ರಾಜಸ್ಥಾನ : ನಾಯಿಯ ಬಾಯಿಗೆ ಬಟ್ಟೆ ಕಟ್ಟಿ ಅದನ್ನು ಕಾರಿಗೆ ಕಟ್ಟಿದ ಚಾಲಕ ನಗರ ತುಂಬೆಲ್ಲಾ ಎಳೆದೊಯ್ದು ವಿಕೃತಿ ಮೆರೆದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಈ ಘಟನೆ ನಡೆದಿದ್ದು ರಾಜಸ್ಥಾನದ ಜೋಧ್ ಪುರದಲ್ಲಿ.
ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ನಾಯಿಯನ್ನು ಕಾರಿಗೆ ಕಟ್ಟಿ ಹಿಂಸೆ ನೀಡಿದ ಘಟನೆ ಸಾಕಷ್ಟು ನೋಡಿದ್ದೇವೆ ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜೀವ ಕಾಪಾಡಬೇಕಾದ ವೈದ್ಯ ನಾಯಿಯನ್ನು ಈ ರೀತಿಯಾಗಿ ಕಾರಿಗೆ ಕಟ್ಟಿ ಹಿಂಸೆ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಅಂದ ಹಾಗೆ ವಿಕೃತಿ ಮೆರೆದ ವೈದ್ಯನ ಹೆಸರು ಡಾ.ರಜನೀಶ್ ಗಾಲ್ವಾ ಎನ್ನಲಾಗಿದೆ.
ವಿಡಿಯೋದಲ್ಲಿ ಕಾಣುವಂತೆ, ನಾಯಿ ಬೊಬ್ಬೆ ಹೊಡೆಯದಂತೆ ಬಾಯಿಗೆ ಬಟ್ಟೆಯಿಂದ ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ಅದನ್ನು ತನ್ನ ಕಾರಿಗೆ ಕಟ್ಟಿ ಎಳೆದೊಯ್ಯುವ ವಿಡಿಯೋ ಕಾಣಬಹುದು. ಈ ವಿಡಿಯೋವನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು ಅಲ್ಲದೆ ಅದನ್ನು ಕಂಡ ಕೆಲವರು ಶ್ವಾನದ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ವೈದ್ಯ ಮಾತ್ರ ಕಾರು ನಿಲ್ಲಿಸದೆ ಮುಂದೆ ಚಲಿಸಿದ್ದಾನೆ ಆದರೆ ಸಾರ್ವಜನಿಕರು ಮತ್ತೆ ಕಾರನ್ನು ಅಡ್ಡಕಟ್ಟಿ ಶ್ವಾನದ ರಕ್ಷಣೆ ಮಾಡಿದ್ದಾರೆ.
ಈ ವಿಡಿಯೋ ಅನ್ನು ಸ್ಥಳೀಯರು ಎನ್ಜಿಓಗೆ ಕಳಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ನಾಯಿಯ ವಿಡಿಯೋ ನೋಡಿದ ಎನ್ಜಿಓ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಆ ಶ್ವಾನವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಡಾಗ್ ಹೋಮ್ ಫೌಂಡೇಶನ್ ನಾಯಿಯನ್ನು ಎಳೆದೊಯ್ದ ವ್ಯಕ್ತಿಯ ಮಾಹಿತಿ ಕಲೆಹಾಕಿದ್ದು ಆತನನ್ನು ಡಾ. ರಜನೀಶ್ ಗಾಲ್ವಾ ಎಂದು ಹೇಳಿಕೊಂಡಿದ್ದಾರೆ ಅಲ್ಲದೆ ವೈದ್ಯನ ಹೇಳಿಕೆಯಂತೆ ತನ್ನ ಮನೆಯ ಪಕ್ಕದಲ್ಲೇ ಬೀದಿ ನಾಯಿ ಅಡ್ಡಾಡುತ್ತಿದ್ದು ಇದರಿಂದ ಕಿರಿಕಿರಿಯಾಗುತ್ತಿತ್ತು ಅದಕ್ಕಾಗಿ ಅದನ್ನು ಬೇರೆಡೆಯೆ ಬಿಟ್ಟು ಬರಲು ಈ ರೀತಿಯಾಗಿ ಕರೆದೊಯ್ಯುತ್ತಿದ್ದೆ ಎಂದು ಹೇಳಿದ್ದಾರೆ.
ಆದರೆ ರಜನೀಶ್ ಗಾಲ್ವಾ ಮಾಡಿದ ಕೆಲಸದಿಂದ ನಾಯಿಯ ಎರಡೂ ಕಾಲಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.