ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ವೇ| ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವಿಜಯದಶಮಿ ಪರ್ವಕಾಲದಲ್ಲಿ ತ್ರಿಗುಣಾತ್ಮಿಕ ಶಕ್ತಿ ತ್ರಿಕುಂಡ ತ್ರಿಚಂಡಿಕಾಯಾಗ ಮಂಗಳವಾರ ಸಂಪನ್ನಗೊಂಡಿತು.
ಆದಿಶಕ್ತಿಯನ್ನು ಪಂಚವರ್ಣಾತ್ಮಕ ವಾಗಿ ಮಂಡಲ ರಚಿಸಲಾಯಿತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಏಕಕಾಲದಲ್ಲಿ ಮೂರು ಕುಂಡಗಳಲ್ಲಿ ಮಹಾಯಾಗವು ಆರಂಭಗೊಂಡಿತು.
ಏಕಕಾಲದಲ್ಲಿ ನೆರವೇರಿದ ಪೂರ್ಣಾಹುತಿಯಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡಿದ ದ್ರವ್ಯಗಳಾದ ತಾವರೆ ಹೂವು, ಕೇಪಳ ಹೂವು, ಪಿಂಗಾರ, ಬಿಲ್ವಪತ್ರೆ, ಎಳ್ಳು, ಗುಗ್ಗಳ ಅಗರು, ಸಾಸಿವೆ, ಬೆಲ್ಲ, ಮೊಸರು, ಹಾಲು, ಕಲ್ಲು ಸಕ್ಕರೆ, ಕೇಸರಿ, ತೆಂಗಿನಕಾಯಿ, ಮಾದ್ರಫಲ, ಕಬ್ಬು, ಅರಳು, ಗಂಧ, ರವಿಕೆ ಕಣ, ಸೀರೆ, ಗಾಜಿನ ಬಳೆ, ಅರಶಿನ, ಕುಂಕುಮವನ್ನು ಯಾಗಕ್ಕೆ ಸಮರ್ಪಿಸಲಾಯಿತು.
ವಿಶೇಷವಾಗಿ ಅಲಂಕರಿಸಲ್ಪಟ್ಟ ಯಾಗ ಮಂಟಪದಲ್ಲಿ ಶ್ರೀ ದೇವಿಯನ್ನು ಉಯ್ನಾಲೆಯಲ್ಲಿ ಕುಳ್ಳಿರಿಸಿ, ಬಗೆಬಗೆಯ ಪೂಜಾದಿ ಅರ್ಚನೆಗಳಿಂದ ಭಜಿಸಲಾಯಿತು. ಅಷ್ಟೋತ್ತರ ಶತನಾಮಾವಳಿಗಳಿಂದ ಕಲೊ³àಕ್ತ ಪೂಜೆ ನೆರವೇರಿತು. ಯಾಗದ ಆರಂಭದಿಂದ ಪೂರ್ಣಾಹುತಿಯ ಅಂತ್ಯದವರೆಗೂ ಪಂಚವಾದ್ಯಗಳು, ಚೆಂಡೆ ವಾದನ, ಕೊಂಬು ಕಹಳೆ, ಶಂಖ, ಜಾಗಟೆಗಳ ನಾದ, ವೇದ ಘೋಷ, ಸುಡುಮದ್ದು ಪ್ರದರ್ಶನದೊಂದಿಗೆ ಯಾಗ ಸಮಾಪನಗೊಂಡಿತು.
ಪುತ್ತೂರಿನ ಗುಲಾಬಿ ಶೆಟ್ಟಿ ಮತ್ತು ಮನೆಯವರು ಹಾಗೂ ಕಾಟಿಪಳ್ಳದ ದೀಪಕ್ ಮತ್ತು ಮನೆಯವರ ಸೇವಾರ್ಥವಾಗಿ ಚಂಡಿಕಾಯಾಗ ಸಮರ್ಪಿಸಲ್ಪಟ್ಟಿತು. ಮಣಿಪಾಲ ಎಂಐಟಿ ವಿದ್ಯಾರ್ಥಿ ಈಶಾನ್ ಕೌಂಡಿನ್ಯ, ದರ್ಪಣ ನೃತ್ಯ ಅಕಾಡೆಮಿಯ ದಕ್ಷ ಅವರಿಂದ ನೃತ್ಯ ಸೇವೆ, ವಿ| ಅಭಿಷೇಕ್ ಚಂದ್ರಶೇಖರ ಅವರಿಂದ ಕರ್ನಾಟಕ ಸಂಗೀತ ಸೇವೆ ನೆರವೇರಿತು.
ದಾಖಲೆ ಪ್ರಮಾಣದ ಮುತ್ತೈದೆ, ಕನ್ನಿಕಾರಾಧನೆ, ದಂಪತಿ, ಆಚಾರ್ಯ ಪೂಜೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಗುಜರಾತಿನ 50 ಮಹಿಳೆಯರು ಸೇರಿದಂತೆ ಸ್ಥಳೀಯ ಮಹಿಳೆಯರಿಂದ ದಾಂಡಿಯಾ ನೃತ್ಯ, ವಿ| ಧನ್ಯಶ್ರೀ ಪ್ರಭು ಅವರಿಂದ ಭರತನಾಟ್ಯ ಸಮರ್ಪಣೆಗೊಂಡಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.