ಬೆಂಗಳೂರು: ಧಾರಾಕಾರ ಮಳೆ ವೇಳೆ ತನ್ನನ್ನು ಮನೆ ಮುಂದೆ ಕಟ್ಟಿಹಾಕಿದ್ದ ತನ್ನ ಮಾಲೀಕನನ್ನು, ನಾಯಿಮರಿಯೊಂದು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ!
ಕಳೆದ ಬುಧವಾರ ನಗರದಲ್ಲಿ ಸುರಿದ ಧಾರಾಕಾರ ಮಳೆ ನಡುವೆ ಕೋರಮಂಗಲದ ಮನೆಯೊಂದರ ಮುಂದೆ ಸತತ ಮೂರು ದಿನಗಳ ಕಾಲ ನಾಯಿ ಮರಿಯನ್ನು ಕಟ್ಟಿಹಾಕಲಾಗಿತ್ತು. ಮಳೆಯಲ್ಲಿ ನೆನೆಯುತ್ತಾ ನರಳುತಿದ್ದ ನಾಯಿ ಮರಿಯನ್ನು ಗಮನಿಸಿದ ಸ್ಥಳೀಯರು, ನಾಯಿ ಮರಿಯನ್ನು ಮನೆ ಒಳಗೆ ಕರೆದುಕೊಳ್ಳುವಂತೆ ಹಲವು ಬಾರಿ ಮಾಲೀಕರಿಗೆ ಮನವಿ ಮಾಡಿದ್ದಾರೆ.
ಮಳೆಯಲ್ಲಿ ನೆನೆದು ಚಳಿಗೆ ನಡುಗುತ್ತಿದ್ದ ನಾಯಿ ಮರಿಯ ನರಳಾಟ ನೋಡಿಯೂ ಮನೆ ಒಳಗೆ ಕರೆದುಕೊಳ್ಳದ ಕಲ್ಲು ಮನಸಿನ ಮಾಲೀಕರ ಮನಸ್ಥಿತಿಯನ್ನು ಅರಿತ ಸ್ಥಳೀಯರು, ಪ್ರಾಣಿ ರಕ್ಷಕ ಸಹಾಯವಾಣಿಗೆ ಕರೆ ಮಾಡಿ ನಾಯಿ ಮರಿಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಪ್ರಾಣಿ ರಕ್ಷಕ ಕಿರಣ್ ಕುಮಾರ್, ನಾಯಿ ಮರಿ ಮಾಲೀಕರ ವಿರುದ್ಧ ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ ಅಡಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಳಿಕ ನಾಯಿ ಮರಿಯನ್ನು ಸರ್ಜಾಪುರ ಬಳಿಯಿರುವ ಕೂಪಾ (ಕಂಪಾಶನ್ ಅನ್‌ಲಿಮಿಟೆಡ್ ಪ್ಯಾಶನೇಟ್ ಫಾರ್ ಅನಿಮಲ್) ಪ್ರಾಣಿ ಪುನರ್ವಸತಿ(ಸೆಕೆಂಡ್ ಚಾನ್ಸ್ ಸೆಂಟರ್) ಕೇಂದ್ರಕ್ಕೆ ನೀಡಲಾಗಿದೆ. ಸದ್ಯ ಪುನರ್ವಸತಿ ಕೇಂದ್ರದಲ್ಲಿ ಬೆಲೆಯುತ್ತಿರುವ ನಾಯಿ ಮರಿಯನ್ನು ಖಾಸಗಿ ವ್ಯಕ್ತಿ ದತ್ತು ಪಡೆದುಕೊಂಡಿದ್ದಾರೆ.
ಪ್ರಾಣಿಗಳ ಬಗ್ಗೆ ಪ್ರೀತಿ, ಕಾಳಜಿ ಇದ್ದರೆ ಮಾತ್ರ ಸಾಕಬೇಕು. ಕೇವಲ ಪ್ರತಿಷ್ಠೆಗೆ ಪ್ರಾಣಿ ಸಾಕುವ ಹಣವಂತರು, ಅವುಗಳನ್ನು ನೋಡಿಕೊಳ್ಳುವ ರೀತಿ ನಿಜವಾದ ಪ್ರಾಣಿ ಪ್ರಿಯರಿಗೆ ಬೇಸರ ಉಂಟುಮಾಡುತ್ತದೆ. ಪ್ರಾಣಿಗಳನ್ನು ಹಿಂಸಿಸುವ ಪ್ರಕರಣ ಎಲ್ಲೇ ಕಂಡು ಬಂದರೂ ಪ್ರಾಣಿ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಬೇಕು.
-ಕಿರಣ್ ಕುಮಾರ್, ಪ್ರಾಣಿ ರಕ್ಷಕ
ಮೂರು ದಿನಗಳ ಕಾಲ ಮನೆಯ ಮುಂದೆ ನಾಯಿ ಮರಿಯನ್ನು ಕಟ್ಟಿಹಾಕಲಾಗಿತ್ತು. ಮಳೆಯಲ್ಲಿ ನೆನೆಯುತಿದ್ದ ನಾಯಿ ಮರಿಯನ್ನು ಕಂಡ ಸ್ಥಳೀಯರು ದನ್ನು ಮನೆ ಒಳಗೆ ಕರೆದುಕೊಳ್ಳುವಂತೆ ಮಾಲೀಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ನಂತರ ಪ್ರಾಣಿ ರಕ್ಷಕರು ಬಂದು ನಾಯಿ ಮರಿಯನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ನೀಡಿದರು.
-ಸಮೃದ್ಧಿ ಪಾಂಡೆ, ಪ್ರತ್ಯಕ್ಷದರ್ಶಿ