ಕುರುಗೋಡು: ಇತಿಹಾಸ ಪ್ರಸಿದ್ಧ ದೊಡ್ಡ ಬಸವೇಶ್ವರ ಸ್ವಾಮಿಯ ರಥೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ಸಂಜೆ ಜನಸಾಗರವೇ ಹರಿದು ಬರುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ.
ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಬಂದಂತಹ ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ಸರದಿಯಲ್ಲಿ ನಿಂತು ದೊಡ್ಡಬಸವೇಶ್ವರ ಸ್ವಾಮಿಯ ದರ್ಶನ ಪಡೆಯಲು ಮುಗಿಬಿದ್ದಿದ್ದಾರೆ.
ಸಂಜೆ 60 ಅಡಿ ಎತ್ತರದ ವಿವಿಧ ಬಣ್ಣ ಬಣ್ಣದ ಹೂಗಳು ಮತ್ತು ಆಲಂಕಾರಿಕ ವಸ್ತುಗಳು ಮತ್ತು ಗೊಂಬೆಗಳಿಂದ ಅಲಂಕೃತಗೊಂಡಿದ್ದ ರಥವನ್ನು ಎದುರುಬಸವಣ್ಣ ದೇವಸ್ಥಾನದ ವರೆಗೆ ಎಳೆದೊಯ್ದ ಭಕ್ತರು ಪುನಃ ಸ್ವಸ್ಥಳಕ್ಕೆ ತರುತ್ತಾರೆ.
ಜಿಲ್ಲೆಯ ವಿವಿಧ ತಾಲ್ಲೂಕು ಸೇರಿದಂತೆ ನೆರೆಯ ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆ, ಆಂಧ್ರ ಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳಿಂದ ಬಂದಿದ್ದ ಭಕ್ತರು ರಥಬೀದಿಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ರಥದ ದರ್ಶನ ಪಡೆದು, ಹೂ ಹಣ್ಣು ಎಸೆದು ಹರಕೆ ತೀರಿಸುತ್ತಾರೆ.
ರೈತ ಸಮುದಾಯ ಭವನ, ರಾಘವಾಂಕ ಶ್ರೀಗಳ ಮಠ, ಸುಂಕಲಮ್ಮದೇವಿ ದೇವಸ್ಥಾನ, ಕಲ್ಲುಗುಡೇಶ್ವರ ದೇವಸ್ಥಾನ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಮದಿರೆ ಕ್ರಾಸ್ ಬಳಿಯ ಆಂಜನೇಯಸ್ವಾಮಿ ದೇವಸ್ಥಾನ, ಬಾದನಹಟ್ಟಿಯ ಮೂರು ದೇವಸ್ಥಾನಗಳಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಹಲವು ಕಡೆಗಳಲ್ಲಿ ಬರುವ ಬಕ್ತಾಧಿಗಳಿಗೆ ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಮಾರಿಪೂಜೆಯಲ್ಲಿ ಹಿಂದೂಯೇತರರಿಗೆ ಅಂಗಡಿ ನೀಡದಿರಲು ಮನವಿ
ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಿಂದ ಕೆಲ ಜನರು ಕಾಲ್ನಡಿಗೆ ಮೂಲಕ ಬಂದರೆ ಇನ್ನೂ ಹಲವು ಜನ ಚಕ್ಕಡಿ, ಎತ್ತು ಬಂಡಿ, ದ್ವಿಚಕ್ರ ವಾಹನ, ಟ್ರಾಕ್ಟರ್ ಮೂಲಕ ಬಂದು ದೇವರ ದರ್ಶನ ಪಡೆದು ಹರಕೆ ತೀರಿಸುತ್ತಿದ್ದಾರೆ.
ಸತತವಾಗಿ ಮೂರು ದಿನಗಳಿಂದ ಬರುವ ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ವಾಹನಗಳನ್ನು ಪೊಲೀಸರು ಮದ್ಯಾಹ್ನದಿಂದಲೇ ಒಳಗಡೆ ಬಿಡದಂತೆ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಿಸುತ್ತಿದ್ದಾರೆ. ಒಟ್ಟು 6 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನವನ್ನು ಹೂ ಗಳಿಂದ ಅಲಂಕಾರ ಮಾಡಲಾಗಿದೆ. ಜಾತ್ರೆ ನಿಮಿತ್ತ ಮದ್ಯದಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಜಾತ್ರೆ ವೇಳೆ ಯಾವುದೇ ಅಹಿತಕರ ಘಟನೆ ಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನೂ ವಿಶೇಷ ವಾಗಿ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ್ ಕಂಪ್ಲಿ ಯಿಂದ ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನ ಕ್ಕೆ ಕಾಲ್ನಡಿಗೆ ಮೂಲಕ ಬಂದು ದರ್ಶನ ಪಡೆದಿದ್ದಾರೆ. ಇದರ ಮದ್ಯೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಂಪಿ ಉತ್ಸವದಂತೆ ಕುರುಗೋಡು ಮತ್ತು ಕಂಪ್ಲಿ ಉತ್ಸವ ಮಾಡಲಾಗುವುದು ಎಂದಿದ್ದಾರೆ.