ದೊಡ್ಡಬಳ್ಳಾಪುರ: ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಗಣ್ಯರಿಗೆ ನ. 25ರಂದು (ಇಂದು) ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಜನಾಭಿನಂದನ ಸಮಾರಂಭಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಆಹ್ವಾನಿಸದೇ ಅವಮಾನಿಸಲಾಗಿದೆ ಎಂದು ತಾಲೂಕಿನ ಒಕ್ಕಲಿಗ ಸಮುದಾಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ತಾಲೂಕು ಬ್ಲಾಕ್ ಅಧ್ಯಕ್ಷ ಬೈರೇಗೌಡ, ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ನ.11ರಂದು ನಡೆದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಉದ್ಘಾಟನೆ ಕಾರ್ಯವನ್ನು ಸರ್ಕಾರಿ ಕಾರ್ಯಕ್ರಮವೆಂದು ಬಿಜೆಪಿ ಬಿಂಬಿಸಿದಾಗ್ಯೂ, ಆ ಉದ್ಘಾಟನೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಡಿ.ಕೆ. ಶಿವಕುಮಾರ್, ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ, ಟಿ.ವೆಂಕಟರಮಣಯ್ಯ ಅವರನ್ನು ಕಡೆಗಣಿಸಿ ಲೋಪವನ್ನೆಸಗಿದ್ದರು. ಈಗ ದೊಡ್ಡಬಳ್ಳಾಪುರದಲ್ಲಿ ನಾಡಪ್ರಭು ಕೆಂಪೇಗೌಡ ಬಳಗ ಕಟ್ಟಿಕೊಂಡು ಅವರ ಪ್ರತಿಮೆ ಹೆಸರಲ್ಲಿ ರಾಜಕೀಯ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.
ನಾಡಪ್ರಭು ಕೆಂಪೇಗೌಡರು ಒಂದೇ ಸಮುದಾಯಕ್ಕೆ ಸೀಮಿತರಾದವರಲ್ಲ: ಜೂ. 27ರಂದು ಕೆಂಪೇಗೌಡ ಜಯಂತಿಯನ್ನು ತಾಲೂಕಿನ ಎಲ್ಲಾ ಪಕ್ಷ, ಜನಾಂಗದವರು ಒಂದಾಗಿ ಯಶಸ್ವಿ ಕಾರ್ಯಕ್ರಮ ಮಾಡಲಾಯಿತು. ಪ್ರಗತಿ ಪ್ರತಿಮೆ ಉದ್ಘಾಟನೆ ಕುರಿತಾಗಿ ಕೆಂಪೇಗೌಡ ಮೃತ್ತಿಗೆ ಸಂಗ್ರಹದ ವೇಳೆ ಎಲ್ಲರೂ ಒಂದಾಗಿ ಯಶಸ್ವಿಗೊಳಿಸಲಾಗಿತ್ತು.ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಲು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಾಗಲು ಯಾರ ಶ್ರಮ ಅಡಗಿದೆ ಎಂಬುದು ಬಿಜೆಪಿ ಪಕ್ಷ ಮರೆತು ವರ್ತಿಸುತ್ತಿದೆ. ಕೆಂಪೇಗೌಡ ಅವರು ಕೇವಲ ಒಂದು ಪಕ್ಷ, ಸಮುದಾಯಕ್ಕೆ ಸೀಮಿತರಾದವರಲ್ಲ. ಕೆಂಪೇಗೌಡರ ಹೆಸರು, ಪ್ರತಿಮೆಯನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಒಕ್ಕಲಿಗ ಸಮುದಾಯವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಈ ರಾಜಕೀಯವನ್ನು ಒಕ್ಕಲಿಗ ಸಮುದಾಯ ಒಟ್ಟಾಗಿ ಖಂಡಿಸುತ್ತಿದೆ ಎಂದರು.
ಉತ್ತಮ ಬೆಳೆವಣಿಗೆಯಲ್ಲ: ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಬಿಜೆಪಿ ಧರ್ಮ ಪಾಲನೆ, ಇತಿಹಾಸದ ಬಗ್ಗೆ ಪದೇ ಪದೆ ಪುಂಕಾನು ಪುಂಕವಾಗಿ ಹೇಳುತ್ತದೆ. ಆದರೆ, ಇತಿಹಾಸವನ್ನು ತಿರುಚುತ್ತಿರುವುದು ಉತ್ತಮ ಬೆಳೆವಣಿಗೆಯಲ್ಲ. ಕಿಡಿಗೇಡಿಗಳ ಮಾತು ಕೇಳಿ ಕೆಂಪೇಗೌಡರ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ಧರ್ಮ, ಜಾತಿ ಹೆಸರಲ್ಲಿ ಒಡೆಯುವುದಕ್ಕೆ ಸೀಮಿತವಾಗಿದ್ದು, ರೈತರಿಗೆ ಹಾಲಿನ ದರ ಹೆಚ್ಚಳಕ್ಕೆ ಅವಕಾಶ ನೀಡಿರಲಿಲ್ಲ ಎಂದರು.
ಸಭೆ ನಡೆಸದೆ ಏಕಾಏಕಿ ನಿರ್ಣಯ: ಯಾವುದೇ ಪೂರ್ವಭಾವಿ ಸಭೆ ನಡೆಸದೆ ಏಕಾಏಕಿ ನಿರ್ಣಯ ಕೈಗೊಂಡಿರುವುದು ಖಂಡನೀಯ. ಈ ಕುರಿತು ಪ್ರತಿಭಟನೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ. ತಾಪಂ ಮಾಜಿ ಅಧ್ಯಕ್ಷ ನಾರಾಯಣ ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಜಗನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಮುಖಂಡ ಹೇಮಂತ ರಾಜ್, ರಾಜಣ್ಣ, ಶ್ರೀನಿವಾಸ ರೆಡ್ಡಿ, ರುದ್ರಮೂರ್ತಿ, ಮುನಿ, ರೆಡ್ಡಿ, ಅಶೋಕ್, ಆರೂಢಿ ಹರೀಶ್ ಮತ್ತಿತರರಿದ್ದರು.
ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ: ಭೈರೇಗೌಡ ಕೆಂಪೇಗೌಡರ ಮೇಲೆ ಅಭಿಮಾನದಿಂದ ಕಾರ್ಯಕ್ರಮ ಮಾಡುತ್ತಿಲ್ಲ. ಬದಲಾಗಿ ಶಾಂತಿಪ್ರಿಯ
ತಾಲೂಕಾದ ದೊಡ್ಡಬಳ್ಳಾಪುರದಲ್ಲಿ ಜಾತಿ-ಜಾತಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಪ್ರತಿನಿಧಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ, ಶಾಸಕ ಟಿ. ವೆಂಕಟರಮಣಯ್ಯ ಅವರನ್ನು ಕಡೆಗಣಿಸಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಖಂಡನೀಯ. ಕಾರ್ಯಕ್ರಮದ ಆಯೋಜಕರು ಶಾಸಕ ಸ್ಥಾನಕ್ಕೆ ಗೌರವ ನೀಡುವುದನ್ನು ಕಲಿಯಬೇಕಿದೆ ಎಂದು ಕಾಂಗ್ರೆಸ್ ತಾಲೂಕು ಬ್ಲಾಕ್ ಅಧ್ಯಕ್ಷ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.