ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ವಿರುದ್ಧ ರಾಹುಲ್ ಗಾಂಧಿ ಟೀಕೆ ವ್ಯಕ್ತಪಡಿಸಿರುವ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದು, ದೇಶದ ಆಸ್ತಿ ಮಾರಾಟ ಮಾಡಿ ಹಣ ಗಳಿಸಿದವರು ನೀವು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ:ದೇಶದ ಆಸ್ತಿ ಪ್ರಧಾನಿ ಮೋದಿ ಅಥವಾ ಬಿಜೆಪಿಗೆ ಸೇರಿದ್ದಲ್ಲ: ಮಮತಾ ಬ್ಯಾನರ್ಜಿ
2008ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮುಂಬೈ ಪುಣೆ ಹೆದ್ದಾರಿ ನಗದೀಕರಣದ ಮೂಲಕ 8 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು. ಆಗ ರಾಹುಲ್ ಗಾಂಧಿ ಏಕೆ ಸುಮ್ಮನಿದ್ದರು ಎಂದು ಸೀತಾರಾಮನ್ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ಜಾರಿ ಮೂಲಕ ದೇಶದ ಆಸ್ತಿಯನ್ನು ಮಾರಾಟ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದರು.
ರಾಹುಲ್ ಗಾಂಧಿಗೆ ಏನು ಗೊತ್ತು?
ಸಂಪತ್ತು ಕ್ರೋಢೀಕರಣ ಎಂದರೆ ರಾಹುಲ್ ಗಾಂಧಿಗೆ ಏನು ಗೊತ್ತು. ಹೀಗೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿಯೇ ದೇಶದ ಸಂಪನ್ಮೂಲಗಳನ್ನು ಮಾರಾಟ ಮಾಡಿ, ಲಂಚ ಪಡೆದುಕೊಳ್ಳುತ್ತಿತ್ತು. ಸರ್ಕಾರಿ ಆಸ್ತಿಗಳ ಮಾರಾಟದ ಮೂಲಕ ಆರು ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪನ್ಮೂಲ ಕ್ರೋಢೀಕರಣದ ನಿರ್ಧಾರಕ್ಕೆ ರಾಹುಲ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಯಾಕೆ ಎಂದು ತಿರುಗೇಟು ನೀಡಿದ್ದಾರೆ.