Advertisement

ಡೊಂಬಿವಲಿ ಕರ್ನಾಟಕ ಸಂಘ ಮಂಜುನಾಥ ಜೂ. ಕಾಲೇಜು ವಾರ್ಷಿಕೋತ್ಸವ

03:21 PM Feb 09, 2018 | Team Udayavani |

ಡೊಂಬಿವಲಿ:ಕಳೆದ ಐದು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನೂತನ ಕ್ರಾಂತಿಯನ್ನು ಮಾಡಿರುವ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಕತ್ವದ ಶಿಕ್ಷಣ ಸಂಕುಲವು ಸುಮಾರು ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಾತಿ, ಮತ, ಧರ್ಮವನ್ನು ಮರೆತು, ಶ್ರೀಮಂತ-ಬಡವನೆಂಬ ತಾರತಮ್ಯವಿಲ್ಲದೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಪರಿಸರದ ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯಪ್ರವೃತ್ತವಾಗಿದೆ. ಮಕ್ಕಳು ದೇಶದ ಮುಂದಿನ ಭವಿಷ್ಯವಾಗಿದ್ದು, ಅವರಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಮಾತ್ರ ಅವರು ಆದರ್ಶ ಪ್ರಜೆಗಳಾಗಿ ಬಾಳುತ್ತಾರೆ ಎಂಬ ಧ್ಯೇಯೋದ್ದೇಶದೊಂದಿಗೆ ಸಂಘವು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ನುಡಿದರು.

Advertisement

ಜ. 30 ರಂದು ಡೊಂಬಿವಲಿ ಪೂರ್ವದ ಸಾವಿತ್ರಿಭಾಯಿ ಫುಲೆ ಸಭಾಗೃಹದಲ್ಲಿ ನಡೆದ   ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ಜೂನಿಯರ್‌ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಘವು ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಹುಮ್ಮಸ್ಸಿನಲ್ಲಿದೆ. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಸಂಘದ ಸಂಪೂರ್ಣ ಸಹಕಾರವಿದೆ ಎಂದು ನುಡಿದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಜೀವನ ರೂಪಿಸಿಕೊಳ್ಳುವಂತೆ ಕರೆನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಓಂ ಪ್ರಕಾಶ್‌ ಧೂತ್‌ ಅವರು ಮಾತನಾಡಿ, ಡೊಂಬಿವಲಿ ಕರ್ನಾಟಕ ಸಂಘದೊಂದಿಗೆ 45 ವರ್ಷಗಳ ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ. ಐವತ್ತು ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ವಟವೃಕ್ಷವಾಗಿ ಬೆಳೆದು ನಿಂತಿದೆ ಎನ್ನಲು ಸಂತೋಷವಾಗುತ್ತಿದೆ. ಡೊಂಬಿವಲಿ ಮಹಾನಗರಲ್ಲಿ ಶಿಕ್ಷಣ ಕ್ರಾಂತಿಯನ್ನೇ ಈ ಸಂಸ್ಥೆ ಮಾಡಿದೆ. ನನ್ನ ಮೂವರು ಮಕ್ಕಳು ಮಂಜುನಾಥ ವಿದ್ಯಾಲಯದಲ್ಲಿ ಕಲಿತು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿತರೆ ತಮ್ಮ ಮುಂದಿನ ಭವಿಷ್ಯ ನಿರ್ಮಿಸಲು ಸುಲಭವಾಗುತ್ತದೆ. ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಇಲ್ಲಿನ ವಿದ್ಯಾರ್ಥಿಗಳು ನಿಜವಾಗಿಯೂ ಧನ್ಯರು. ಆರ್ಥಿಕವಾಗಿ ಹಿಂದುಳಿದವರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಸಂಸ್ಥೆಯ ಕಾರ್ಯ ಅಭಿನಂದನೀಯವಾಗಿದೆ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಪ್ರಾಂಶುಪಾಲ ಡಾ| ವಿ. ಎಸ್‌. ಅಡಿಗಲ್‌ ಅವರು  ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ, ಆಟೋಟ ಸ್ಪರ್ಧೆಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆ ನೂತನ ಕ್ರಾಂತಿಯನ್ನೇ ಮಾಡಿದೆ. ಥಾಣೆ ಜಿಲ್ಲೆಯಲ್ಲೇ ಉತ್ತಮ ಕಾಲೇಜು ಎಂಬ ಹೆಗ್ಗಳಿಕೆಯನ್ನು ನಾವು ಹೊಂದಿದ್ದೇವೆ. ಇದಕ್ಕೆ ಸಂಸ್ಥೆಯ ಆಡಳಿತ ಸಮಿತಿ, ಶಿಕ್ಷಕವೃಂದ, ಪಾಲಕ-ಪೋಷಕರ ಸಂಪೂರ್ಣ ಸಹಕಾರ ಕಾರಣವಾಗಿದೆ ಎಂದರು.

ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡೊಂಬಿವಲಿ ನಗರದಲ್ಲಿ ಮಕ್ಕಳ ಭವಿಷ್ಯ ನಿರ್ಮಿಸಬೇಕು ಎಂಬ ಉದ್ಧೇಶದಿಂದ ನಮ್ಮ ಹಿರಿಯರು ಸ್ಥಾಪಿಸಿದ ಈ ಸಂಸ್ಥೆಯನ್ನು  ವ್ಯವಸ್ಥಿತವಾಗಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾಲೇಜನ್ನು ನಡೆಸಲು ಕಷ್ಟವಾದರೂ ಧೃತಿಗೆಡದೆ ಉತ್ತಮ ಶಿಕ್ಷಣವನ್ನು ನೀಡುತ್ತೇನೆ ಎಂಬ ಭರವಸೆ ನಮಗಿದೆ. ಶಿಕ್ಷಣದ ನೂತನ ಆವಿಷ್ಕಾರಗಳೊಂದಿಗೆ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿದೆ ಎಂದರು.

Advertisement

ಸಂಘದ ಉಪಕಾರ್ಯಾಧ್ಯಕ್ಷ ಡಾ| ವಿಜಯ್‌ ಎಂ. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಇತ್ತೀಚೆಗೆ ಆಗ್ನಿ ಅವಘಡ ಸಂದರ್ಭದಲ್ಲಿ ಮಹಿಳೆಯೊಬ್ಬರ ಪ್ರಾಣ ರಕ್ಷಿಸಿದ ಕಾಲೇಜಿನ ವಿದ್ಯಾರ್ಥಿನಿಯನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಶಿಕ್ಷಕಿ ಸುಶೀಲಾ ಅವರು ಕಾರ್ಯಕ್ರಮ ನಿರ್ವಹಿಸಿದರು. ಬಬಿತಾ ಬೋರಾ ವಂದಿಸಿದರು. 

ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಡಾ| ವಿಜಯ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌, ಲೋಕನಾಥ ಶೆಟ್ಟಿ, ರಮೇಶ್‌ ಕಾಖಂಡಕಿ, ಡಾ| ವಿ. ಎಸ್‌. ಅಡಿಗಲ್‌, ಡಾ| ಪಾರ್ವತಿ ಪಾಟೀಲ್‌, ಶ್ರುತಿ ಸಾವಂತ್‌ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡಿತು. ವಾರ್ಷಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ ಇನ್ನಿತರ ಕಾರ್ಯಕ್ರಮಗಳು ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next