Advertisement
ಮಖೆ ಮಳೆಯಲ್ಲಿ ನಾಯಿಗಳು ಎಲ್ಲೆಂದರಲ್ಲಿ ಲಜ್ಜೆಗೆಟ್ಟು ಲಲ್ಲೆಗರೆದ ಕುರುಹಾಗಿ ಕೇರಿಯುದ್ದಕ್ಕೂ ಅಲ್ಲಲ್ಲಿ ನಾಯಿಮರಿಗಳ ಗುಂಪು ಸೃಷ್ಟಿಯಾಗಿವೆ. ಅಂಥ ಒಂದು ಗುಂಪಿನ ನಾಯಿಮರಿಗಳು ನಮ್ಮ ಕಂಪೌಂಡಿನೊಳಗೆ ಲಗ್ಗೆಯಿಟ್ಟಂತೆನಿಸಿತು. ದಿಟ್ಟಿಸಿ ಶಬ್ದ ಬಂದೆಡೆ ನಿಟ್ಟಿಸಿದರೆ, ಎರಡು ಗೇಟಿನಿಂದ ಒಳ ಬಂದಿದ್ದವು. ನಿನ್ನೆ ಮೊನ್ನೆಯವರೆಗೂ ಬಲು ದೂರದಲ್ಲಿದ್ದ ಅವು ಬಹುಶಃ ವಾಕಿಂಗ್ ವೀರರ ಬೆನ್ನುಹತ್ತಿ ನಮ್ಮನೆಯತ್ತ ಸುಳಿದಿದ್ದವು. ಅದೇ ಸಮಯಕ್ಕೆ ಕಾರೊಂದು ಕರ್ಕಶವಾಗಿ ಹಾನುì ಬಾರಿಸುತ್ತಾ ಹಾದು ಹೋಗಿದ್ದೇ ತಡ, ಕುನ್ನಿ ಮರಿಗಳು ಮತ್ತೂಮ್ಮೆ “ಅಂಯ್… ಅಂಯ್… ಅಂಯ್…’ ಎಂದು ಅಂಜಿಕೊಂಡು ಕಂಪೌಂಡಿನ ಮತ್ತೂ ಒಳಗೆ ಓಡಿ ಬಂದವು.
Related Articles
Advertisement
ಇದನ್ನು ನಿರೀಕ್ಷಿಸಿದ್ದ ಆ ಮರಿಗಳೂ ಬಹುಶಃ ತಮ್ಮದೇ ಪ್ಲಾನ್ ಮಾಡಿಕೊಂಡಿದ್ದವೇನೋ? ನಾನು ಆ ಕಡೆ ಓಡ್ತೀನಿ, ನೀನು ಈ ಕಡೆ ಓಡು ಎಂದು ನನ್ನನ್ನು ಕನ್‌ಫ್ಯೂಸ್ ಮಾಡಲು ಎರಡರಲ್ಲಿ ಒಂದು ಮರಿ ಗೇಟಿನತ್ತ ಓಡಿದರೆ, ಇನ್ನೊಂದು ಹೂವಿನ ಗಿಡಗಳತ್ತ ನುಗ್ಗಿತು. ಗೇಟಿನತ್ತ ಧಾವಿಸಿದ ಮರಿಯನ್ನೇನೋ ಸುಲಭವಾಗಿ ಹೊರಗೋಡಿಸಿದೆ. ಹೂಗಿಡಗಳತ್ತ ಸಾಗಿದ ಮರಿಯನ್ನು ಅರಸುತ್ತ ನಡೆದೆ. ನಾ ಹತ್ತಿರ ಹೋದೊಡನೆ ಬೆದರಿದ ಶುನಕಪುತ್ರ/ಪುತ್ರಿ ಶರಣಾಗತನಾದಂತೆ ನಿಶ್ಶಬ್ದವಾಗಿ ನೆಲಕ್ಕಂಟಿಕೊಂಡು ಮಲಗಿ ದೈನ್ಯದಿಂದ ನೋಡತೊಡಗಿತು. ಹೊಡೆಯಲು ಮನಸ್ಸಾಗದೇ ಎತ್ತಿದ ಕೈ ಕೆಳಗಿಳಿಸಿ ಈಟಿಯಿಂದ ಚುಚ್ಚುವ ಭಂಗಿಯಲ್ಲಿ ಪೊರಕೆಯನ್ನಾಡಿಸುತ್ತ “ಹುಷ್ ಹುಷ್’ ಎಂದೆ. ನನ್ನಿಂದ ಇನ್ನು ಅಪಾಯವಿಲ್ಲ ಎಂದೆಣಿಸಿ ಕೆಲ ಸೆಕೆಂಡಿನಲ್ಲೇ ಅದು ಚೇತರಿಸಿಕೊಂಡು ಇನ್ನೊಂದು ಪೊದೆಯತ್ತ¤ ಧಾವಿಸಿತು. ಬರಿಗಾಲಿನಲ್ಲಿದ್ದ ನಾನು ನಾಚಿಕೆೆ ಮುಳ್ಳಿನ ಪ್ರದೇಶದಲ್ಲಿ ಜಾಗರೂಕತೆಯಿಂದ ಅದರತ್ತ ಓಡಬೇಕಾಯಿತು. ಮುಂದೋಡುತ್ತಿದ್ದ ಮರಿ ಅಚಾನಕ್ ನೆಲವನ್ನು ಮೂಸುತ್ತ ಒಂದೆಡೆ ಸುತ್ತತೊಡಗಿತು. ಸ್ವಲ್ಪ ಹೊತ್ತಲ್ಲೇ ತನ್ನ ಬಾಲವನ್ನೆತ್ತಿ ಗಿಡವೊಂದರ ಬುಡದತ್ತ ಪೃಷ್ಠವನ್ನು ತಗ್ಗಿಸಿ ಶೌಚಕ್ಕೆ ತೊಡಗಿತು.
ಗೇಟಿನ ಹೊರಗೋಡಿದ ನಾಯಿಮರಿಗೆ ಸ್ವಲ್ಪ “ಅಕ್ಕಲ್’ ಇದೆ, ತನ್ನನ್ನು ರಕ್ಷಿಸಿಕೊಳ್ಳಲು ಹೊರಗೋಡಿದೆ, ಈ ನಾಯಿಮರಿಗೆ ನಮ್ಮ ವಠಾರ ಇಷ್ಟವಾಗಿರಬೇಕು, ಅದಕ್ಕೇ ಮತ್ತೂ ಮತ್ತೂ ಒಳ ನುಸುಳುತ್ತಿದೆ ಎನ್ನುವ ನನ್ನ ಭ್ರಮೆ ಆ ಹೊತ್ತಲ್ಲಿ ನುಚ್ಚು ನೂರಾಯಿತು. ನಮ್ಮ ನಾಯಕರು ಕರೆಗೊಟ್ಟಿರುವ ಸ್ವತ್ಛ ಭಾರತದ ಕಲ್ಪನೆಯ ಸಾಕಾರ ಮಾಡಲು ರಸ್ತೆಯನ್ನು ಮಲಿನಮಾಡಲು ಮನಸ್ಸಾಗದೇ ನಮ್ಮ ಅಂಗಳಕ್ಕೆ ಬಂದಿತ್ತೇನೋ? ನಮ್ಮ ಪಾಲಿಗೆ ಸ್ವತ್ಛವಾಗಿದ್ದ ಅಂಗಳವು ಅದಕ್ಕೆ ಶೌಚಾಲಯದಂತೆ ಕಂಡಿರಬೇಕು. ಆದರೆ, ಶೌಚಾಲಯದ ಯಾವ ಕುರುಹೂ ಇಲ್ಲದ ಪ್ರದೇಶವನ್ನು ಮಲಿನಗೊಳಿಸಲು ಅದಕ್ಕೆ ಮನಸ್ಸು ಹ್ಯಾಗೆ ಬಂತೋ ತಿಳಿಯಲಿಲ್ಲ. ಅಥವಾ, ಮುಂದಾನೊಂದು ಕಾಲದಲ್ಲಿ ಕೊಳೆತು ಗೊಬ್ಬರವಾಗಬಹುದಾದ ವಸ್ತುವನ್ನು ಗಿಡದ ಬುಡಕ್ಕೇ ವಿಸರ್ಜಿಸಿದರೆ ಒಳ್ಳೆಯದೆಂಬ ಬುದ್ಧಿವಂತಿಕೆ ಈ ನಾಯಿಮರಿಗಿದ್ದಿರಬಹುದು. ಇಲ್ಲದಿದ್ದರೆ, ವೈರಿ ಪೊರಕೆ ಹಿಡಿದು ಎದುರಲ್ಲೇ ನಿಂತಿರುವಾಗ ಸ್ವತ್ಛಂದವಾಗಿ ನಿಸರ್ಗದ ಕರೆಗೆ ಓಗೊಡುವುದು ಸಾಧ್ಯವಿತ್ತೇ? ನಾಯಿಮರಿಯನ್ನು ಓಡಿಸುವ ಉತ್ಸಾಹವನ್ನು ಬಲವಂತವಾಗಿ ಹತ್ತಿಕ್ಕತೊಡಗಿದೆ. ಅದರ ವಿಸರ್ಜನೆಯಾಗುವ ತನಕವೂ ತೆಪ್ಪಗಿರಲೇಬೇಕಾಯಿತು. ಇಲ್ಲವಾದರೆ, ಓಡುವ ನಾಯಿಯ ಶೌಚವು ರಂಗೋಲಿಯೋಪಾದಿಯಲ್ಲಿ ಉದ್ದನೆಯ ಸಾಲಾಗಿಬಿಟ್ಟರೆ ಬರಿಗಾಲಿನ ನನಗೇ ಅಪಾಯ ಎಂದು ಅವಡುಗಚ್ಚಿ ಸುಮ್ಮನಿದ್ದೆ. ಇದೇ ಸಮಯವನ್ನು ಸಾಧಿಸಿ, ಶೌಚ ಪೂರೈಸಿದ್ದ ನಾಯಿಮರಿ ಬೇಲಿಯ ಮುಳ್ಳುಕಂಟಿಗಳತ್ತ ಧಾವಿಸಿತು. ಮೆಟ್ಟು ಮೆಟ್ಟದಿದ್ದ ನಾನು ಇನ್ನೂ ಮುಂದುವರೆಯುವುದು ಸಾಧ್ಯವಿರಲಿಲ್ಲ. ಒಂಬತ್ತು ಗಂಟೆಗೆ ಡ್ನೂಟಿಗೆ ಹೋಗಲಿಕ್ಕಿದ್ದುದರಿಂದ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿ ಥತ್ ಎಂದು ಹ್ಯಾಪು ಮೋರೆಯಲ್ಲಿ ಹಿಂದಿರುಗಿದ್ದೆ.
ಡ್ನೂಟಿ ಮುಗಿಸಿ ಸಂಜೆ ಮನೆಗೆ ವಾಪಸಾದಾಗ ಅಂಗಳದಲ್ಲಿ ನಾಯಿಮರಿಗಳೊಂದಿಗೆ ಮಗಳು ಆಟವಾಡುವ ನಿರೀಕ್ಷೆಯಲ್ಲಿದ್ದವನಿಗೆ ಆ ಕುರುಹುಗಳೊಂದೂ ಕಾಣಲಿಲ್ಲ. ಅದಿತಿಯ ಕಣ್ಣಿಗೆ ಬಹುಶಃ ನಾಯಿಮರಿಗಳು ಬಿದ್ದಿರಲಿಲ್ಲ. ಗೇಟಿನಾಚೆ ಓಡಿದ್ದ ನಾಯಿಮರಿ ಗೇಟಿನೊಳಗಿದ್ದ ಮರಿಯನ್ನು ತನ್ನ ಜೊತೆ ಕರೆದೊಯ್ದಿತ್ತೇನೋ. ಒಟ್ಟಿನಲ್ಲಿ ನಮ್ಮ ಕಂಪೌಂಡು ಶುನಕ ರಹಿತವಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಕೆಲ ನಾಯಿಮರಿಗಳು ಧಾಂಗುಡಿಯಿಡಬಹುದು. ನಾವಂತೂ ಸಾಕುವುದಿಲ್ಲ. ಯಾರಿಗಾದರೂ ನಾಯಿಮರಿ ಬೇಕಿದ್ದರೆ ಸಂಪರ್ಕಿಸಿ.
ಮನೋಜ ಗೋಡಬೋಲೆ