. ಚಿಕ್ಕ ಬಾಲಕ ಇಂದು ಎಲ್ಲರ ಹೆಮ್ಮೆಯ ಬಾಲಕನಾಗಿ ಹೊರಹೊಮ್ಮಿದ್ದಾನೆ. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಸಂಸ್ಕೃತಿ ಕಲೆ, ಪರಂಪರೆ ಎಂಬುದು ಹೆಮ್ಮೆಯ ವಿಷಯ ಎಂದು ಮಾಜಿ ಸಿಎಂ, ಶಾಸಕ ಜಗದೀಶ ಶೆಟ್ಟರ ಹೇಳಿದರು.
ಮೂರುಸಾವಿರಮಠದ ಸಭಾಭವನದಲ್ಲಿ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾನಪದ ಪರಂಪರಾ ಉತ್ಸವ-2019 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಹೆಚ್ಚು ಅನುದಾನ ನೀಡುವ ಮೂಲಕ ಜಿಲ್ಲಾ ಉತ್ಸವ, ತಾಲೂಕು ಉತ್ಸವ ಮಾಡಲು ಯೋಜನೆ ರೂಪಿಸಿ ಅದನ್ನು ಕಾರ್ಯಗತಗೊಳಿಸಲಾಗಿತ್ತು. ನಂತರ ಬಂದ ಸರಕಾರಗಳು ಅಂತಹ ಯೋಜನೆಗಳಿಗೆ ಹೆಚ್ಚಿನ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಜಿಲ್ಲಾ ಉತ್ಸವ, ತಾಲೂಕು ಉತ್ಸವಗಳು ಸರಿಯಾಗಿ ನಡೆಯದಿರುವುದು ವಿಪರ್ಯಾಸದ ಸಂಗತಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಮಾತನಾಡಿ, ಕನ್ನಡ ಸಂಸ್ಕೃತಿಗೆ ತುಂಬಾ ದೊಡ್ಡ ಹಿರಿಮೆ ಇದೆ. ಕಲಾ ಪ್ರಕಾರಗಳು ನಮ್ಮ ಮುಂದಿನ ಪೀಳಿಗೆಗೆ ಉಳಿದು ಬೆಳೆಯಬೇಕು. ಈ ಹಿಂದೆ ಇದ್ದ ಸಾಹಿತಿಗಳಂತೆ ಇಂದು ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಕಲಾವಿದರು ಇರುವುದು ನಮ್ಮ ಹೆಮ್ಮೆ ಎಂದರು.
ಪ್ರಕಾಶ ಮಲ್ಲಿಗವಾಡ ಮಾತನಾಡಿ, ನಮ್ಮ ಜಾನಪದ ಕಲಾವಿದರನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ಅವಶ್ಯ. ಕಲಾವಿದರಿಗೆ ನೀಡುವ ಧನ ಸಹಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸದ್ಯ ನೀಡುತ್ತಿರುವ ಮಾಸಾಶನ ಕಡಿಮೆ ಆಗಿದ್ದು, ಅದನ್ನು ಹೆಚ್ಚಿಸುವಲ್ಲಿ ಸರಕಾರ ಗಮನ ಹರಿಸಬೇಕು ಎಂದರು. ಉದ್ಯಮಿ ಮಹೇಂದ್ರ ಸಿಂಘಿ ಮಾತನಾಡಿದರು. ಸ್ವರ್ಣ ಮಯೂರಿ ಸಂಸ್ಥೆಯಿಂದ ಬೆಳಿಗ್ಗೆಯಿಂದ ದಾಲಪಟಾ ಪ್ರದರ್ಶನ, ಡೊಳ್ಳು ಕುಣಿತ, ಸುಡಗಾಡು ಸಿದ್ದರು, ಮಹಿಳಾ ಕೋಲಾಟ, ನಗೆ ಹಬ್ಬ, ಆಧುನಿಕ ನೃತ್ಯಗಳು, ಗೊಂಬೆ ಕುಣಿತ, ದೇಶಿ ನೃತ್ಯಗಳು, ಜಗ್ಗಲಗಿ, ಸುಗ್ಗಿ ನೃತ್ಯ ಸೇರಿದಂತೆ ಇನ್ನಿತರರ ಕಲೆಗಳನ್ನು ಪ್ರದರ್ಶಿಸಲಾಯಿತು.
ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶಿವು ಮೆಣಸಿನಕಾಯಿ, ಕೃಷ್ಣಾ ಗಂಡಗಾಳೇಕರ, ಬಂಗಾರೇಶ ಹಿರೇಮಠ, ಮಂಜುನಾಥ ಲೂತಿಮಠ, ಡಾ| ಆನಂದಪ್ಪ ಜೋಗಿ, ಮನೀಶ ಶಿಂಧೆ, ಚನ್ನು ವಸ್ತ್ರದ, ಪ್ರಕಾಶ ಕ್ಷತ್ರಿ, ಮನು ಸೇರಿದಂತೆ ಮೊದಲಾದವರು ಇದ್ದರು.