Advertisement

ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು: ಪಯ್ಯಡೆ

12:44 PM Dec 22, 2017 | |

ಡೊಂಬಿವಲಿ: ವಿಶ್ವದ ಅತ್ಯಂತ ಶ್ರೇಷ್ಟ ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆಯೂ ಒಂದಾಗಿದೆ. ಅದರ ಬಗ್ಗೆ ಕೀಳರಿಮೆ ತೋರದೆ ನಮ್ಮ ಸಿರಿವಂತ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಲು ಕಂಕಣಬದ್ಧರಾಗಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

Advertisement

ಡಿ. 18ರಂದು  ಡೊಂಬಿವಲಿ ಪೂರ್ವದ ಸಾವಿತ್ರಿಭಾಯಿ ಫುಲೆ ಸಭಾಗೃಹದಲ್ಲಿ ನಡೆದ ಸುವರ್ಣ ಮಹೋತ್ಸವ ಸಂಭ್ರದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ವಿದ್ಯಾಲಯದ ಮಾಧ್ಯಮಿಕ ವಿಭಾಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿಯೇ ಜ್ಞಾನಾರ್ಜನೆ ಮಾಡಿದ ಎಷ್ಟೋ ಜನ ರಾಷ್ಟ್ರದಲ್ಲಿ ಅನೇಕ ಉಚ್ಚಸ್ಥಾನ ಹೊಂದಿ ಸಾಧನೆಯ ಶಿಖರವನ್ನೇರಿದ್ದು, ನಾವು ಕನ್ನಡಿಗರು ಇತರ ಭಾಷೆಗಳನ್ನು ಗೌರವಿಸೋಣ. ಮಕ್ಕಳಲ್ಲಿ ಜ್ಞಾನ ದೀವಿಗೆಯನ್ನು ಹಚ್ಚುವ ಕಾರ್ಯ ಶಿಕ್ಷಕರದ್ದಾಗಿದ್ದರೆ, ಅವರಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಪಾಲಕರದ್ದಾಗಿದೆ. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘದ ಜ್ಞಾನದಾಸೋಹದ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಹೇಳಿ ಸಂಘದ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಅಭಿನಂದಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನೋವೈದ್ಯ ಡಾ| ಹರೀಶ್‌ ಶೆಟ್ಟಿ ಅವರು ಮಾತನಾಡಿ, ವಿದ್ಯೆ ಯಾರೂ ಕದಿಯಲಾರದ ಅಮೂಲ್ಯ ಸಂಪತ್ತು. ಅಂತಹ ವಿದ್ಯೆಯನ್ನು ಇನ್ನೊಬ್ಬರಿಗೆ ನೀಡಿದರೆ, ಅದು ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ. ಮಕ್ಕಳು ಕನಸುಗಳನ್ನು ಕಾಣುವ ಜೊತೆಗೆ ಅವುಗಳನ್ನು ನನಸಾಗಿಲು ಅವಿರತವಾಗಿ ಶ್ರಮಿಸಿದರೆ, ಕಂಡ ಕನಸುಗಳು ನನಸಾಗುವುದು ನಿಶ್ಚಿತ. ಮೊಬೈಲ್‌ ವ್ಯಾಮೋಹದಿಂದ ಮಕ್ಕಳು ದೂರವಿದ್ದು, ಆಟೋಟಗಳತ್ತ ತಮ್ಮ ಗಮನ ಹರಿಸುವುದು ಅವಶ್ಯಕವಾಗಿದೆ ಎಂದರು.

ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಮಾತನಾಡಿ, ನಾವು ಜೀವನದಲ್ಲಿ ಏನಾದರೂ ಸಾಧಿಸಿದ್ದರೆ ಅದು ಹೆತ್ತವರ ಹಾಗೂ ಗುರುಗಳ ಕೊಡುಗೆಯಾಗಿದೆ. ಅವರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಆದ್ದರಿಂದ 
ನಾವು ದಿನನಿತ್ಯ ಈ ಮೂವರನ್ನು ಗೌರವಿಸಬೇಕು. ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ವಿದ್ಯಾಲಯದ ಶಿಕ್ಷಣ ಮತ್ತು ಸಾಂಸ್ಕೃತಿಕ ಬೆಳವಣಿಗೆ ಅಭಿನಂದನೀಯವಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳಾದ ಡಾ| ವಿ. ಎಂ. ಶೆಟ್ಟಿ, ದೇವದಾಸ್‌ ಕುಲಾಲ್‌ ಹಾಗೂ ಚಿತ್ತರಂಜನ್‌ ಆಳ್ವ ಅವರು ಅತಿಥಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಡಾ| ದಿಲೀಪ್‌ ಕೋಪರ್ಡೆ, ರಮೇಶ್‌ ಕಾಖಂಡಕಿ, ಲೋಕನಾಥ ಶೆಟ್ಟಿ, ಅಜಿತ ಉಮಾರಾಣಿ, ಪ್ರಭು ಕೋತನಿ, ಕಸ್ತೂರಿ ಕರಿಲಿಂಗಣ್ಣವರ ಮೊದಲಾದವರು ಉಪಸ್ಥಿತರಿದ್ದರು.

Advertisement

ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಗುರುದೇವ್‌, ಸುಬ್ಬಯ್ಯ ಶೆಟ್ಟಿ, ಜಗನ್ನಾಥ ಶೆಟ್ಟಿ, ಜಗತ್ಪಾಲ ಶೆಟ್ಟಿ, ರಾಜೀವ ಭಂಡಾರಿ, ಸನತ್‌ ಕುಮಾರ್‌ ಜೈನ್‌, ಡಾ| ವಿ. ಎಸ್‌. ಅಡಿಗಲ್‌, ರಾಜೀವ ಭಂಡಾರಿ, ಮುರಳಿ ಶೆಟ್ಟಿ, ಸುಷ್ಮಾ ಶೆಟ್ಟಿ, ಯೋಗಿನಿ ಶೆಟ್ಟಿ, ಜಾನಕಿ ಗೌಡ, ವಿನೋದಾ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕಿ ಕಸ್ತೂರಿ ಕರಿಲಿಂಗಣ್ಣವರ ಹಾಗೂ ಕನ್ನಡ ಮಾಧ್ಯಮಿಕ ಮುಖ್ಯಶಿಕ್ಷಕಿ ಪ್ರಭು ಕೋತನಿ ವರದಿ ವಾಚಿಸಿದರು. ಮಧುಶ್ರೀ ಥಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಸುಪ್ರೀತಾ ಶೆಟ್ಟಿ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next