Advertisement

ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಿಂತಿಲ್ಲ

10:39 AM Jun 26, 2018 | |

ಬಳ್ಳಾರಿ: ದೇಶದಲ್ಲಿ ದಲಿತರ ಮೇಲೆ ಪ್ರತಿದಿನ, ಪ್ರತಿಕ್ಷಣಕ್ಕೊಂದು ದೌರ್ಜನ್ಯ ಮತ್ತು ದಬ್ಟಾಳಿಕೆಗಳು ನಡೆಯುತ್ತಿವೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಬಿಡಿಎಎ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಪ್ರೊ|ಬಿ.ಕೃಷ್ಣಪ್ಪ ಅವರ 80ನೇ ಜನ್ಮದಿನದ ಅಂಗವಾಗಿ ಸಾಮಾಜಿಕ ಸಮತಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಪ್ರತಿ ಹಳ್ಳಿಯಲ್ಲೂ ಅಸ್ಪೃಶ್ಯತೆ, ಜಾತೀಯತೆ ಇಂದಿಗೂ ತಾಂಡವವಾಡುತ್ತಿದೆ. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಗಟ್ಟಲು ದಲಿತರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಬುದ್ಧ, ಬಸವ, ಅಂಬೇಡ್ಕರ್‌ ಮತ್ತು ಡಿಎಸ್‌ಎಸ್‌ ಸಂಸ್ಥಾಪಕ ಪ್ರೊ| ಬಿ.ಕೃಷ್ಣಪ್ಪ ಅವರ ಹೋರಾಟಗಳನ್ನು ದಲಿತಪರ ಸಂಘಟನೆಗಳು ಮುಂದುವರಿಸಿಕೊಂಡು ಹೋಗಬೇಕು. ಇಂದಿನ ಯುವ ಪೀಳಿಗೆ ದಲಿತಪರ ಹೋರಾಟಗಾರರ ಬದುಕನ್ನು ಅಧ್ಯಯನ ಮಾಡಬೇಕು. ಪ್ರೊ|ಕೃಷ್ಣಪ್ಪ ಅವರ ಬಗ್ಗೆ ಯುವಕರಿಗೆ ತಿಳಿವಳಿಕೆ ಅಗತ್ಯವಾಗಿದೆ ಎಂದು ತಿಳಿಸಿದರು.

ದಲಿತ ಚಳವಳಿಗೆ ಸ್ವಾಭಿಮಾನ ಮತ್ತು ಘನತೆ ತಂದ ಕೀರ್ತಿ ಪ್ರೊ|ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ. ದಲಿತ ಸಂಘಟನೆಗಳಿಗೆ ಮೂಲ ಬೇರು ಕೃಷ್ಣಪ್ಪ ಅವರು. ದಲಿತ ಸಮಾಜದ ಹೀನಾಯ ಪರಿಸ್ಥಿತಿಯನ್ನು ಬದಲಾಯಿಸುವ ಕನಸನ್ನು ಕಂಡಿದ್ದರು. ಅವರ ಚಿಂತನೆಗಳು ಮತ್ತು ಆಲೋಚನೆಗಳು ದಲಿತರ ಮತ್ತು ಶೋಷಿತರ ಪರವಾಗಿದ್ದವು. ಧರ್ಮದ ಹೆಸರಿನಲ್ಲಿ ದಲಿತ ಮಹಿಳೆಯರನ್ನು ಬೆತ್ತಲೆ ಮಾಡುತ್ತಿದ್ದರು. ಇದರ ವಿರುದ್ಧ ಹೋರಾಟ ನಡೆಸಿ, ಈ ಪದ್ಧತಿಯನ್ನು ರದ್ದುಗೊಳಿಸುವಂತೆ ಮಾಡಿದ ಕೀರ್ತಿ ಪ್ರೊ| ಬಿ.ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

Advertisement

ದೇಶದಲ್ಲಿ ದಲಿತರಿಗೆ ದೊರೆಯುತ್ತಿರುವ ಮೀಸಲಾತಿ ಭಿಕ್ಷೆ ಅಲ್ಲ. ಅದು ಸಂವಿಧಾನದ ಹಕ್ಕು. ಈ ಹಕ್ಕನ್ನು ಪಡೆದುಕೊಳ್ಳಲು ದಲಿತರು ನಿರಂತರ ಹೋರಾಟ ನಡೆಸಲು ಮುಂದಾಗಬೇಕು. ಶೋಷಣೆಗೊಳಗಾಗಿರುವ ದಲಿತ ಸಮಾಜ ಏಳಿಗೆಗಾಗಿ ಕೃಷ್ಣಪ್ಪ ಅವರು ಇಡೀ ರಾಜ್ಯವನ್ನೇ ಸುತ್ತಾಡಿದರು. ಅವರ ಆದರ್ಶ ಮತ್ತು ತತ್ವ-ಸಿದ್ಧಾಂತಗಳನ್ನು ದಲಿತ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಕೋರಿದರು.

ಎಸ್‌ಪಿ ಅರುಣ ರಂಗರಾಜನ್‌ ಮಾತನಾಡಿ, ದಲಿತರ ಹೋರಾಟದ ಯಶಸ್ವಿಗೆ ಒಗ್ಗಟ್ಟು ಬಹಳ ಮುಖ್ಯ. ಈ ನಿಟ್ಟಿನಲ್ಲಿ ದಲಿತರು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಎಲ್ಲಿ ಐಕ್ಯತೆ ಇರುವುದಿಲ್ಲವೋ, ಅಲ್ಲಿ ಹೋರಾಟ ಯಶಸ್ವಿಯಾಗಲು ಸಾಧ್ಯವಿಲ್ಲ. ಎಸ್‌ಪಿಯಾದ ಬಳಿಕ ನಾನು ಕಂಡಂತೆ ಗ್ರಾಮೀಣ ಭಾಗದಲ್ಲಿ ದಲಿತರು, ಬಡವರು ಇನ್ನು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆ ಇತ್ಯರ್ಥ ಪಡಿಸುವಂತೆ ಬಹುತೇಕರು ನಮ್ಮ ಬಳಿ ಬರುವುದಿಲ್ಲ. ಹೀಗಾಗಿ ಅವುಗಳನ್ನು ಎದುರಿಸಬೇಕಾದರೆ, ಒಗ್ಗಟ್ಟು ಮುಖ್ಯ ಎಂದು ಸಲಹೆ ನೀಡಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಮೌಲ್ಯಮಾಪನ ಕುಲಸಚಿವ ಡಾ| ಹೊನ್ನುಸಿದ್ಧಾರ್ಥ, ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಬಿ.ಶ್ರೀನಿವಾಸಮೂರ್ತಿ, ದಲಿತ ಸಾಹಿತಿ ಎನ್‌.ಡಿ.ವೆಂಕಮ್ಮ ಮಾತನಾಡಿದರು.

ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಎಚ್‌. ಹುಸೇನಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮೇಯರ್‌ ಸುಶೀಲಾಬಾಯಿ ಸೂರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ, ಮಾಜಿ ಮೇಯರ್‌ ನಾಗಮ್ಮ, ಮಾಜಿ ಉಪಮೇಯರ್‌ ಬೆಣಕಲ್ಲು ಬಸವರಾಜಗೌಡ, ಸಮಿತಿಯ ಮಹಿಳಾ ಒಕ್ಕೂಟದ ಜಿಲ್ಲಾ ಪ್ರಧಾನ ಸಂಚಾಲಕಿ ಮೀನಾಕ್ಷಿ ರಾಜಣ್ಣ, ಅಂಬೇಡ್ಕರ್‌ ಸಂಘದ ಗೌರವ ಅಧ್ಯಕ್ಷ ರಕುಲಸ್ವಾಮಿ ಇನ್ನಿತರರಿದ್ದರು.

ಸಮಿತಿ ವಿಭಾಗೀಯ ಸಂಘಟನಾ ಸಂಚಾಲಕ ದುರುಗಪ್ಪ ತಳವಾರ್‌ ಪ್ರಾಸ್ತವಿಕವಾಗಿ ಮಾತನಾಡಿದರು. ಪಿ.ತಾಯಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಎ.ಕೆ. ಗಂಗಾಧರ ಸ್ವಾಗತಿಸಿದರು. ಚಿಕ್ಕಗಾದಿಲಿಂಗಪ್ಪ
ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next