Advertisement

ಬಿಜೆಪಿಗರಿಂದ ರಾಮನ ಬಗ್ಗೆ ಪಾಠ ಬೇಕಿಲ್ಲ:ರಮಾನಾಥ ರೈ

12:18 PM Jan 26, 2018 | Team Udayavani |

ಕಾರ್ಕಳ: ಶಾಸಕ ಸುನಿಲ್‌ ಕುಮಾರ್‌ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಮನೋಭಾವ ಬಿಟ್ಟು ಎಲ್ಲರನ್ನೂ ಗೌರವಿಸುವ ಕೆಲಸ ಮಾಡಲಿ. ನಾನು ಮಗುವಾಗಿದ್ದಾಗ ನನ್ನ ತಂದೆ ನನ್ನನ್ನು ರಾಮೇಶ್ವರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ರಮಾನಾಥ ಎಂದು ಹೆಸರಿಟ್ಟಿದ್ದಾರೆ. ದೇವರ ಬಗ್ಗೆ, ರಾಮನ ಬಗ್ಗೆ ನಮಗೆ ಪಾಠ ಹೇಳಬೇಕಾದ ಅಗತ್ಯ ಇಲ್ಲ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

Advertisement

ಬುಧವಾರ ರಾತ್ರಿ ಕಾರ್ಕಳದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ನನಗೆ ಇಲ್ಲಿನ ಧರ್ಮ, ಭಾಷೆಯ ಮೇಲೆ ಗೌರವವಿದೆ. ತುಳುನಾಡಿನ ಎಲ್ಲ ದೈವ-ದೇವರು ನನ್ನ ಆತ್ಮದಲ್ಲಿದ್ದಾರೆ. ಸುನಿಲ್‌ ಕುಮಾರ್‌ ಅವರ ಮನದಲ್ಲಿರುವುದು ಮತೀಯ ಭಾವನೆ ಕೆರಳಿಸುವ ವಿಚಾರ ಮಾತ್ರ. ಅವರ ಹೇಳಿಕೆ ಅವರ ಅಜ್ಞಾನವನ್ನು ತೋರಿಸುತ್ತದೆ ಎಂದರು.

ಮತೀಯ ಸೂಕ್ಷ್ಮ ಪ್ರದೇಶದಲ್ಲಿ ಇಂಥ ಹೇಳಿಕೆ ಎಷ್ಟು ಸರಿ ಎನ್ನುವುದನ್ನು ಜನ ತಿಳಿದುಕೊಳ್ಳಬೇಕಾಗಿದೆ ಎಂದರು. 

ಹಲವು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದೇನೆ. ಅನೇಕ ಬಾರಿ ಶಾಸಕ, ಸಚಿವನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಯಾರೂ ನನ್ನನ್ನು ಜಾತಿವಾದಿ ಎಂದಿಲ್ಲ. ಇತರ ಧರ್ಮದವರನ್ನು ಪ್ರೀತಿಸುವುದನ್ನು ಇವರು ತಪ್ಪು ಎನ್ನುತ್ತಾರೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದ ಬಿಜೆಪಿಗರು ಚುನಾವಣೆ ಬಂದಾಗ ನಮ್ಮ ಕ್ಷೇತ್ರದಲ್ಲಿ ಬಂದು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ರೈ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next