ಕನ್ನಡ ಚಿತ್ರರಂಗದಲ್ಲಿ ಈಗ ಹಳ್ಳಿ ಸೊಗಡಿನ, ನೈಜತೆಗೆ ಹೆಚ್ಚು ಒತ್ತುಕೊಡುವ ಚಿತ್ರಗಳು ಬರುತ್ತವೆ. ಆ ತರಹದ ಸಿನಿಮಾಗಳನ್ನು ಜನ ಕೂಡಾ ಇಷ್ಟಪಡುತ್ತಾರೆ. ಈಗ ಆ ಸಾಲಿಗೆ ಸೇರುವ ಸಿನಿಮಾ “ದೊಡ್ಡಹಟ್ಟಿ ಬೋರೇಗೌಡ’.
ಇದು ಪಕ್ಕಾ ಹಳ್ಳಿಯಲ್ಲಿ, ನೈಜತೆಯೊಂದಿಗೆ ಮೂಡಿಬಂದ ಸಿನಿಮಾ. ಅದೇ ಕಾರಣ ದಿಂದ ಇಡೀ ಸಿನಿಮಾದಲ್ಲಿ ದೇಸಿ ಸೊಗಡು ಎದ್ದು ಕಾಣುತ್ತದೆ. ವ್ಯಕ್ತಿಯೊಬ್ಬರು ಮನೆ ಕಟ್ಟಿಕೊಳ್ಳಲು ಹೇಗೆ ಪರದಾಡುತ್ತಾರೆ, ಈ ಹಾದಿಯಲ್ಲಿ ಅವರು ಅನುಭವಿಸುವ ಕಷ್ಟಗಳೇನು ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ.
ಚಿತ್ರ ಕೇವಲ ಇಷ್ಟಕ್ಕೆ ಸೀಮಿತವಾಗಿಲ್ಲ. ಇಲ್ಲಿ ಸರ್ಕಾರದ ಯೋಜನೆಗಳು ಸಾಮಾನ್ಯ ಜನರ ಕೈ ಸೇರುವಲ್ಲಿ ಏನೆಲ್ಲಾ ಆಗುತ್ತದೆ, ಯಾವ ರೀತಿ ಹಾದಿ ತಪ್ಪುತ್ತದೆ, ಅನಿವಾರ್ಯವಾಗಿ ಲಂಚ ಕೊಡುವ ಸ್ಥಿತಿ ಹೇಗೆ ಬರುತ್ತದೆ ಎಂಬ ಅಂಶವೂ ಈ ಸಿನಿಮಾದ ಹೈಲೈಟ್.
ಇಡೀ ಸಿನಿಮಾ ಬೋರೇಗೌಡ ಎಂಬ ವ್ಯಕ್ತಿಯ ಸುತ್ತ ಸಾಗುತ್ತದೆ. ಮೊದಲೇ ಹೇಳಿದಂತೆ ನಿರ್ದೇಶಕ ರಘು ಕಥೆಯ ಆಶಯಕ್ಕೆ ತಕ್ಕ ಪರಿಸರವನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಸರಕ್ಕೆ ಹೊಂದಿಕೊಳ್ಳುವಂತಹ ಕಲಾವಿದರು ಕೂಡಾ ಈ ಸಿನಿಮಾದ ಪ್ಲಸ್ ಪಾಯಿಂಟ್.
ಚಿತ್ರದ ಬೋರೇಗೌಡ ಪಾತ್ರದಲ್ಲಿ ನಟಿಸಿರುವ ಶಿವಣ್ಣ ಬೀರಿಹುಂಡಿ, ಗೀತಾ ಸೇರಿದಂಥೆ ಇತರ ಕಲಾವಿದರು ಕಥೆಯ ಆಶಯಕ್ಕೆ ತಕ್ಕಂತೆ ನಟಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.
ರವಿ ರೈ