Advertisement

ರೈತರಿಗೆ ಬೆಳಗ್ಗೆ ನಾಯಿ, ರಾತ್ರಿ ಚಿರತೆ ಕಾಟ

02:50 PM Mar 20, 2023 | Team Udayavani |

ಕನಕಪುರ: ಕಾಡು ಪ್ರಾಣಿಗಳಿಂದ ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿದ್ದ ರೈತರಿಗೆ ಬೀದಿ ನಾಯಿಗಳ ಹಾವಳಿ ತಲೆನೋವಾಗಿ ಪರಿಣಮಿಸಿದೆ.

Advertisement

ರೈತರ ಕುರಿ, ಕೋಳಿ, ಮೇಕೆ ಹಸುವಿನಂತಹ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡುವುದು ಸಾಮಾನ್ಯವಾಗಿತ್ತು. ಈ ಆ ಸಾಲಿಗೆ ಬೀದಿ ನಾಯಿಗಳು ಸೇರ್ಪಡೆಗೊಂಡಿರುವುದು ರೈತರನ್ನು ಮತ್ತಷ್ಟು ಕಂಗಾಲಾಗಿಸಿವೆ.

ಬಲಿ: ಇತ್ತೀಚೆಗೆ ಹೆಚ್ಚಾಗುತ್ತಿರುವ ಬೀದಿ ನಾಯಿಗಳು ಕುರಿ, ಕೋಳಿ ಮತ್ತು ಮೇಕೆಗಳಂತಹ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ. ಇತ್ತೀಚಿಗೆ ತಾಲೂಕಿನ ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಕುರಿ, ಮೇಕೆಗಳು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾತನೂರು ಹೋಬಳಿಯ ಕಂಚನಹಳ್ಳಿ ಗ್ರಾಮದ ಕೃಷ್ಣಪ್ಪ, ಬಸವರಾಜು, ಲೋಕೇಶ್‌, ಪುಟ್ಟರಾಜು, ಕುಮಾರ ಸೇರಿದಂತೆ ಹಲವು ರೈತರು ಸಾಕಿದ್ದ ಕುರಿ, ಮೇಕೆಗಳ ಮೇಲೆ ಬೀದಿ ನಾಯಿಗಳು ಗುಂಪಾಗಿ ದಾಳಿ ನಡೆಸಿ ಬಲಿ ಪಡೆದಿವೆ.

ರಾತ್ರಿ ವೇಳೆ ಚಿರತೆಗಳು ದಾಳಿ ನಡೆಸಿದರೆ, ಹಗಲಿನ ವೇಳೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ರಕ್ಷಣೆಗೆ ಹೋದರೆ ಬೀದಿ ನಾಯಿಗಳು ತಮ್ಮ ಮೇಲೆ ಎರಗುತ್ತವೋ ಎಂಬ ಭಯದಲ್ಲೇ ರೈತರು ಅಸಹಾಯಕರಾಗಿದ್ದಾರೆ. ಮಾಂಸದ ರುಚಿ ಹತ್ತಿಸಿಕೊಂಡಿರುವ ಬೀದಿ ನಾಯಿಗಳಿಂದ ಕುರಿ, ಕೋಳಿ ಮೇಕೆಗಳ ಮೇಲೆ ದಾಳಿ ನಡೆಸುತ್ತಿವೆ. ಆದರೆ ಬೆಳಕಿಗೆ ಬರುತ್ತಿರುವುದು ಮಾತ್ರ ಬೆರಳೆಣಿಕೆ. ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲೂ ಬೀದಿ ನಾಯಿಗಳ ಸಂತತಿ ಮೀತಿ ಮೀರಿದೆ.

ಕಳೆದ 8-10 ವರ್ಷಗಳಿಂದಲೂ ಬೀದಿ ನಾಯಿಗಳ ಸಂತತಿಗೆ ಕಡಿವಾಣ ಹಾಕುವ ಗೋಜಿಗೆ ನಗರಸಭೆ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳು ಕಡಿವಾಣ ಹಾಕದಿರುವುದು ಬೀದಿ ನಾಯಿಗಳ ಸಂತತಿ ಹೆಚ್ಚಾಗಲು ಪ್ರಮುಖ ಕಾರಣ ಎಂಬುದು ಸಾರ್ವಜನಿಕರ ಆರೋಪ.

Advertisement

ಪರಿಹಾರವಿಲ್ಲ: ಕಾಡಿನಿಂದ ನಾಡಿಗೆ ಬಂದು ರೈತರ ಸಾಕು ಪ್ರಾಣಿಗಳ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿ ಬಲಿ ಪಡೆದರೆ ಅರಣ್ಯ ಇಲಾಖೆ ಇಷ್ಟೋ ಅಷ್ಟೋ ರೈತರಿಗೆ ಪರಿಹಾರ ಕೊಡುತ್ತದೆ. ಆದರೆ, ಬೀದಿ ನಾಯಿಗಳ ದಾಳಿಯಿಂದ ರೈತರ ಸಾಕು ಪ್ರಾಣಿಗಳು ಬಲಿಯಾದರೆ ಪರಿಹಾರ ಕೊಡುವವರು ಯಾರು ಎಂಬುದೇ ರೈತರ ಪ್ರಶ್ನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಹಲವಾರು ಕುಟುಂಬಗಳು ಕುರಿ, ಕೋಳಿ, ಮೇಕೆ ಸಾಕಾಣಿಕೆಯನ್ನೇ ಉಪ ಕಸುಬು ಹಾಗೂ ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ. ಈ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕನಸು ಕಾಣುತ್ತಿದ್ದಾರೆ. ಅಂತಹ ಕುಟುಂಬಗಳಿಗೆ ಹೆಚ್ಚಾಗುತ್ತಿರುವ ಬೀದಿ ನಾಯಿಗಳಿಂದ ಆಪತ್ತು ಎದುರಾಗುವ ಮುನ್ಸೂಚನೆ ಕಾಣುತ್ತಿದೆ.

ಆಕ್ರೋಶ: ನಗರ ಪ್ರದೇಶದಲ್ಲಿ ನಗರಸಭೆ, ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆ ಗ್ರಾಪಂಗಳು ಬೀದಿ ನಾಯಿಗಳ ಸಂತತಿಗೆ ಕಡಿವಾಣ ಹಾಕುವ ಜವಾಬ್ದಾರಿ ಹೊತ್ತಿವೆ. ಆದರೆ, ಅದನ್ನು ನಿಭಾಯಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ ಎಂಬುದು ಮಾತ್ರ ವಿಪರ್ಯಾಸ. ಸಂತಾನ ಹರಣ ಚಿಕಿತ್ಸೆ ಮೂಲಕ ಬೀದಿ ನಾಯಿಗಳ ಸಂತತಿಗೆ ಕಡಿವಾಣ ಹಾಕಲು ನಗರಸಭೆ ಮತ್ತು ಗ್ರಾಪಂಗಳಲ್ಲೂ ಅನುದಾನ ಬಳಸಿಕೊಳ್ಳಲು ಅವಕಾಶವಿದೆಯಾದರೂ ಕಡಿವಾಣ ಹಾಕಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಗಾಯಗೊಳಿಸಿದ್ದವು: ನಗರ ಪ್ರದೇಶದಲ್ಲೂ ಬೀದಿ ನಾಯಿಗಳ ಸಂತತಿ ಕಡಿಮೆ ಏನಿಲ್ಲ. ಕಳೆದ 6 ತಿಂಗಳ ಹಿಂದೆಯಷ್ಟೇ ನಗರದ ಬಾಣಂತ ಮಾರಮ್ಮ ಬಡಾವಣೆಯ ಬಾಲಕನ ಮೇಲೆ ಹತ್ತಾರು ಬೀದಿ ನಾಯಿಗಳ ಗುಂಪು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದವು. ಬಳಿಕ, ನಗರಸಭೆ ಅಧಿಕಾರಿಗಳು ಸಂತ್ರಸ್ಥ ಬಾಲಕನ ಕುಟುಂಬಕ್ಕೆ 10 ಸಾವಿರ ರೂ. ಸಹಾಯಧನ ದಂಡ ಕಟ್ಟಿಕೊಟ್ಟಿದ್ದರು. ಆದರೂ, ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ನಗರದಲ್ಲೂ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ನಸುಕಿನಲ್ಲೇ ಮನೆ ಮನೆಗೆ ಪತ್ರಿಕೆ ಹಂಚುವಾಗ ಬೀದಿ ನಾಯಿಗಳು ಮೇಲೆರುಗುತ್ತಿವೆ. ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. – ಸ್ಟುಡಿಯೋ ಚಂದ್ರು, ನಗರಸಭೆ ಸದಸ್ಯ

ಕಬ್ಬಾಳು ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಮಾಹಿತಿಯಿದೆ. ನಾಯಿ ನಿಯಂತ್ರಿಸಲು ಮುಂದಾದರೆ ಪ್ರಾಣಿ ದಯಾ ಸಂಘ ಅಡ್ಡಿಪಡಿಸುತ್ತದೆ. ಆದರೂ, ಇಒ ಬಳಿ ಮಾತನಾಡಿ ಸಮಸ್ಯೆಗೆ ಕ್ರಮ ವಹಿಸುತ್ತೇವೆ. – ಲೋಕೇಶ್‌, ಕಬ್ಟಾಳು ಗ್ರಾಪಂ ಪಿಡಿಒ

– ಬಿ.ಟಿ.ಉಮೇಶ್‌ ಬಾಣಗಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next