Advertisement

ಭಕ್ತರ ಸಮ್ಮುಖದಲ್ಲಿ ದೊಡ್ಡ ಹೆಜ್ಜೂರು ಜಾತ್ರಾರಂಭ

12:26 PM Jan 17, 2018 | Team Udayavani |

ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ದೊಡ್ಡ ಹೆಜ್ಜೂರಿನ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವವು ಮಂಗಳವಾರ ಸಾವಿರಾರು ಭಕ್ತರ ಉದ್ಘೋಷದ ನಡುವೆ ವಿಜೃಂಭಣೆಯಿಂದ ಜರುಗಿತು.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಲಕ್ಷ್ಮಣತೀರ್ಥ ನದಿದಂಡೆಯಲ್ಲಿರುವ ನೂರಾರು ವರ್ಷಗಳ ಐತಿಹಾಸವುಳ್ಳ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಮಾರನೆ ದಿನ ನಡೆಯುವ ಈ ರಥೋತ್ಸವದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸೋಮವಾರ ಸಂಜೆ ದೇವಸ್ಥಾನದಲ್ಲಿ ಹೋಮ-ಹವನಗಳು, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಥಕ್ಕೆ ಕಳಸ ಪ್ರತಿಷ್ಠಾಪಿಸಲಾಯಿತು. ಮಂಗಳವಾರ ಕೆ.ಆರ್‌.ನಗರ ತಾಲೂಕಿನ ಚುಂಚಕಟ್ಟೆ ಶ್ರೀರಾಮದೇವರ ರಥೋತ್ಸವದ ನಂತರ ಅಲ್ಲಿಂದ ಪ್ರಸಾದ ತಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆನಂತರ

ಶ್ರೀವೀರಾಂಜನೇಯ ಉತ್ಸವಮೂರ್ತಿಯನ್ನು ದೇವಳದಿಂದ ಹೊರತಂದು ಪ್ರದಕ್ಷಿಣೆ ಹಾಕಿಸಿ, ಮಧ್ಯಾಹ್ನ 12.45ಕ್ಕೆ ರಥದಲ್ಲಿ ಇಟ್ಟು ನಂತರ ಸಾವಿರಾರು ಭಕ್ತರು ಹೋ ಎಂದು ಕೂಗುತ್ತಾ, ಆಂಜನೇಯ ಸ್ವಾಮಿಗೆ ಜೈಕಾರ ಹಾಕುತ್ತಾ ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಎಳೆದು ತಂದು ಸ್ವಸ್ಥಾನಕ್ಕೆ ನಿಲ್ಲಿಸಿದರು.

ರಥೋತ್ಸವದ ವೇಳೆ ನವ ದಂಪತಿಗಳು ಸೇರಿದಂತೆ ಭಕ್ತರು ಹಣ್ಣು ದವನ ಎಸೆದು ಪುನೀತರಾದರು. ಜನರು ರಥ ಎಳೆಯುವ ರಭಸಕ್ಕೆ ರಥ ನಿಯಂತ್ರಿಸುವ ಚಕ್ರಕ್ಕೆ ನೀಡುತ್ತಿದ್ದ ಹಲವು ಗೊದ್ದಗಳು ನಜ್ಜುಗುಜಾjದವು. ಬೆಳಗ್ಗೆಯಿಂದಲೇ ಎತ್ತಿನಗಾಡಿ, ವಾಹನಗಳಲ್ಲಿ ಆಗಮಿಸಿದ ಜನರು ರಥೋತ್ಸವದ ವೇಳೆಗೆ ಇಡೀ ಜಾತ್ರೆ ಭರ್ತಿಯಾಗಿತ್ತು. ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕಗಳು ನಡೆಯಿತು.

Advertisement

ಹರಕೆ ಸಲ್ಲಿಸಿದ ಭಕ್ತರು: ಹರಕೆ ಹೊತ್ತ ಮಂದಿ ಹಿಂದಿನ ದಿನವೇ ಜಾತ್ರಾ ಮಾಳದಲ್ಲಿ ಕ್ಯಾಂಪ್‌ ಹಾಕಿದ್ದರು. ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ತಲೆ ಮುಡಿಕೊಟ್ಟು ಬಂದವರು, ಬಾಯಿಬೀಗ ಹಾಕಿಕೊಂಡು ನಡೆದು ಬಂದು ದೇವಾಲಯ ಸುತ್ತ ಉರುಳು ಸೇವೆ ಸಲ್ಲಿಸಿದರು. ನದಿ ದಂಡೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಬುತ್ತಿ ತಂದಿದ್ದ ಅಕ್ಕ-ಪಕ್ಕದ ಗ್ರಾಮಸ್ಥರು ನದಿ ದಂಡೆಯ ಗದ್ದೆ ಬಯಲಲ್ಲಿ ಪರಸ್ಪರ ಹಂಚಿಕೊಂಡು ಊಟಮಾಡಿದರು.

ಕಾಡಂಚಿನ ಕಾಡ ಕುಡಿಗಳಲ್ಲದೆ, ಎಚ್‌.ಡಿ.ಕೋಟೆ ಹಾಗೂ ಕೊಡಗು ಜಿಲ್ಲೆಗಳಿಂದಲೂ ಆದಿವಾಸಿ ನವ ಜೋಡಿಗಳು ಜಾತ್ರೆಗಾಗಮಿಸಿ ಪೂಜೆ ಸಲ್ಲಿಸಿದರು. ಶಾಸಕ ಎಚ್‌.ಪಿ.ಮಂಜುನಾಥ್‌, ಮಾಜಿ ಸಚಿವ ಎಚ್‌.ವಿಶ್ವನಾಥ್‌, ಜಿ.ಪಂ. ಸದಸ್ಯ ಲನಿಲ್‌ ಚಿಕ್ಕಮಾದು, ಮಾಜಿ ಸದಸ್ಯರಾದ ಸಿ.ಟಿ.ರಾಜಣ್ಣ, ತಾ.ಬಿಜೆಪಿ ಅಧ್ಯಕ್ಷ ಹನಗೋಡುಮಂಜುನಾಥ್‌, ಜಾತ್ರಾ ಸಮಿತಿಯ ಅಧ್ಯಕ್ಷರಾದ ಶೇಖರೇಗೌಡ,

ಕಾರ್ಯದರ್ಶಿ ಧರಣೇಶ್‌ ಎಪಿಎಂಸಿ ಸದಸ್ಯ ಸುಭಾಷ್‌, ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು, ತಾಪಂ ಸದಸ್ಯರಾದ ಮಂಜುಳಾ, ಪುಷ್ಪಲತಾ, ಗ್ರಾಪಂ ಅಧ್ಯಕ್ಷರಾದ ಮಹದೇವಿ,ಎಚ್‌.ಬಿ.ಮಧು, ಮಹೇಶ್‌,ಚೆಲುವರಾಜು, ಪಾಪಣ್ಣ ಸೇರಿದಂತೆ 16 ಹಳ್ಳಿಯ ಗ್ರಾಮಸ್ಥರು ಜಾತ್ರಾ ಯಶಸ್ಸಿಗೆ ಶ್ರಮಿಸಿದರು. ವೃತ್ತ ನಿರೀಕ್ಷಕ ಪೂವಯ್ಯ, ಎಸ್‌.ಐ.ಪುಟ್ಟಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸುಗಮ ರಸ್ತೆ ಸಂಚಾರ: ಜಾತ್ರೆಯ ಮಾಳವು  ಮುಖ್ಯ ರಸ್ತೆಯ ಸಮೀಪದಲ್ಲಿಯೇ ಇರುವುದರಿಂದ ಜಾತ್ರೆಗೆ ಬರುವ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಕೆರೆ ಕೋಡಿ ಭಾಗದ ಜಮೀನು ಸೇರಿದಂತೆ ಗ್ರಾಮದ ಸುತ್ತಲ 4 ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದ್ದರು. ಹುಣಸೂರು ನಗರದ ಶ್ರೀ ಲಕ್ಷ್ಮೀ ಟ್ರ್ಯಾಕ್ಟರ್ನ ಮಾಲಿಕ ಶ್ರೀಹರ್ಷ ಜಾತ್ರೆಗೆ ಆಗಮಿಸಿದ್ದವರಿಗೆ ಅನ್ನದಾಸೋಹ ಏರ್ಪಡಿಸಿದ್ದರೆ, ಕೆಲ ಯುವಕ ಸಂಘಗಳು ಮಜ್ಜಿಗೆ-ಪಾನಕ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next