ಹೊಸದಿಲ್ಲಿ: ಬಿಜೆಪಿಯನ್ನು ಆರ್‌ಎಸ್‌ಎಸ್ ನಿಯಂತ್ರಿಸುತ್ತಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
50 ದೇಶಗಳಿಂದ ಆಗಮಿಸಿದ ರಾಜತಾಂತ್ರಿಕ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಗವತ್ ”ಸ್ವಯಂ ಸೇವಕರಾದ ನಾವು ಸಲಹೆಗಳನ್ನು, ಟಿಪ್ಪಣಿಗಳನ್ನು ನೀಡುತ್ತೇವೆ. ಆದರೆ ಕಾರ್ಯ ನಿರ್ವಹಿಸುವುದರಲ್ಲಿ ಬಿಜೆಪಿ ಸ್ವತಂತ್ರವಾಗಿದೆ” ಎಂದರು.
ವರದಿಯಾದಂತೆ, ಬಿಜೆಪಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಯಂತ್ರಿಸುತ್ತದೆ ಮತ್ತು ಪಕ್ಷದ ಆಡಳಿತವಿರುವಲ್ಲಿ ಸರ್ಕಾರದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಭಾಗವತ್ ”ಆರ್‌ಎಸ್‌ಎಸ್ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಯಾಗಿದೆ. ಸಂಘ ಬಿಜೆಪಿಯನ್ನಾಗಲಿ, ಬಿಜೆಪಿ ಸಂಘವನ್ನಾಗಲಿ ನಡೆಸುತ್ತಿಲ್ಲ” ಎಂದರು.
ಇದೇ ವೇಳೆ ”ಆರ್‌ಎಸ್‌ಎಸ್ ರಾಜಕೀಯವಲ್ಲ, ಸಾಮಾಜಿಕ ಸಂಘಟನೆ” ಎಂದು ಭಾಗವತ್ ಹೇಳಿದರು.
ಸಭೆಯನ್ನು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಆಯೋಜಿಸಿದ್ದು, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಕುರಿತಾಗಿ ಆರ್‌ಎಸ್‌ಎಸ್ ವಿರುದ್ಧದ ಆರೋಪಗಳ ಕುರಿತು ಚರ್ಚೆ ನಡೆಸಲಾಯಿತು.
ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಭಾಗವತ್ ಅವರು ”ಸಂಘ ಎಂದಿಗೂ ಆಕ್ರಮಣಕಾರಿ ಮನೋಭಾವ ತೋರುವುದಿಲ್ಲ. ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡುವುದನ್ನು ಒಪ್ಪುವುದಿಲ್ಲ” ಎಂದಿದ್ದರು.