ನಾಸಿಕ್ : ಮನೆಯಲ್ಲಿ ಶ್ವಾನಗಳಿದ್ದರೆ ಮನೆಮಂದಿಗೆ ಯಾವುದೇ ಭಯವಿಲ್ಲ ಅದೂ ರಾತ್ರಿ ಹೊತ್ತು ಕಳ್ಳ ಕಾಕರ ಹಾವಳಿ ಇರುವುದರಿಂದ ಹೆಚ್ಚಿನವರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಹೀಗೆ ಸಾಕಿದ ನಾಯಿಗಳು ಅದೆಷ್ಟೋ ದರೋಡೆಕೋರರಿಂದ, ಕಾಡು ಪ್ರಾಣಿಗಳಿಂದ ತನ್ನ ಮನೆ ಮಂದಿಯನ್ನು ರಕ್ಷಿಸಿದ ಉದಾಹರಣೆಯೂ ಇದೆ.
ಅದೇ ರೀತಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ ಚಿರತೆಯೊಂದನ್ನು ನಾಯಿಗಳು ಸೇರಿ ಹಿಮ್ಮೆಟ್ಟಿಸಿದ ಘಟನೆ ಬೆಳಕಿಗೆ ಬಂದಿದೆ.
ನಾಸಿಕ್‌ನ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿರುವ ಮನೆಯೊಂದರ ಕಾಂಪೌಂಡ್ ಹಾರಿ ಒಳ ಪ್ರವೇಶಿಸಿದ ಚಿರತೆಯೊಂದು ಮನೆಯ ಆವರಣದಲ್ಲಿ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದೆ ಈ ವೇಳೆ ಅಲ್ಲೇ ಇದ್ದ ಇನ್ನೊಂದು ಶ್ವಾನ ಎಚ್ಚರಗೊಂಡು ಚಿರತೆ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಗಾಬರಿಗೊಂಡ ಚಿರತೆ ತನ್ನ ರಕ್ಷಣೆಗೆ ಮುಂದಾಗಿ ಸ್ಥಳದಿಂದ ಕಾಲ್ಕಿತ್ತಿದೆ.
ಘಟನೆಯ ದೃಶ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎರಡು ನಾಯಿಗಳು ಜೊತೆಯಾಗಿ ದಾಳಿಗೆ ಮುಂದಾದ ಚಿರತೆಯನ್ನು ಹಿಮ್ಮೆಟ್ಟಿಸಿದೆ ಎಂಬುದನ್ನು ದೃಶ್ಯದಲ್ಲಿ ಕಾಣಬಹುದು.
ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಇಲ್ಲಿ ಒಂದೇ ಶ್ವಾನ ಇರುತ್ತಿದ್ದರೆ ಬಹುಶ ಬದುಕುಳಿಯುತ್ತಿರಲಿಲ್ಲವೇನೋ ಆದರೆ ಇನ್ನೊಂದು ಶ್ವಾನ ಬಂದಿರುವುದರಿಂದ ಚಿರತೆ ಗಾಬರಿಗೊಂಡು ಓಡಿ ಹೋಗಿದೆ ಹಾಗಾಗಿ ಈ ಶ್ವಾನದ ಜೀವ ಉಳಿಯಿತು.