Advertisement

ಮನೋ ಆರೋಗ್ಯಕ್ಕೇಕಿಲ್ಲ ಮನ್ನಣೆ?

12:30 AM Oct 10, 2018 | |

ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ. ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸುಸ್ಥಿರವಾಗಿರುವುದು. ಮಾನಸಿಕ ಆರೋಗ್ಯವು ದೈಹಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ನಿರ್ಧರಿಸುತ್ತದೆ. ದೇಹಕ್ಕೆ ಕಾಯಿಲೆಗಳು ಬಂದಂತೆ ಮನಸ್ಸಿಗೆ ಕೂಡ ಕಾಯಿಲೆಗಳು ಬರುತ್ತವೆ. ಮಾನಸಿಕ ಕಾಯಿಲೆಗಳಿಂದ ರೋಗಿಯ ಜತೆಗೆ ರೋಗಿಯ ಕುಟುಂಬದವರು ಸಹ ತೊಂದರೆ ಗೊಳಗಾಗುತ್ತಾರೆ. ಮಾನಸಿಕ ರೋಗಗಳಿಂದ ಸಾವು ನೋವುಗಳು ಉಂಟಾಗುವುದಲ್ಲದೆ ಸರಿಯಾದ ಚಿಕಿತ್ಸೆ ನೀಡದೆ ಇದ್ದಲ್ಲಿ ಅಂಗವಿಕಲತೆಗೂ ಕಾರಣವಾಗುತ್ತದೆ. ಮಾನಸಿಕ ಕಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು. ಮಿದುಳಿನಲ್ಲಿ ಆಗುವ ಕೆಲವು ಬದಲಾವಣೆಗಳು. ಬದುಕುತ್ತಿರುವ ವಾತಾವರಣ, ಕಷ್ಟನಷ್ಟಗಳು, ಮೇಲಿಂದ ಮೇಲೆ ಮನಸ್ಸಿಗೆ ಆಗುವ ನೋವು, ನಿರಾಶೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ ಕಾಯಿಲೆಗಳು ಬರಬಹುದು. ಬಡತನ, ಅಜ್ಞಾನ, ಸಮಾಜದಲ್ಲಿರುವ ತಪ್ಪು ನಂಬಿಕೆಗಳು ಹಾಗೂ ಸಾಮಾಜಿಕ ಕಳಂಕಕ್ಕೆ ಅಂಜಿ ಎಲ್ಲ ರೋಗಿಗಳು ಚಿಕಿತ್ಸೆ ಸೌಲಭ್ಯ ಪಡೆಯುತ್ತಿಲ್ಲ. 

Advertisement

ಲಕ್ಷಣಗಳು 
ಮಾನಸಿಕ ರೋಗಗಳು ಮುಖ್ಯವಾಗಿ 2 ವಿಧಗಳು. ಒಂದು ತೀವ್ರ ಸ್ವರೂಪದ ರೋಗಗಳಾಗಿದ್ದು ಇದರಲ್ಲಿ ದೈಹಿಕವಾಗಿ ಆರೋಗ್ಯವಾಗಿದ್ದರೂ ಸಹ ಇವರಲ್ಲಿ ಮಾತು, ಆಲೋಚನೆ, ಭಾವನೆಗಳಲ್ಲಿ ಏರುಪೇರು ಉಂಟಾಗುತ್ತದೆ. ಬೇರೆಯವರಿಗೆ ಕೇಳಿಸದ ಶಬ್ದಗಳು ಕೇಳಿಸುವುದು, ದೃಶ್ಯಗಳು ಕಾಣಿಸುವುದು ಉಂಟಾಗಿ ರೋಗಿಯು ವಿಚಿತ್ರ ನಡವಳಿಕೆ, ತನ್ನಷ್ಟಕ್ಕೆ ಮಾತನಾಡುವುದು, ನಗುವುದು ಮಾಡುತ್ತಾನೆ. ಆಲೋಚನಾ ಶಕ್ತಿಯ ವ್ಯತ್ಯಾಸದಿಂದ ವೃಥಾ ಅನುಮಾನ, ಸಂಶಯ ಪಡುವುದು ಹಾಗೂ ಅತಿಯಾಗಿ ಜಂಭ ಕೊಚ್ಚಿಕೊಳ್ಳುವುದು ಕಂಡು ಬರುತ್ತದೆ. ಭಾವನೆಗಳು ಏರುಪೇರಿನಿಂದಾಗಿ ಕುಟುಂಬಕ್ಕೆ ಅಥವಾ ಸಮಾಜಕ್ಕೆ ತೊಂದರೆ ಉಂಟು ಮಾಡಬಹುದು ಹಾಗೂ ತಮ್ಮನ್ನು ತಾವು ಆರೈಕೆ ಮಾಡುವಲ್ಲಿ ವಿಫ‌ಲರಾಗಬಹುದು. ಸಾಮಾಜಿಕ ಕರ್ತವ್ಯಗಳಿಂದ ವಿಮುಖನಾಗಬಹುದು. 

ಎರಡನೇ ತರಹದ ಮಾನಸಿಕ ಕಾಯಿಲೆಗಳಲ್ಲಿ ರೋಗಿಯು ದೈನಂದಿನ ಕೆಲಸ ಕಾರ್ಯಗಳು ಸಾಮಾನ್ಯವಾಗಿದ್ದರೂ, ಸಣ್ಣ, ಸಣ್ಣ ವಿಷಯಗಳಿಗೆ ಆತಂಕ ಪಡುವುದು, ಕೈ -ಕಾಲು ನಡುಗುವುದು, ದುಃಖ, ಬೇಸರ ಆಗುವುದು ಪದೇ ಪದೇ ಕೈ ತೊಳೆಯುವುದು. ಎಣಿಸುವುದು, ಇತ್ಯಾದಿ ಗೀಳು ಪ್ರದರ್ಶಿಸಬಹುದು ಅಥವಾ ಇದ್ದಕ್ಕಿದ್ದಂತೆ ಮೈ ಮೇಲೆ ದೇವರು-ದೆವ್ವ ಬಂದಂತೆ ವರ್ತಿಸಬಹುದು. ಇವರು ನೋಡಲು ಸಾಮಾನ್ಯರಂತಿದ್ದು, ನಿತ್ಯದ ಕೆಲಸ – ಕಾರ್ಯಗಳನ್ನು ಮಾಡುತ್ತಿರಬಹುದು. ಇವರು ಬೇರೆಯ ವರಿಗೆ ತೊಂದರೆ ನೀಡದೆ ತಮಗೆ ತಾವೇ ಸಂಕಟ ಪಡುತ್ತಾರೆ.  ಮೊದಲನೇ ತರಹದ ಮಾನಸಿಕ ಕಾಯಿಲೆಗಳಿಗೆ ಮೆದುಳಿನ ಲ್ಲಾಗುವ ರಾಸಾಯನಿಕ ಬದಲಾವಣೆಗಳು ಕಾರಣವಾದರೆ, ಎರಡನೇ ತರಹದ ಕಾಯಿಲೆಗಳಿಗೆ ಸಾಮಾಜಿಕ – ಮಾನಸಿಕ ಕಾರಣಗಳಿರಬಹುದು. ಮೊದಲನೇ ತರಹದ ರೋಗಿಗಳಿಗೆ ಔಷಧೋಪಚಾರ ಮುಖ್ಯವಾದರೆ, ಎರಡನೇ ತರಹದ ರೋಗಿಗಳಿಗೆ ಸಾಂತ್ವನ , ಮನೋ-ಚಿಕಿತ್ಸೆ ಸಹಕಾರಿಯಾಗುತ್ತದೆ.

ನಮ್ಮ ದೇಶದಲ್ಲಿ ಸುಮಾರು 7 ಕೋಟಿ ಮಾನಸಿಕ ರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ತೀವ್ರ ಸ್ವರೂಪದ ಮಾನಸಿಕ ಕಾಯಿಲೆಗಳಾದ ಸ್ಕಿಜೋಫ್ರಿನಿಯಾ  ಮೇನಿಯ ಇತ್ಯಾದಿಗಳು ಪ್ರತಿ ಸಾವಿರ ಜನಸಂಖ್ಯೆಗೆ 5 ರಿಂದ 6 ಜನರಲ್ಲಿರಬಹುದು . ಅಲ್ಪ ಪ್ರಮಾಣದ ಮಾನಸಿಕ ರೋಗಗಳಾದ ಆತಂಕದ ಕಾಯಿಲೆಗಳು, ಖನ್ನತೆ, ಗೀಳುರೋಗ, ಹಿಸ್ಟಿರಿಯಾ ಕಾಯಿಲೆಗಳು ಜನಸಂಖ್ಯೆಯ ಪ್ರತಿಶತ 10-12ರಷ್ಟು ಇರುತ್ತದೆ. ಇದಲ್ಲದೇ ಕನಿಷ್ಟ ಶೇ.3-ಶೇ.4 ಜನರು ಮಾದಕ ದ್ರವ್ಯಗಳ ವ್ಯಸನದಿಂದಲೂ, ಶೇ.3-ಶೇ.4 ಜನರು ಬುದ್ಧಿ ಮಾಂದ್ಯತೆ ಯಿಂದಲೂ ಮಾನಸಿಕ ರೋಗಿಗಳು ಇರುತ್ತಾರೆ ಎಂದು ವಿವಿಧ ಸಮೀಕ್ಷೆಗಳು ತೋರಿಸಿವೆ. ಅಲ್ಲದೆ 2016ರಲ್ಲಿ 2 ಲಕ್ಷ ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.

 ದೇಶದಲ್ಲಿ ಈಗ ಸುಮಾರು 4,500ರಿಂದ 5,000 ಮಾನಸಿಕ ತಜ್ಞರುಗಳಿದ್ದು ಅಂಥವರ ಹೆಚ್ಚಿನ ಸೇವೆಗಳು ಪಟ್ಟಣ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಕೆಲವೊಂದು ಮಾನಸಿಕ ಕಾಯಿಲೆಗಳಿಗೆ ದೀರ್ಘಾವಧಿ ಚಿಕಿತ್ಸೆ ಅಗತ್ಯವಿರುವುದರಿಂದ ಬಹಳ ರೋಗಿಗಳಿಗೆ ಈ ಪಟ್ಟಣ ಕೇಂದ್ರಿತ ಮಾನಸಿಕ ಚಿಕಿತ್ಸಾ ಕೇಂದ್ರಗಳು ಹೆಚ್ಚಿನ ಪ್ರಯೋಜನಕ್ಕೆ ಬರಲಾರವು. ಎಲ್ಲ ತರಹದ ಮಾನಸಿಕ ರೋಗಿಗಳಿಗೆ ಸೂಕ್ತ ಔಷಧಿಗಳು ಹಾಗೂ ಇತರೇ ಚಿಕಿತ್ಸೆಗಳು ಲಭ್ಯವಿದೆ.  ಪ್ರತೀ ರೋಗಿಯನ್ನು ಆಸ್ಪತ್ರೆಗೆ ಸೇರಿಸಿಯೇ ಚಿಕಿತ್ಸೆ ನೀಡಬೇಕಾಗಿಲ್ಲ. ಮನೆಯವರ ನೆರವಿನಿಂದ ಚಿಕಿತ್ಸೆಗೆ ನಡೆಸಿದರೆ, 
ಕಾಯಿಲೆ ಗುಣವಾಗಿ ಆತ ತನ್ನ ದೈನಂದಿನ ಕೆಲಸಗಳನ್ನು ಮಾಡಬಹುದು.

Advertisement

ಚಿಕಿತ್ಸೆ ಎಲ್ಲಿ ಲಭ್ಯ?
ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಖಾಸಗಿ ಮಾನಸಿಕ ತಜ್ಞರು, ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು ಅಲ್ಲದೆ, ಸರಕಾರದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ತಂಡ ರಚನೆ ಮಾಡಲಾಗಿದೆ. ಈ ತಂಡದಲ್ಲಿ ಒಬ್ಬರು ಮಾನಸಿಕ ತಜ್ಞರು. ಒಬ್ಬರು ಕ್ಲಿನಿಕಲ್‌ ಸೈಕಾಲಜಿಸ್ಟ್‌, ಸಾಮಾಜಿಕ ಕಾರ್ಯಕರ್ತ ಹಾಗೂ ಇತರೇ 6 ಜನ ಸಿಬ್ಬಂದಿ ಇರುತ್ತಾರೆ. ಈ ತಂಡ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ನೀಡುವುದಲ್ಲದೆ ಆಯ್ದ ದಿನಗಳಂದು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದ ಸಾಮಾನ್ಯ ವೈದ್ಯಾಧಿಕಾರಿಗಳು ಸಹ ಸಾಮಾನ್ಯ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಕೌಶಲ್ಯವನ್ನು ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗಿದೆ. ಈ ವೈದ್ಯರುಗಳು ಹಾಗೂ ತಜ್ಞರುಗಳು ನೀಡುವ ಎಲ್ಲ ಚಿಕಿತ್ಸೆ ಹಾಗೂ ಔಷಧಗಳು ಸಂಪೂರ್ಣ ಉಚಿತವಾಗಿರುತ್ತದೆ.

ಕೇಂದ್ರ ಸರಕಾರ 2017ರಲ್ಲಿ ಈಗಿರುವ ಮಾನಸಿಕ ರೋಗಿಗಳ ಸಂಖ್ಯೆ, ಮಾನಸಿಕ ತಜ್ಞರುಗಳ, ಮಾನಸಿಕ ಆಸ್ಪತ್ರೆಗಳ ಕೊರತೆಯನ್ನು ಮನಗಂಡು ದೇಶಾದ್ಯಂತ ಮಾನಸಿಕ ರೋಗಿಗಳಿಗೆ ಉತ್ತಮ ಸೇವೆಗಳು ಸಮಾನವಾಗಿ, ಖಚಿತವಾಗಿ ದೊರೆಯುವಂತೆ ಮಾಡಲು ಹಾಗೂ ರೋಗಿಯು ಸಮಾಜದಲ್ಲಿ ಮೂಲಭೂತ ಮಾನವ ಹಕ್ಕುಗಳೊಂದಿಗೆ ಗೌರವಯುತವಾಗಿ ಬದುಕಲು ಮಾನಸಿಕ ಆರೋಗ್ಯ ಕಾಯಿದೆ 2017ನ್ನು ಮೇ 29, 2018ರಿಂದ ಜಾರಿಗೊಳಿಸಿದೆ. 

ಕಾಯಿದೆಯಲ್ಲೇನಿದೆ?  
ಈ ಕಾಯ್ದೆಯ ಮಾನಸಿಕ ರೋಗದ ವ್ಯಾಖ್ಯಾನ, ಮಾನಸಿಕ ಕಾರ್ಯಕರ್ತರುಗಳು, ರೋಗಿಗಳ ಮಾನವ ಅಧಿಕಾರ, ಮುಂಚಿತ ನಿರ್ದೇಶನ, ವಿದ್ಯುತ್‌ ಕಂಪನ ಚಿಕಿತ್ಸೆ, ಆತ್ಮಹತ್ಯೆ ಅಪರಾಧವಲ್ಲ, ಮಾನಸಿಕ ರೋಗಗಳ ಪ್ರಾಧಿಕಾರ, ಮಾನಸಿಕ ಆರೋಗ್ಯ ಸೇವೆಗಳ ಪರಿಶೀಲನಾ ಸಮಿತಿ, ಬಗ್ಗೆ ಒಟ್ಟು 16 ಅಧ್ಯಾಯಗಳಲ್ಲಿ ವಿವರಣೆ ನೀಡಿದೆ.

ಮಾನಸಿಕ ರೋಗದ ವ್ಯಾಖ್ಯಾನ: ಮಾನಸಿಕ ಅಸ್ವಸ್ಥತೆಯನ್ನು ಯಾವ ವ್ಯಕ್ತಿಯು ಆಲೋಚನಾ ಶಕ್ತಿ, ಮನಃಸ್ಥಿತಿ, ದೃಷ್ಟಿಕೋನ, ವಿಕಸನ ಶಕ್ತಿಯಲ್ಲಿ ಗಣನೀಯವಾಗಿ ಅಸ್ವಸ್ಥರಾಗಿರುವರು. ಜೀವನದ ಸಾಮಾನ್ಯ ಬೇಡಿಕೆಗಳನ್ನು ಪೂರೈಸಲು ವಿವೇಚನೆ ಕಳೆದು ಕೊಂಡವರು. ಅಸಮರ್ಥರಾಗಿರುವವರು, ಕುಡಿತ ಹಾಗೂ ಇತರ ಮಾದಕ ವಸ್ತುಗಳ ದುರ್ಬಳಕೆಗೆ ಒಳಪಟ್ಟವರು ಎಂದು ವ್ಯಾಖ್ಯಾನಿಸಲಾಗಿದೆ. 

ಮಾನಸಿಕ ಆರೋಗ್ಯ ತಜ್ಞರು, ಉದ್ಯೋಗಿಗಳು: ಈ ಕಾಯಿದೆಯು ಅಲೋಪತಿ ಮಾನಸಿಕ ತಜ್ಞರುಗಳಲ್ಲದೆ ಹೋಮಿಯೊಪತಿ, ಸಿದ್ಧ, ಯುನಾನಿ ಕ್ರಮಗಳಲ್ಲಿ ವಿಷಯ ಪರಿಣಿತರನ್ನು ಸಹ ಮಾನಸಿಕ ತಜ್ಞರು ಎಂದು ಪರಿಗಣಿಸುತ್ತದೆ. ಕ್ಲಿನಿಕಲ್‌ ಸೈಕಾಲಾಜಿಸ್ಟ್‌ ಮಾನಸಿಕ ಆರೋಗ್ಯ ಕಾರ್ಯಕರ್ತರು, ದಾದಿಗಳು ಸಹ ಮಾನಸಿಕ ಆರೋಗ್ಯ ಸೇವೆಗಳ ಉದ್ಯೋಗಿಗಳು ಎಂದು ಪರಿಗಣಿಸಿದೆ. 

ಮಾನಸಿಕ ರೋಗಿಗಳ ಮಾನವ ಅಧಿಕಾರ: ಎಲ್ಲ ಮಾನಸಿಕ ರೋಗಿಗಳಿಗೆ ಉತ್ತಮ ಗುಣಮಟ್ಟದ ಸಮಯೋಚಿತ ಸೇವೆಗಳನ್ನು ನೀಡುವುದು, ಮಹಿಳೆಯರ ಮತ್ತು ಮಕ್ಕಳ ಹಿತರಕ್ಷಣೆ, ರೋಗಿಗಳ ಗೌಪ್ಯತೆ ಕಾಪಾಡುವುದು ಈ ಕಾಯಿದೆಯ ಪ್ರಕಾರ ಸರಕಾರದ ಸಂಪೂರ್ಣ ಜವಾಬ್ದಾರಿಯಾಗಿದೆ.

ಮುಂಚಿತ ನಿರ್ದೇಶನ: ಪ್ರತಿ ವ್ಯಕ್ತಿಯು ತನ್ನ ರೋಗ ತೀವ್ರಗೊಳ್ಳುವ ಮೊದಲೇ ತನ್ನ ಮುಂದಿನ ಚಿಕಿತ್ಸೆ ಹೇಗಿರಬೇಕು ಎನ್ನುವ ಬಗ್ಗೆ ಮುಂಚಿತ ನಿರ್ದೇಶನ ನೀಡಬಹುದು. ಹಾಗೂ ಇದರ ಮೇಲುಸ್ತುವಾರಿಯಾಗಿ ಒಬ್ಬರನ್ನು ನಾಮನಿರ್ದೇಶನ ಮಾಡಬಹುದು.

ಆತ್ಮಹತ್ಯೆ ಶಿಕ್ಷಾರ್ಹ ಅಪರಾಧವಲ್ಲ: ಈ ಕಾಯಿದೆ ಆತ್ಮಹತ್ಯೆ (IPC309) ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವುದಿಲ್ಲ. ವ್ಯಕ್ತಿಯು ಆ ಸಂದರ್ಭದಲ್ಲಿ ಮಾನಸಿಕ ಒತ್ತಡ, ಸ್ಥಿರತೆ ಕಳೆದುಕೊಂಡಿರಬಹುದಾದ ಸಾಧ್ಯತೆಗಳಿರುವುದರಿಂದ ಅವರಿಗೆ ಅಗತ್ಯ ಚಿಕಿತ್ಸೆ ಪುರ್ನವಸತಿ ಕಲ್ಪಿಸುವುದು.

ವಿದ್ಯುತ್‌ ಕಂಪನ ಚಿಕಿತ್ಸೆ (ECT) – ಮಾನಸಿಕ ರೋಗಿಗೆ ಅಗತ್ಯವಿದ್ದ ಸಂದರ್ಭದಲ್ಲಿ ಅರಿವಳಿಕೆ ಹಾಗೂ ಸ್ನಾಯುಗಳ ಸಡಿಲುಗೊಳಿಸುವ (Muscle Relaxants) ಔಷಧಗಳನ್ನು ನೀಡದೆ ಕಂಪನ ಚಿಕಿತ್ಸೆ ಮಾಡುವಂತಿಲ್ಲ (M-ECT)  ಹಾಗೂ ಮಕ್ಕಳಿಗೆ ಈ ಚಿಕಿತ್ಸೆ ನಿಷೇಧಿಸಲಾಗಿದೆ.

ಮಾನಸಿಕ ಆರೋಗ್ಯ ಪ್ರಾಧಿಕಾರ
ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲಿ ಮಾನಸಿಕ ರೋಗಗಳ ಪ್ರಾಧಿಕಾರ (mental health authority) ರಚಿಸಲಿದೆ. ಮಾನಸಿಕ ತಜ್ಞರು, ಕಾರ್ಯಕರ್ತರು, ಆಸ್ಪತ್ರೆಗಳು ಈ ಪ್ರಾಧಿಕಾರಗಳಲ್ಲಿ ನಮೂದಿಸಿಕೊಳ್ಳಬೇಕು. ಈ ಪ್ರಾಧಿಕಾರಗಳು ಮಾನಸಿಕ ಕಾರ್ಯಕರ್ತರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನಸಿಕ ಸೇವೆಗಳ ಗುಣಮಟ್ಟ ಹೆಚ್ಚಿಸುವ ಬಗ್ಗೆ ತರಬೇತಿ ನೀಡಲಿದೆ. ಹಾಗೂ ಸರಕಾರಕ್ಕೆ ಅಗತ್ಯ ಸೇವೆಗಳ ಬಗ್ಗೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡಲಿದೆ.

ಮಾನಸಿಕ ಆರೋಗ್ಯ ಸೇವೆಗಳ ಪುರ್ನವಿಮರ್ಶೆ ಸಮಿತಿ
ಜಿಲ್ಲಾ ನ್ಯಾಯಾಧೀಶರನ್ನು ಹೊಂದಿರುವ ಈ ಸಮಿತಿಯಲ್ಲಿ ಒಬ್ಬ ಮಾನಸಿಕ ತಜ್ಞರು, ಒಬ್ಬ ಸಾಮಾನ್ಯ, ಕರ್ತವ್ಯ ವೈದ್ಯಾಧಿಕಾರಿ ಇಬ್ಬರು ರೋಗಿಗಳು ಅಥವಾ ರೋಗಿಯ ಸೇವೆ ನೀಡುತ್ತಿರುವವರು ಅಥವಾ ಸರಕಾರೇತರ ಸಂಸ್ಥೆಯವರಿರುತ್ತಾರೆ. ಈ ಸಮಿತಿಯು ಜಿಲ್ಲಾ ಮಟ್ಟದಲ್ಲಿ ಸೇವೆಗಳ ಕುಂದು ಕೊರತೆಗಳನ್ನು ದೂರುಗಳನ್ನು ವಿಚಾರಣೆ ನಡೆಸಿ ಸೂಕ್ತ ಪರಿಹಾರ ನೀಡುವ ಹೊಣೆ ಹೊಂದಿದೆ.

ಡಾ| ಅಶ್ವಿ‌ನಿ ಕುಮಾರ ಗೋಪಾಡಿ

Advertisement

Udayavani is now on Telegram. Click here to join our channel and stay updated with the latest news.

Next