ರಾಮನಗರ: ಮೇಕೆದಾಟು ಯೋಜನೆಯನ್ನು ಜಾರಿ ಮಾಡುವ ಗಂಡಸುತನ ಇರೋದು ಬಿಜೆಪಿಗೆ ಮಾತ್ರ; ಕಾಂಗ್ರೆಸ್ ಪಕ್ಷಕ್ಕೆ ಇದನ್ನೆಲ್ಲ ಅನುಷ್ಠಾನಗೊಳಿಸುವ ಶಕ್ತಿಯೇ ಇಲ್ಲ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಈ ಪೌರುಷವಿದೆಯಾ? ಈ ವಿಚಾರದಲ್ಲಿ ನಾನು ನೇರವಾಗಿ ಅವರಿಬ್ಬರಿಗೂ ಸವಾಲೆಸೆಯುತ್ತಿದ್ದೇನೆ. ತಾಕತ್ತಿದ್ದರೆ ಅವರು ಉತ್ತರಿಸಲಿ’ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಂಥಾಹ್ವಾನ ನೀಡಿದ್ದಾರೆ.
`ಡಿ.ಕೆ.ಶಿವಕುಮಾರ್ ಜಿಲ್ಲೆಯಿಂದ ಏಳು ಬಾರಿ ಶಾಸಕರಾಗಿ, ಹಲವು ಬಾರಿ ಮಂತ್ರಿಗಳಾಗಿದ್ದಾರೆ; ಇವರ ಸಹೋದರ ಎರಡು ಬಾರಿ ಸಂಸದರಾಗಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಜಿಲ್ಲೆಗೆ ಇವರ ಕೊಡುಗೆ ಏನು? ಜಿಲ್ಲೆಯಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ, ಸಂಪನ್ಮೂಲವನ್ನು ಲೂಟಿ ಹೊಡೆದಿರುವುದನ್ನು ಬಿಟ್ಟರೆ ಇವರೇನು ಕಡಿದು ಕಟ್ಟೆ ಹಾಕಿದ್ದಾರೆ?’ ಎಂದು ತೀಕ್ಷ್ಣ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವು ಸಾಂಕ್ರಾಮಿಕ ರೋಗ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿದೆ. ಇವೆರಡೂ ಜಾಮೀನುರಹಿತ ಅಪರಾಧಗಳಾಗಿವೆ. ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನಿಗಾ ಇಟ್ಟಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಕಠಿಣ ಕ್ರಮವನ್ನ ತೆಗೆದುಕೊಳ್ಳಬಹುದು ಎಂದು ಅವರು ಎಚ್ಚರಿಕೆ ರವಾನಿಸಿದರು.
ಜನಪ್ರತಿನಿಧಿಗಳಾದವರಿಗೆ ಜನರ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಆದರೆ ಏಳು ಬಾರಿ ಶಾಸಕರಾಗಿ ಗೆದ್ದು ಬಂದ ಡಿ.ಕೆ.ಶಿವಕುಮಾರ್ ಜಿಲ್ಲೆಯ ಅಭಿವೃದ್ಧಿ ಮಾಡುವುದನ್ನು ಬಿಟ್ಟು ತಾವೇ ವ್ಯಾಪಾರ-ವಹಿವಾಟು ನಡೆಸಿಕೊಂಡು ಕೂತಿದ್ದರು. ಒಬ್ಬ ಶಾಸಕನಿಗೆ ಬಿಜಿನೆಸ್ ಮಾಡಲು ಸಮಯ ಎಲ್ಲಿರುತ್ತದೆ ಹೇಳಿ? ಜನರ ನಂಬಿಕೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ದಾರಿದ್ರ್ಯದಲ್ಲಿದೆ ಎಂದು ಅಶ್ವತ್ಥನಾರಾಯಣ ಹರಿಹಾಯ್ದರು.
ರಾಜ್ಯದಲ್ಲಿ 2013ರಿಂದ 2018ರವರೆಗೆ ಕಾಂಗ್ರೆಸ್ಸೇ ಅಧಿಕಾರದಲ್ಲಿತ್ತು. ಅವರ ಯೋಗ್ಯತೆಗೆ ಮೇಕೆದಾಟು ಯೋಜನೆ ಸಂಬಂಧ ಒಂದು ಕಾರ್ಯಸಾಧ್ಯತಾ ವರದಿಯನ್ನಾಗಲಿ, ಡಿಪಿಆರ್ ವರದಿಯನ್ನೇ ಆಗಲಿ ಸಿದ್ಧಪಡಿಸಲು ಆಗಲಿಲ್ಲ. ಯಃಕಶ್ಚಿತ್ ಒಂದು 4ಜಿ ವಿನಾಯಿತಿ ಕೊಡಲು ಸಿದ್ದರಾಮಯ್ಯ ಮೂರು ವರ್ಷ ತೆಗೆದುಕೊಂಡರು. ಆ ಅವಧಿಯಲ್ಲಿ ರಾಜ್ಯಕ್ಕೆ ಯಾವ ಅಡೆತಡೆಗಳೂ ಇರಲಿಲ್ಲ. ಇದಕ್ಕೂ ಮೊದಲು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಕಾವೇರಿ ವಿವಾದದ ಅಂತಿಮ ತೀರ್ಪನ್ನು 6 ವರ್ಷಗಳಾದರೂ ಗೆಜೆಟ್ಟಿನಲ್ಲೇಕೆ ಪ್ರಕಟಿಸಲಿಲ್ಲ? ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಸನ್ನು ನಾವು ರಾಜಕೀಯವಾಗಿ ಬೆತ್ತಲು ಮಾಡಲಿದ್ದೇವೆ’ ಎಂದು ಸಚಿವರು ಹೇಳಿದರು.
ಮೇಕೆದಾಟು:ಬಿಜೆಪಿಯಿಂದಲೇ ಪ್ರಗತಿ*
ಮೇಕೆದಾಟು ಯೋಜನೆಯ ಜಾರಿ ವಿಚಾರದಲ್ಲಿ ಬಿಜೆಪಿ ಸರಕಾರದ್ದು ಸಂಪೂರ್ಣ ಬದ್ಧತೆಯಾಗಿದ್ದು, ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುವ ಮೂಲಕ ಇಡೀ ವಿಚಾರಕ್ಕೆ ರಾಜಕೀಯದ ಬಣ್ಣ ಬಳಿಯುತ್ತಿದೆ ಎಂದು ಅಶ್ವತ್ಥನಾರಾಯಣ ಆರೋಪಿಸಿದರು.
ನಾಡು-ನುಡಿಯ ವಿಚಾರದಲ್ಲಿ `ರಾಜ್ಯ ಮೊದಲು’ ಎನ್ನುವುದು ಬಿಜೆಪಿ ನಿಲುವಾಗಿದೆ. ನಮ್ಮ ಪಕ್ಷದ ಸರಕಾರ ಬಂದಮೇಲೆ ಎನ್.ಜಿ.ಟಿ. ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಜತೆಗೆ ಮುಳುಗಡೆಯಾಗಲಿರುವ 5 ಸಾವಿರ ಎಕರೆ ಅರಣ್ಯ ಭೂಮಿಗೆ ಪರ್ಯಾಯವಾಗಿ ನೀಡಲು ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈಗಾಗಲೇ 7,500 ಎಕರೆಯನ್ನು ಗುರುತಿಸಲಾಗಿದೆ. ಇದನ್ನೆಲ್ಲ ಕಾಂಗ್ರೆಸ್ ಸರಕಾರ ಯಾಕೆ ಮಾಡಲಿಲ್ಲ ಎಂದು ಅವರು ಪ್ರಶ್ನೆಗಳ ಸುರಿಮಳೆಗೈದರು.
ಬಿಜೆಪಿ ಸರಕಾರ ಬಂದಮೇಲೆ ರಾಮನಗರ ಜಿಲ್ಲೆಯಲ್ಲಿ 7 ಏತ ನೀರಾವರಿ ಯೋಜನೆಗಳನ್ನು ಆರಂಭಿಸಲಾಗಿದೆ. ಇಗ್ಗಲೂರು ಏತ ನೀರಾವರಿ ಯೋಜನೆಯನ್ನಂತೂ 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮುಗಿಸಲಾಗಿದೆ. ಹಾಗೆಯೇ, ಜಿಲ್ಲೆಯ ಮನೆಮನೆಗೂ ನದೀಮೂಲದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಹಿಂದೆ 2008-13ರಲ್ಲಿ ಬಿಜೆಪಿ ಸರಕಾರವಿದ್ದಾಗಲೂ ಕಾವೇರಿ ಕಣಿವೆಯ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಮೊತ್ತದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿತು. 60 ವರ್ಷ ರಾಜ್ಯವನ್ನು ಆಳಿರುವ ಕಾಂಗ್ರೆಸ್ ಮಾಡಿರುವುದೇನು?’ ಎಂದು ಅವರು ಪ್ರತಿಪಾದಿಸಿದರು.