Advertisement

ಬೇಂದ್ರೆ ಕಾವ್ಯದ ಗುಣ ದೊಡ್ಡರಂಗೇ ಗೌಡರಲ್ಲಿ ಹರಿದು ಬಂದಿದೆ 

02:40 PM Nov 21, 2017 | |

ಮುಂಬಯಿ: ದೆಹಲಿ ಕರ್ನಾಟಕ ಸಂಘ ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡದ ಹೆಸರಾಂತ ಕವಿ ಡಾ| ದೊಡ್ಡರಂಗೇ ಗೌಡರ “ನೆಲ ಜಲದ ನಾದ’ ಕವನ ಸಂಕಲನವನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಬೆಂಗಳೂರಿನ ಅಂತರಾಳ ತಂಡದವರಿಂದ ದೊಡ್ಡರಂಗೇ ಗೌಡರ ಕವನಗಳನ್ನು ಹಾಡಿಸುವುದರ ನ.  19ರಂದು ವಿನೂತನ ರೀತಿಯಲ್ಲಿ ಆಚರಿಸಿತು.

Advertisement

ನವ ದೆಹಲಿಯ ಜವಾಹರಲಾಲ್‌  ವಿಶ್ವವಿದ್ಯಾಲಯದ ಕನ್ನಡ ಪೀಠದ ಮುಖ್ಯಸ್ಥರಾದ ಡಾ| ಪುರುಷೋತ್ತಮ ಬಿಳಿಮಲೆ ಅವರು ಕವನ ಸಂಕಲನವನ್ನು ಬಿಡುಗಡೆಗೈದು ಮಾತನಾಡಿ, ದೆಹಲಿಕರ್ನಾಟಕ ಸಂಘದಲ್ಲಿ ಡಾ| ದೊಡ್ಡ
ರಂಗೇ ಗೌಡರ ಕವನ ಸಂಕಲನ ಬಿಡುಗಡೆಯಾಗುತ್ತಿರುವುದು ದೆಹಲಿ ಕರ್ನಾಟಕ ಸಂಘಕ್ಕೆ ಒಂದು ಬಹಳ ದೊಡ್ಡ
ಗೌರವ. ನೆಲಕ್ಕೆ ಮತ್ತು ಜಲಕ್ಕೆ ನಾದ ವಿದೆ, ಆದರೆ ಅದಕ್ಕೆ ಅರ್ಥವಿಲ್ಲ, ಆದರೆ ಕವಿಯ ಹತ್ತಿರ ಪದಗಳಿವೆ ಮತ್ತು ಪದಗಳಿಗೆ ಅರ್ಥವೂ ಇದೆ.ಅರ್ಥವಿಲ್ಲದ ನೆಲ ಜಲದ ನಾದಕ್ಕೆ ಪದಗಳ ಮೂಲಕ ಅರ್ಥ ಕೊಡುವುದೇ ದೊಡ್ಡರಂಗೇಗೌಡರ ಕವಿತೆಗಳ ಅತಿದೊಡ್ಡ ಸಾಧನೆ. ಎಷ್ಟೋ ಬಾರಿ ನೆಲೆ ಜಲದ ನಾದ ವನ್ನು ಕೇವಲ ಭಾವುಕವಾಗಿ ಕವಿ ಗಳು ಹಿಡಿಯುವುದುಂಟು. ಆಗ ಅದು ಒಂದು ರೀತಿಯ ವ್ಯಸನ ದಂತೆ ಕಾಣುವುದುಂಟು. ಆದರೆ ಈ ತಪ್ಪನ್ನು ದೊಡ್ಡರಂಗೇಗೌಡರು ಮಾಡುವುದಿಲ್ಲ. ಅವರು ಬೇಂದ್ರೆಯವರ ಹಾಗೆ ನೆಲ ಜಲದ  ನಾದದ ಎಲ್ಲ ಮುಖಗಳನ್ನೂ ಹಿಡಿಯುತ್ತಾರೆ. ಹಾಗಾಗಿ ಅವರಿಗೆ ಜಲದೊಳಗೆ ಜ್ವಾಲಾಮುಖೀಯೂ, ನೆಲದೊಳಗೆ ಅಗ್ನಿಮುಖವೂ ಗೋಚರಿಸುತ್ತದೆ. ಈ ಗುಣ ಗಮನಿಸಿದರೆ ಬೇಂದ್ರೆ ಕಾವ್ಯದ ಒಂದು ಗುಣ ಗೌಡರಲ್ಲಿ ಹರಿದು ಬಂದಂತೆ ತೋರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ವಸಂತ ಶೆಟ್ಟಿ ಬೆಳ್ಳಾರೆ ಅವರು ದೊಡ್ಡ ರಂಗೇ ಗೌಡರನ್ನು ಅಭಿನಂದಿಸಿ, ಅಂತರಾಳ ತಂಡದ ಸಾಧನೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ನಡೆದ ನಿನ್ನರೂಪ ಎದೆಯ ಕಲಕಿ ಹೆಸರಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ| ದೊಡ್ಡರಂಗೇಗೌಡರ ಗೀತೆಗಳನ್ನು ಕನ್ನಡದ ಖ್ಯಾತ ಗಾಯಕರಾದ ರಾಮ
ಚಂದ್ರ ಹಡಪದ್‌ ಮತ್ತು ಶ್ವೇತಾ ಪ್ರಭು ಅವರು ಸುಶ್ರಾವ್ಯವಾಗಿ ಹಾಡಿದರು.

ಇದೇ ಸಂದರ್ಭದಲ್ಲಿ ದೆಹಲಿ ಕನ್ನಡ ಶಾಲೆಯಲ್ಲಿ ಓದುತ್ತಿರುವ, ಮಾತೃ ಭಾಷೆಯಿಂದಿಯಾಗಿದ್ದರೂ, ಕನ್ನಡದಲ್ಲಿ ಅತ್ಯಂತ ಚೆನ್ನಾಗಿ ಮಾತನಾಡುವ 11ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ವತ್ಸಾ ಕೋಲಿ ಮತ್ತು 10 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಹರಿತಿಕಾ ಶರ್ಮಾ ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಸಂಘದ ಉಪಾಧ್ಯಕ್ಷೆ ಆಶಾಲತಾ ಎಂ. ಅವರು ನಿರ್ವಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ. 
ಎಂ. ನಾಗರಾಜ ಅವರು ವಂದಿಸಿದರು.

ರಾಷ್ಟ್ರದ ರಾಜಧಾನಿಯಲ್ಲಿ ತನ್ನ ಕವನ ಸಂಕಲನ ಲೋಕಾರ್ಪಣೆಯಾಗುತ್ತಿರುವುದು ನನ್ನ ಬದುಕಿನ ಭಾಗ್ಯವೆಂದು ನಾನು ಅಂದುಕೊಂಡಿದ್ದೇನೆ. ಯಾವುದೇ ಕನ್ನಡ ಉತ್ಸವ ಅಥವಾ ರಾಜ್ಯೋತ್ಸವ ಹೀಗೆ ಸೃಜನಶೀಲ ಆಗಬೇಕು, ಸಕಾರಾತ್ಮಕ ಆಗಬೇಕು. ನಮ್ಮ ರಾಜ್ಯದ ರಾಜಧಾನಿಯಲ್ಲಿ ಇವತ್ತು ಬೀದಿಯ ರಾಜ್ಯೋತ್ಸವಗಳು, ಆಡಂಬರದ ರಾಜ್ಯೋತ್ಸವಗಳು ಆಗುತ್ತಿದೆ. ಆದರೆ ದೆಹಲಿಯಲ್ಲಿ ಅರ್ಥಪೂರ್ಣ ರಾಜ್ಯೋತ್ಸವ ಆಗುವುದರ ಕಡೆ ತುಡಿತ-ಮಿಡಿತಗಳನ್ನು ಕಂಡಾಗ ಅಂತರಂಗಕ್ಕೆ ತುಂಬ ಆನಂದ ಆಗುತ್ತದೆ ಎಂದರು.  ಇಡೀ ರಾಷ್ಟ್ರ ಜಾಗತೀಕರಣದ ಬಹುದೊಡ್ಡ ಬಿರುಗಾಳಿಗೆ ಸಿಲುಕಿದೆ. ಅದರ ಪ್ರಭಾವ ಎಲ್ಲ ತಲೆಮಾರಿನವರನ್ನೂ ಆವರಿಸಿಕೊಂಡಿದೆ. ಇಂಥ ಸಂದರ್ಭದಲ್ಲಿ ಕನ್ನಡವೂ ಕೂಡಾ ವಿಶ್ವಮುಖೀಯಾಗಿ ಬೆಳೆದು ಇಡೀ ಜಗತ್ತನ್ನು ವ್ಯಾಪಿಸಿಕೊಳ್ಳುತ್ತಾ ಇದೆ ಎಂಬುದನ್ನು ನಾವು ಸಂತೋಷದಿಂದ ಗುರುತಿಸಿಕೊಳ್ಳಬೇಕು 
 – ಡಾ | ದೊಡ್ಡರಂಗೇ ಗೌಡ (ಹಿರಿಯ ಸಾಹಿತಿ, ಕವಿ).

Advertisement
Advertisement

Udayavani is now on Telegram. Click here to join our channel and stay updated with the latest news.

Next