Advertisement

ಸೂಡಿ ಉತ್ಸವ ನಡೆಸುವುದೇ ಸರ್ಕಾರ?

04:05 PM Jan 03, 2020 | Suhan S |

ಗಜೇಂದ್ರಗಡ: ನಾಡಿನ ಪ್ರವಾಸಿ ಆಕರ್ಷಕ ತಾಣಗಳಲ್ಲೊಂದಾದ ಸೂಡಿಯಲ್ಲಿ ಉತ್ಸವ ಆಗಬೇಕೆನ್ನುವ ಆಸೆ-ಒತ್ತಾಯ ಇಂದು ನಿನ್ನೆಯದಲ್ಲ. ಇದಕ್ಕೆ ದಶಕಗಳ ಬೇಡಿಕೆ ಇದೆ. ಈವರ್ಷವಾದರೂ ಸರ್ಕಾರ “ಸೂಡಿ ಉತ್ಸವ’ ಆಚರಿಸಲು ಮುಂದಾಗುವುದೇ ಎಂಬುದು ಇತಿಹಾಸ ಪ್ರಿಯರ, ಈ ನಾಡಿನ ಜನರ ಒತ್ತಾಸೆಯಾಗಿದೆ

Advertisement

ಕಲ್ಯಾಣ ಚಾಲುಕ್ಯರ ಕಾಲದ ಅಕ್ಕಾದೇವಿ ಆಡಳಿತದಲ್ಲಿ ವಿದ್ಯಾ ಕೇಂದ್ರವಾಗಿದ್ದ ಸೂಡಿ ಗ್ರಾಮವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಸರ್ಕಾರ “ಸೂಡಿ ಉತ್ಸವ’ ಮಾಡಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿದೆ. ಕಲೆ, ಇತಿಹಾಸ, ಧಾರ್ಮಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಭವ್ಯ ಪರಂಪರೆ ಬಿಂಬಿಸುವಂತಹ “ಸೂಡಿ ಉತ್ಸವ’ವನ್ನು ಜಿಲ್ಲಾಡಳಿತ ನಡೆಸಬೇಕೆನ್ನುವುದು ದಶಕದ ಕನಸಾಗಿದೆ

ಅಕ್ಕಾದೇವಿ ರಾಜಧಾನಿಯಾಗಿತ್ತು: 10ನೇ ಶತಮಾನದ ಕಲ್ಯಾಣರ ಚಾಲುಕ್ಯ ರಾಣಿ ಅಕ್ಕಾದೇವಿ ರಾಜಧಾನಿಯಾಗಿದ್ದ ಸೂಡಿ ಅತ್ಯಂತ ಉಚ್ಚಾಯ ಸ್ಥಿತಿಯಲ್ಲಿದ್ದಾಗ ನಿರ್ಮಾಣವಾಗಿರುವ ಜೋಡು ಕಳಸದ ದೇಗುಲ, ಅಕ್ಕೇಶ್ವರ (ಅನಂತಶಯನ,ಮಲ್ಲಿಕಾರ್ಜುನ) ದೇವಾಲಯ, ನಗರೇಶ್ವರ ದೇವಾಲಯ, ನಾಗಕುಂಡ ಪುಷ್ಕರಣಿ, ಹಂಪಿ ಸ್ವರೂಪದ ಬೃಹದಾಕಾರದ ಏಕಶಿಲೆ ಕಡಲೆಕಾಳು ಗಣಪತಿ, ನಂದಿ ಹಾಗೂ ಈಶ್ವರ ವಿಗ್ರಹ ಇರುವ ಮಂಟಪಗಳು, ಅರವತ್ತು ಅಡಿ ಎತ್ತರದ ಹುಡೆ ಸೇರಿ ಗ್ರಾಮದಲ್ಲಿ ಎಲ್ಲೇ ನೋಡಿದರಲ್ಲಿ ಮೈ ನವಿರೇಳಿಸುವಂತಹ ಶಿಲ್ಪಕಲೆಗಳು ಕಲ್ಯಾಣ ಚಾಲುಕ್ಯರ ಇತಿಹಾಸ ಸಾರಿ ಹೇಳುವಂತಿವೆ.

ಉತ್ಸವ ಹಲವರ ಆಸೆ: ಸ್ವಾತಂತ್ರ್ಯ ಹೋರಾಟಗಾರ ಸೂಡಿ ಗ್ರಾಮದ ದಿ| ವಿರುಪಾಕ್ಷಪ್ಪ ಅಬ್ಬಿಗೇರಿ ಅವರು ಅಂದಿನ ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಡಾ| ಶಂಕರಲಿಂಗೇಗೌಡ ಅವರಿಗೆ “ಸೂಡಿ ಉತ್ಸವ’ ನಡೆಸಬೇಕೆಂದು ಮನವಿ ಮಾಡಿದ್ದರು. ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಗೂ ಹಾಲಿ ಸಚಿವ ಬಿ. ಶ್ರೀರಾಮಲು, ಮತ್ತು ಶಾಸಕ ಕಳಕಪ್ಪ ಬಂಡಿ ಅವರ ಮೂಲಕವೂ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹಲವರ ಆಸೆ-ಕನಸು ಇಂದಿಗೂ ಈಡೇರಿಲ್ಲ.

ಉತ್ಸವ ವಿಶೇಷತೆ: ಸರ್ಕಾರ ನಡೆಸುವ ಉತ್ಸವಗಳಲ್ಲಿ ಕಲೆ, ಸಂಗೀತ, ಸಾಹಿತ್ಯ, ನಾಟಕ, ನೃತ್ಯ, ಜಾನಪದ ಹಾಗೂ ಕಲಾ ಮಾಧ್ಯಮ ಅಲ್ಲದೇ ದೇಶದ ಹೆಸರಾಂತ ಕವಿಗಳು, ವಿದ್ವಾಂಸರು, ನೃತ್ಯ ಪಟುಗಳು, ಅಭಿನಯ ಚತುರರು, ಸಂಗೀತಗಾರರು ಕನ್ನಡ ನಾಡಿನ ಇತಿಹಾಸ ಸಂಸ್ಕೃತಿ ಪರಂಪರೆ ಬೆಳಗಿಸಿ ಜನರ ಮನದಾಳದಲ್ಲಿ ಬೇರೂರುವಂತೆ ಮಾಡುವುದೇ ಉತ್ಸವದ ಉದ್ದೇಶ. ಜಿಲ್ಲಾಡಳಿತ ಮತ್ತು ಶಾಸಕರು ಗ್ರಾಮದಲ್ಲಿ ಉತ್ಸವ ಆಚರಿಸಿ ಇಲ್ಲಿನ ಇತಿಹಾಸ ಪರಿಚಯಿಸುವ ಕಾರ್ಯ ಆಗಬೇಕಿದೆ ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next