Advertisement
ಶಬರಿಮಲೆ ತೀರ್ಪು ಕುರಿತು ಅನೇಕರು ಪ್ರತಿಕ್ರಿಯೆ ಕೇಳಿದ್ದಾರೆ. ತೀರ್ಪಿನ ಬಗ್ಗೆ ನನ್ನ ಅಭಿಪ್ರಾಯಕ್ಕೆ ನಂತರ ಬರುತ್ತೇನೆ, ಆದರೆ ಮೂಲತಃ ಮೊಕದ್ದಮೆಯ ಬಗ್ಗೆಯೇ ನನಗೆ ತಕರಾರಿದೆ. ಸಾಮಾನ್ಯವಾಗಿ ಯಾವುದೇ ಒಂದು ಪದ್ಧತಿ, ಕಾನೂನು, ವ್ಯಕ್ತಿ ಅಥವಾ ಸಂಸ್ಥೆಯಿಂದ ನೊಂದವರು, ಶೋಷಣೆಗೆ ಒಳಗಾದವರು ಅಥವಾ ಸಮಸ್ಯೆಯಲ್ಲಿ ಪಾಲುದಾರರಾದವರು ಕೋರ್ಟ್ ಮೆಟ್ಟಿಲೇರುತ್ತಾರೆ. ಶಬರಿಮಲೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದವರಾರು? ಅಯ್ಯಪ್ಪನ ಭಕ್ತರಾ? ಅಯ್ಯಪ್ಪನಲ್ಲಿ ನಂಬಿಕೆ ಉಳ್ಳವರಾ? ಹಿಂದೂಗಳಾ? ಧಾರ್ಮಿಕ ಆಚರಣೆಗಳನ್ನು ನಡೆಸುವವರಾ? ಅಲ್ಲ.
Related Articles
Advertisement
ಸಾಮಾನ್ಯವಾಗಿ ಕುಂಡಲಿನಿ ಶಕ್ತಿ, ಮೂಲಾಧಾರದಿಂದ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಮಾರ್ಗವಾಗಿ ಸಹಸ್ರಾರವನ್ನು ತಲುಪುತ್ತದೆ ಎಂಬುದು ನಂಬಿಕೆ. ಅಂದರೆ, ಮನುಷ್ಯ ಪ್ರಾರ್ಥನೆ ಮಾಡುವ ಸಮಯದಲ್ಲಿ, ಶಕ್ತಿ ಊಧ್ವì ಮುಖವಾಗಿ ಸಂಚರಿಸುತ್ತದೆ. ಸ್ತ್ರೀಯರಿಗೆ ಋತುಕಾಲದಲ್ಲಿ ಶಕ್ತಿಯ ಹರಿವು ಅಧೋಮುಖವಾಗಿರುವುದರಿಂದ, ಎರಡೂ ಎನರ್ಜಿಗಳ ನಡುವೆ ಘರ್ಷಣೆ ಆಗುವ ಸಾಧ್ಯತೆಗಳು ಹೆಚ್ಚಾದ್ದರಿಂದ, ದೇವರ ಮನೆ, ಸನ್ನಿಧಾನದಂತಹ ಶಕ್ತಿ ಹೆಚ್ಚಿರುವ ಸ್ಥಳಗಳಿಂದ ದೂರವಿರುವ ಪದ್ಧತಿ ನಿರ್ಮಿತವಾಗಿದೆ ಎಂಬುದು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನನ್ನ ಅರ್ಥೈಕೆ. ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಉತ್ತಮ ಹಂತವನ್ನು ತಲುಪಿರುವಂತಹ ಜ್ಞಾನಿಗಳು, ಯೋಗಿನಿಯರಿಗೆ ಶಕ್ತಿಯ ನಿಯಂತ್ರಣದ ರಹಸ್ಯ ತಿಳಿದಿದೆ. ಅವರು, ಪ್ರಾಯಶಃ ಸಾಮಾನ್ಯ ಸ್ತ್ರೀಯರ ವರ್ಗಕ್ಕೆ ಸೇರುವುದಿಲ್ಲ. ಪ್ರಾಣಿಗಳಿಗೆ ಸಾಧ್ಯವಾಗದ ಜೀವನ್ಮುಕ್ತಿ ಮನುಷ್ಯನಿಗೆ ಮಾತ್ರ ಸಾಧ್ಯ ಮತ್ತು ಅರಿಷಡ್ವರ್ಗಗಳನ್ನು ಗೆಲ್ಲುವುದೇ ಮಾನವ ಜನ್ಮದ ಮೂಲಭೂತವಾದ ಉದ್ದೇಶವೆಂಬುದು ಸನಾತನ ಹಿಂದೂ ಧರ್ಮದ ತಳಹದಿ. ಹಾಗಾಗಿ, ಸ್ತ್ರೀ ಅಪವಿತ್ರಳು ಎಂಬ ವಿಚಾರ ನಮ್ಮ ಧರ್ಮದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಇಂತಹವು ಸಾವಿರಾರು ವರ್ಷಗಳ ಆಧ್ಯಾತ್ಮಿಕ ವಿಕಸನದಲ್ಲಿ ಮೂಡಿ ಬಂದಿರುವ ಆಚರಣಾ ವಿಧಾನಗಳಷ್ಟೆ. ಶಬರಿಮಲೆಯ ಅಯ್ಯಪ್ಪ ಹೊತ್ತಿರುವ ಬ್ರಹ್ಮಚರ್ಯವನ್ನು ಗೌರವಿಸಿ, 10-50 ವರ್ಷದೊಳಗಿನ ಸ್ತ್ರೀಯರು ಅವನಿಂದ ದೂರವಿದ್ದಾರೆ. ಭಯ ಹುಟ್ಟಿಸುವ ಮತವಲ್ಲ ಹಿಂದೂಗಳದ್ದು, ನಮ್ಮದು ಭಕ್ತಿ ಪ್ರಧಾನ ಧರ್ಮ. ಭಯ ಬಂಡಾಯಕ್ಕೆ ಕಾರಣವಾದರೆ, ಭಕ್ತಿಯಿಂದ ಹುಟ್ಟುವುದು ಗೌರವ. ಅಂತೆಯೇ, ವಿವೇಚನೆಯುಳ್ಳ ಯಾವ ಹಿಂದೂ ಸ್ತ್ರೀಗೂ ಬಂಡಾಯವೆದ್ದು ಸಮಾನ ಹಕ್ಕಿಗಾಗಿ ಹೋರಾಟ ಮಾಡಬೇಕೆಂದಿನಿಸಿಲ್ಲ. ಅವಳು ಕಾಯುವುದಕ್ಕೆ ಸಿದ್ಧ.
ಪ್ರಗತಿಪರರು, ಫೆಮಿನಿಸ್ಟುಗಳು, ವಿಚಾರವಾದಿಗಳಿಗೆ, ದೇವರಲ್ಲೇ ನಂಬಿಕೆಯಿಲ್ಲವೆನ್ನುವುದು ಸಾರ್ವತ್ರಿಕ ಸತ್ಯ. ಅದರಲ್ಲೂ ಸ್ತ್ರೀ ಹೋರಾಟಗಾರರಿಗೆ ಗಂಡು ದೇವರನ್ನು ನೋಡುವ ಹುಚ್ಚೇತಕೆ? ಅದರಲ್ಲೂ “ಬಬೇìಡ್ರಮ್ಮ’ ಎನ್ನುವ ಬ್ರಹ್ಮಚಾರಿಯನ್ನು ನೋಡುವ ಆಲೋಚನೆ ಯಾಕೆ? ನಂಬುವವರಿಗೆ ಹೋಗೋದು ಬೇಡ ಎಂದಮೇಲೆ ನಂಬದವರಿಗ್ಯಾಕೆ ನಮ್ಮ ಬಗ್ಗೆ ಉಸಾಬರಿ? ಯಾರಿಗಾಗಿ ಅವರ ಹೋರಾಟ? ಇಷ್ಟಕ್ಕೂ ಅಯ್ಯಪ್ಪನನ್ನು ನೋಡುವುದು, ನೀರು, ಆಹಾರ, ಆಮ್ಲಜನಕದಂತೆ ಮೂಲಭೂತ ಅವಶ್ಯಕತೆ ಏನಲ್ಲವಲ್ಲ!
“ಹಾಗಿದ್ದರೆ, ತ್ರಿವಳಿ ತಲಾಕ್ ಬಗ್ಗೆ ಏಕೆ ಮಾತನಾಡುತ್ತೀರಿ, ಅದೂ ಒಂದು ಧರ್ಮದಲ್ಲಿ ಹಸ್ತಕ್ಷೇಪವಲ್ಲವೇ?’ ಎಂದು ಕೇಳುವವರಿಗೆ…ಮೊದಲನೆಯದಾಗಿ, ಇಂದು ಜಾರಿಯಲ್ಲಿ ಇರುವ ವಾಟ್ಸಾಪ್, ಫೋನ್ ಎಸ್‌ಎಂಎಸ್, ಈ ಮೇಲ್ ತಲಾಖೀಗೂ ಷರಿಯಾ ಉಲ್ಲೇಖೀಸುವ ತಲಾಖ್ ವಿಧಾನಕ್ಕೂ ಯಾವುದೇ ಸಂಬಂಧವಿಲ್ಲ. ಎರಡನೆಯದಾಗಿ, ಶಬರಿಮಲೆಯ ಮಣಿಕಂಠನ ದರ್ಶನ ಬೇಕೆನ್ನುವ ಬೆರಳೆಣಿಕೆಯ ಜನರ ಹೋರಾಟಕ್ಕೂ ಎಲ್ಲಾ ಮುಸ್ಲಿಂ ಮಹಿಳೆಯರ ವಿವಾಹಗಳ ಮೇಲೆ ಪರಿಣಾಮ ಬೀರುವ ಪದ್ಧತಿಗೂ ಎಂತಹ ಹೋಲಿಕೆ?
ಮೂರನೆಯದಾಗಿ, ಶಬರಿಮಲೆಗೆ ಷರತ್ತುಬದ್ಧ ಪ್ರವೇಶ ಮಹಿಳೆಯರ ಮೇಲೆ ಶೋಷಣೆಯಲ್ಲ, ತಾರತಮ್ಯವಷ್ಟೆ. ಆದರೆ ತ್ರಿವಳಿ ತಲಾಕ್ ಶೋಷಣೆ ಎನ್ನಿಕೊಳ್ಳುತ್ತದೆ. ಎಲ್ಲದ್ದಕ್ಕಿಂತ ಮಿಗಿಲಾಗಿ ಅಲ್ಲಿ ಕೋರ್ಟ್ ಮೆಟ್ಟಲೇರಿದವರು ಶೋಷಿತರು, ಪೀಡಿತರು, ಬೀದಿಗೆ ಬಿದ್ದವರು, ಇಲ್ಲಿ ಕೋರ್ಟಿಗೆ ಹೋದವರು…ಶಬರಿಮಲೆ ಯಾವ ದಿಕ್ಕಿನಲ್ಲಿದೆ, ಅಲ್ಲಿಯ ಆಚರಣೆಗಳೇನು ಎಂಬ ಪರಿವೆ ಕೂಡಾ ಇಲ್ಲದ ನಾಸ್ತಿಕರು! ಶೋಷಿತರಿರಲಿ, ಅವರು ವಂಚಿತರು ಕೂಡಾ ಖಂಡಿತ ಅಲ್ಲ…
ಒಂದೆಡೆ ಸ್ವಯಂಪ್ರೇರಿತರಾಗಿ ಬೀದಿಗಿಳಿದು ಕೋರ್ಟಿನ ಆದೇಶವನ್ನು ವಿರೋಧಿಸಿ ನಿಂತಿರುವ ಕೇರಳದ ಲಕ್ಷಾಂತರ ಹಿಂದೂ ಮಹಿಳೆಯರಿದ್ದರೆ, ಇನ್ನೊಂದೆಡೆ, ಫೆಮಿನಿಸ್ಟು ಎಂಬ ಪಟ್ಟ ಹೊತ್ತ, ದೇವರ ಬಗ್ಗೆ ಯಾವುದೇ ಶ್ರದ್ಧಾ ಭಕ್ತಿಗಳಿಲ್ಲದ ರೆಹಾನ ಫಾತಿಮಾ. ಮತ್ತೂಂದೆಡೆ, ಒಂದು ಬೀಡಿ-ಸಿಗರೇಟು, ಗುಂಡು-ತುಂಡು, ಹೆಂಡತಿಯೊಡನೆ ದೈಹಿಕ ಸಂಪರ್ಕ ಎಲ್ಲವನ್ನೂ ಬಿಟ್ಟು ಕಾಲಿಗೆ ಚಪ್ಪಲಿ ಕೂಡಾ ಮೆಟ್ಟದೆ ಮಂಡಲದ ವ್ರತ ಮುಗಿಸಿ ಅಯ್ಯಪ್ಪನಿಗೆ ಕಾಣಿಕೆಯಾಗಿ ಇರುಮುಡಿ ಹೊತ್ತು ಹೋಗುವ ಪುರುಷರು. ಇರುಮುಡಿಯಲ್ಲಿ ಸಾನಿಟರಿ ಪ್ಯಾಡ್ ಹೊತ್ತು ಹಿಂದೂಗಳನ್ನು ಹೀಯಾಳಿಸುವುದೇ ಸಮಾನತೆಯೆಂದು ಪ್ರತಿಪಾದಿಸಲು ಹೊರಟಿರುವ ರೆಹಾನ, ಮೇರಿ ಸ್ವೀಟಿ, ಲಿಬಿ ಮತ್ತು ಕವಿತಾ ಜಕ್ಕಲ್!
ಮತ್ತೂಂದು ಮುಖ್ಯವಾದ ವಿಚಾರವೆಂದರೆ, ಪ್ರಾಣ ಪ್ರತಿಷ್ಠಾನವಾದ ಮೇಲೆ, ಮನುಷ್ಯರಂತೆ ಹಿಂದೂ ದೇವರುಗಳಿಗೂ ಹಕ್ಕಿದೆ ಎಂಬ ವಾದವಿದೆ. ಹೇಗೆ ಅಯೋಧ್ಯೆಯ ರಾಂ ಲಲ್ಲಾ , ಒಬ್ಬ ವ್ಯಕ್ತಿ ಎಂದು ಡಾ.ಸುಬ್ರಮಣ್ಯಂ ಸ್ವಾಮಿ ರಾಮ ಜನ್ಮಭೂಮಿ ಪ್ರಕರಣದಲ್ಲಿ ವಾದಿಸುತ್ತಿದ್ದಾರೋ ಅಂತೆಯೇ ಮಣಿಕಂಠನೂ Judicially entity ಯೇ..ಅಲ್ಲವೇ? ನಾಲ್ಕು ಪುರುಷ ನ್ಯಾಯಾಧೀಶರು ಪ್ರವೇಶಕ್ಕಾಗಿ ತೀರ್ಪು ನೀಡಿದ ವೇಳೆ, ವಿರೋಧದ ನಿಲುವನ್ನು ಹೊತ್ತು ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ನಮಗಿಲ್ಲ ಎಂದು ನಿಂತವರು, ಪೀಠದ ಏಕೈಕ ಮಹಿಳಾ ಸದಸ್ಯೆ, ಜಸ್ಟಿಸ್ ಇಂದು ಮಲ್ಹೋತ್ರ! ಅವರಿಗಿಂತ ಮಹಿಳೆಯರ ಕುರಿತ ಕಾಳಜಿ ಪುರುಷರಿಗಿರಲಾರದು.
ಮಾಳವಿಕಾ ಅವಿನಾಶ್