ಸಿಯೋಲ್: ಶ್ವಾನವು ನಂಬಿಕಸ್ಥ ಪ್ರಾಣಿ ಎನ್ನುವುದು ಕಾಲ ಕಾಲಕ್ಕೆ ಸಾಬೀತಾಗಿದೆ. ಆದರೆ, ದಕ್ಷಿಣ ಕೊರಿಯಾದಲ್ಲಿ ಮಾಜಿ ಅಧ್ಯಕ್ಷ ಮೂನ್ ಜೆ ಇನ್ ಅವರಿಗೆ ಉಡುಗೊರೆಯಾಗಿ ಸಿಕ್ಕ ಶ್ವಾನಗಳೇ ಈಗ ವಿವಾದದ ಕೇಂದ್ರಬಿಂದುವಾಗಿವೆ.
ಪುಂಗ್‌ಸಾನ್ ಎಂಬ ತಳಿಯ ಎರಡು ಶ್ವಾನಗಳನ್ನು 2018ರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮೂನ್ ಜೆ ಇನ್ ಅವರಿಗೆ ನೀಡಿದ್ದರು.
ಕಾನೂನು ಮತ್ತು ವಿತ್ತೀಯ ಸಂಕಷ್ಟ ಕಾರಣದಿಂದ ಈ 2 ಶ್ವಾನಗಳನ್ನು ಸಾಕಲು ಅಸಾಧ್ಯ ಎಂದು ಮಾಜಿ ಅಧ್ಯಕ್ಷರು ಹೇಳಿಕೊಂಡಿದ್ದಾರೆ.
“ಗೋಮಿ’ ಮತ್ತು “ಸೋಂಗ್ಗಾಂಗ್’ ಎಂಬ ಹೆಸರಿನ ಮುದ್ದಿನ ನಾಯಿಗಳಿಗೆ ಈಗ ಅತಂತ್ರದ ಸ್ಥಿತಿ ಎದುರಾಗಿದೆ. ಹಾಲಿ ಅಧ್ಯಕ್ಷ ಯೂನ್ ಸುಕ್-ಯೋಲ್ ಅವರು ಶ್ವಾನಗಳನ್ನು ಅಧ್ಯಕ್ಷರ ಅರಮನೆಯ ವ್ಯಾಪ್ತಿಗೆ ಸೇರಿಸುವ ಬಗ್ಗೆ ಚರ್ಚೆ ನಡೆಸಲು ಕೂಡ ಅವಕಾಶ ನೀಡುತ್ತಿಲ್ಲ ಎಂದು ಮಾಜಿ ಅಧ್ಯಕ್ಷ ಮೂನ್ ಆರೋಪಿಸಿದ್ದಾರೆ.
ದ.ಕೊರಿಯಾ ಗೃಹ ಸಚಿವಾಲಯ ಕೂಡ ಅವುಗಳ ಪಾಲನೆಗೆ ಒಪ್ಪಿರಲಿಲ್ಲ. ಹೀಗಾಗಿ, ಅವುಗಳ ಪಾಲನೆಯ ಹೊಣೆಯನ್ನು ಅಧ್ಯಕ್ಷರ ನಿವಾಸದ ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದು ಮಾಜಿ ಅಧ್ಯಕ್ಷ ಮೂನ್ ಜೆ ಇನ್ ಮನವಿ ಮಾಡಿದ್ದರು. ಅದಕ್ಕೆ ಸೂಕ್ತವಾದ ಸ್ಪಂದನೆ ಸಿಕ್ಕಿರಲಿಲ್ಲ.
ಭತ್ಯೆ ನೀಡಲು ಕ್ರಮ?:
ಉಡುಗೊರೆಯಾಗಿ ಸಿಕ್ಕಿದ ಶ್ವಾನಗಳ ಪಾಲನೆ ಕಷ್ಟ ಎಂದು ಹೇಳಿದ ಮಾಜಿ ಅಧ್ಯಕ್ಷರಿಗೆ ಪ್ರತಿ ತಿಂಗಳು 1,800 ಡಾಲರ್ ಭತ್ಯೆ ನೀಡುವ ಬಗ್ಗೆಯೂ ಗೃಹ ಸಚಿವಾಲಯದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರಂತೆ!