Advertisement

ಡಾಕ್ಟ್ರೇ, ಇದು ಸೀರಿಯಸ್ಸಾ? ವಾಸಿಯಾಗುತ್ತಾ?

08:47 AM Sep 19, 2019 | mahesh |

ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಪಿ.ಸಿ.ಓ.ಎಸ್‌, ಪಿ.ಸಿ.ಓ.ಡಿ. ರೋಗ ಲಕ್ಷಣಗಳು ಗೋಚರಿಸುತ್ತಿದ್ದರೂ ಅನೇಕರು ಅದನ್ನು ಗುರುತಿಸಿ, ಚಿಕಿತ್ಸೆ ಪಡೆಯುವುದಿಲ್ಲ. ಈ ಸಮಸ್ಯೆಯೇ ಮುಂದೆ ಬಂಜೆತನಕ್ಕೆ ಕೂಡಾ ಕಾರಣವಾಗಬಹುದು. ಹಾಗಾಗಿ, ಸೆಪ್ಟೆಂಬರ್‌ ತಿಂಗಳನ್ನು, ಪಿ.ಸಿ.ಓ.ಎಸ್‌. ಮತ್ತು ಪಿ.ಸಿ.ಓ.ಡಿ.ಯ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಆ ನಿಮಿತ್ತ ಪಿ.ಸಿ.ಓ.ಎಸ್‌. ಕುರಿತು ಈ ಲೇಖನ.

Advertisement

ಸ್ತ್ರೀರೋಗ ತಜ್ಞರು ತಮ್ಮ ರೋಗಿಗಳಲ್ಲಿ ಅತೀ ಸಾಮಾನ್ಯವಾಗಿ ಕಾಣುವ ಚಿಹ್ನೆಗಳ ಸಮೂಹ (ಸಿಂಡ್ರೋಮ್‌)ದ ತೊಂದರೆಯೇ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ಅಥವಾ ಪಿ.ಸಿ.ಓ.ಎಸ್‌. ಅನೇಕ ಬಾರಿ ರೋಗಿ, ತಾನೇ ರೋಗ ನಿರ್ಧಾರ ಮಾಡಿಕೊಂಡು, “ಡಾಕ್ಟ್ರೇ, ನನಗೆ ಪಿ.ಸಿ.ಓ.ಡಿ. ಇದೆ. ಅದಕ್ಕೇ ನಿಮ್ಮ ಬಳಿ ಬಂದೆ’ ಎನ್ನುತ್ತಾರೆ. ಹಾಗಾದ್ರೆ, ಪಿ.ಸಿ.ಓ.ಡಿ/ ಪಿ.ಸಿ.ಓ.ಎಸ್‌ ಅಂದ್ರೆ ಏನು?

1935ರಲ್ಲಿ ಡಾ. ಸ್ಟೀನ್‌ ಮತ್ತು ಡಾ. ಲೆವೆಂತಾಲ್‌ ಎಂಬ ಇಬ್ಬರು ವೈದ್ಯರು, ಅಂಡಾಶಯಗಳಲ್ಲಿ ನೀರಿನ ಗುಳ್ಳೆಗಳ ಸಮೂಹ ಇರುವ ಕಾಯಿಲೆಯನ್ನು ವಿವರವಾಗಿ ವೈದ್ಯರಂಗಕ್ಕೆ ನಿರೂಪಿಸಿದರು. ಅದನ್ನು ಸ್ಟೀನ್‌-ಲೆವೆಂತಾಲ್‌ ಸಿಂಡ್ರೋಮ್‌ ಎಂದೇ ಕರೆಯಲಾಯಿತು. ಮುಂದಿನ ಅನೇಕ ದಶಕಗಳವರೆಗೆ ಇದನ್ನು, ಅಂಡಾಶಯದಲ್ಲಿ ಪಿ.ಸಿ.ಓ.ಡಿ. ರೋಗ ಲಕ್ಷಣದಲ್ಲಿ ಅನೇಕ ನೀರ್ಗುಳ್ಳೆಗಳು (polycysts) ಇರುವ ಕಾಯಿಲೆ (disease), polycystic ovarian disease
(PCOD) ಎಂದು ಕರೆದರು. ಆದರೆ, ಮುಂದಿನ ವೈದ್ಯಕೀಯ ಆವಿಷ್ಕಾರಗಳಿಂದ ಈ ತೊಂದರೆ ಕೇವಲ ಅಂಡಾಶಯಗಳಿಗಷ್ಟೇ ಸೀಮಿತವಾಗಿಲ್ಲ, ಶರೀರದ ಇನ್ನೂ ಅನೇಕ ಜೀವರಸಾಯನ ವಸ್ತುಗಳ ಏರುಪೇರು, ಮಾಸಿಕ ಋತುಚಕ್ರದ ತೊಂದರೆ, ಮಧುಮೇಹ ಇತ್ಯಾದಿಗಳೊಂದಿಗೆ ಜೊತೆಗೂಡಿರಬಹುದು ಎಂದು ತಿಳಿದ ನಂತರ, ಈ ತೊಂದರೆಗೆ ಟಟlycysಠಿಜಿc ಟvಚrಜಿಚn synಛrಟಞಛಿ(ಕಇOಖ) - ಅನೇಕ ತೊಂದರೆ ಹಾಗೂ ಚಿಹ್ನೆಗಳ ಸಮೂಹ ಎಂದು ಹೆಸರಿಸಲಾಯಿತು. ಅಂದರೆ, ಕಇOಈ ಎಂಬುದು ಹಳೆಯ ಹೆಸರು. ಕಇOಖ ಎಂಬುದು ಇದಕ್ಕೆ ಸೂಕ್ತವಾದ ಹೆಸರು.

ಏತಕ್ಕಾಗಿ ಹೀಗಾಗುತ್ತದೆ?
ಶರೀರದ ಜೀವರಾಸಾಯನಿಕಗಳ ಬದಲಾವಣೆಯೇ ಇದಕ್ಕೆ ಕಾರಣವೆನ್ನಲಾಗುತ್ತದೆ. ಅಂದರೆ, ಶರೀರದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್‌ (ಸಕ್ಕರೆ ಅಂಶವನ್ನು ಹಿಡಿತದಲ್ಲಿ ಇಡುವ ಹಾರ್ಮೋನು) ಎಂಬ ರಾಸಾಯನಿಕಕ್ಕೆ ಸಮರ್ಪಕವಾಗಿ ಕೆಲಸ ನಿರ್ವಹಿಸಲು ತಡೆ ಉಂಟಾದಾಗ, ಹೆಚ್ಚೆಚ್ಚು ಇನ್ಸುಲಿನ್‌ ಉತ್ಪತ್ತಿಯಾಗುತ್ತದೆ. ಇದು ಸ್ತ್ರೀಯರ ಶರೀರದಲ್ಲಿ ಪುರುಷರ ಹಾರ್ಮೋನುಗಳ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಇದರಿಂದ ಮಹಿಳೆಗೆ ಪ್ರತಿ ತಿಂಗಳು, ಅಂಡಾಶಯದಿಂದ ಬಿಡುಗಡೆ ಆಗಬೇಕಾದ ಅಂಡಾಣುವಿನ ಬೆಳವಣಿಗೆ ಅರ್ಧಕ್ಕೇ ನಿಂತು, ಒಂದು ಗುಳ್ಳೆಯಂತೆ ಗೋಚರಿಸುತ್ತದೆ. ಹೀಗೆ ಪ್ರತಿ ತಿಂಗಳೂ ಅಂಡಾಣುವಿನ ಬಿಡುಗಡೆಗೆ ತೊಂದರೆಯಾದಾಗ ಅಂಡಾಶಯದಲ್ಲಿ ನೀರ್ಗುಳ್ಳೆಗಳ ಸಮೂಹವೇ ಉಂಟಾಗುತ್ತದೆ. ಇದೇ ಕಾರಣದಿಂದ, ಮಾಸಿಕ ಋತುಚಕ್ರವೂ ಕ್ರಮಬದ್ಧವಾಗಿ ಆಗುವುದಿಲ್ಲ. ಪುರುಷರ ಹಾರ್ಮೋನು ಪರಿಣಾಮ ಅತೀ ಹೆಚ್ಚಿದಾಗ ಮುಖ, ಎದೆ, ಹೊಟ್ಟೆಯಲ್ಲೆಲ್ಲಾ ಕೂದಲು ಬೆಳೆಯಬಹುದು. ಈ ತೊಂದರೆಗೆ ಅನುವಂಶಿಕತೆ ಕಾರಣವಾಗಿರಬಹುದು. ಅನೇಕ ವೇಳೆ ಅತೀ ತೂಕ (ಬೊಜ್ಜು) ಇದಕ್ಕೆ ಮೂಲ ಕಾರಣವಿರುತ್ತದೆ.

ಇದರ ಲಕ್ಷಣಗಳೇನು?
ಈ ತೊಂದರೆ ಇರುವ ಬಹುತೇಕ ಹೆಣ್ಣುಮಕ್ಕಳಿಗೆ ಋತುಚಕ್ರದಲ್ಲಿ ಏರುಪೇರಾಗುತ್ತದೆ. ಅಂದರೆ, ಮಾಸಿಕ ನಿಗದಿತವಾಗಿ ಮುಟ್ಟು ಆಗುವುದಿಲ್ಲ. ಎರಡು ತಿಂಗಳಿಂದ ಹಿಡಿದು 7-8 ತಿಂಗಳವರೆಗೂ ಮುಟ್ಟಾಗದ ಮಹಿಳೆಯರೂ ಇದ್ದಾರೆ. ಅಲ್ಲದೆ, ಹೀಗೆ ತಡೆದು ಋತುಚಕ್ರವಾದಾಗ ರಕ್ತಸ್ರಾವ ವಿಪರೀತವಾಗಿ ಆಗಬಹುದು. ಪದೇಪದೆ ಹೀಗಾದಲ್ಲಿ ರಕ್ತಹೀನತೆ, ಸುಸ್ತು, ಕೆಲಸದಲ್ಲಿ ನಿರಾಸಕ್ತಿ ಇತ್ಯಾದಿ ತೊಂದರೆಗಳು ಕಾಣಿಸಬಹುದು.

Advertisement

ಅನೇಕರು PCOSನಿಂದ ತೂಕ ಹೆಚ್ಚಾಗಿದೆ ಎಂದುಕೊಳ್ಳುತ್ತಾರೆ. ಆದರೆ, ಇದೊಂದು ವಿಷವರ್ತುಲವಿದ್ದಂತೆ. ಅತೀ ತೂಕದಿಂದ PCOS ತೊಂದರೆ ಹಾಗೂ PCOS ತೊಂದರೆ ಹೆಚ್ಚಾದಂತೆ ಬೊಜ್ಜು ಕೂಡಾ ಹೆಚ್ಚಾಗುತ್ತದೆ.

ಈ ಮೊದಲೇ ಹೇಳಿದಂತೆ ಪ್ರತೀ ತಿಂಗಳೂ ಒಂದು ಅಂಡಾಣು ಉತ್ಪತ್ತಿ ಆಗದಿರುವುದರಿಂದ ಅನೇಕರು ವೈದ್ಯರ ಬಳಿಗೆ ಬರುವ ಕಾರಣ ಮಕ್ಕಳಾಗುತ್ತಿಲ್ಲ ಎಂದು. ಸ್ತ್ರೀಯರಿಗೆ ಬಹಳವಾಗಿ ಇರುಸುಮುರುಸು ಮಾಡುವ ಮತ್ತೂಂದು ತೊಂದರೆ ಎಂದರೆ, ಮುಖ, ಮೇಲುªಟಿ, ಎದೆ, ಹೊಕ್ಕಳಿನಿಂದ ಯೋನಿಯವರೆಗಿನ ಹೊಟ್ಟೆಯ ಭಾಗ, ತೊಡೆ, ಕೈಕಾಲು ಇಲ್ಲೆಲ್ಲಾ ದಟ್ಟವಾಗಿ ಕೂದಲು ಬೆಳೆಯಬಹುದು. ಆಗೊಮ್ಮೆ ಈಗೊಮ್ಮೆ ಈ ಸಮಸ್ಯೆಯುಳ್ಳವರು, ಪದೇಪದೆ ಗರ್ಭಪಾತ ಆಗುತ್ತದೆ ಎಂದೋ, ಮಧುಮೇಹ (ಡಯಾಬಿಟೀಸ್‌) ಎಂದೋ ವೈದ್ಯರಲ್ಲಿಗೆ ಬರುತ್ತಾರೆ.

ಖಾಯಿಲೆಯ ನಿರ್ಧಾರ
ಇದು ಬಹಳ ಸುಲಭ. ಅಂಡಾಣು ಬಿಡುಗಡೆ ಆಗುತ್ತಿಲ್ಲ ಎಂಬುದು ಋತುಸ್ರಾವದ ಏರುಪೇರಿಂದ, ಮಕ್ಕಳಾಗದಿರುವುದರಿಂದ ಗೊತ್ತಾಗುತ್ತದೆ. ಇನ್ನು ದೇಹದಲ್ಲಿ ಪುರುಷರ ಹಾರ್ಮೋನು ಹೆಚ್ಚುತ್ತಿರುವುದು ಕೂದಲು ಬೆಳೆಯುವುದು, ಹೊಟ್ಟೆಯ ಸುತ್ತ ಬೊಜ್ಜು ಇತ್ಯಾದಿಗಳಿಂದ ತಿಳಿಯುತ್ತದೆ. ಅಗತ್ಯವಿದ್ದರೆ, ಪುರುಷರ ಹಾರ್ಮೋನುಗಳ ಮಟ್ಟವನ್ನು ರಕ್ತ ಪರೀಕ್ಷೆಯ ಮೂಲಕ ತಿಳಿಯಬಹುದು.

ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನಿಂದ ಅಂಡಾಶಯಗಳಲ್ಲಿ ನೀರಿನ ಗುಳ್ಳೆಗಳು ಇರುವುದನ್ನು ಕಾಣಬಹುದು. ಗುಳ್ಳೆಗಳಿದ್ದರೆ PCOS ಎಂದೇನೂ ಅಲ್ಲ. ಅತೀ ರೋಮ, ಮುಟ್ಟಿನ ಏರುಪೇರು, ಅಂಡಾಣು ಬಿಡುಗಡೆ ಆಗದಿರುವುದು, ಅಂಡಾಶಯದಲ್ಲಿ ನೀರಿನ ಗುಳ್ಳೆ ಕಾಣುವುದು…ಇವುಗಳಲ್ಲಿ ಯಾವುದೇ ಎರಡು ಚಿಹ್ನೆಗಳು ಇದ್ದಲ್ಲಿ ಕಇOಖ ಎಂದು ಹೇಳಬಹುದು.

ಚಿಕಿತ್ಸೆ ಬೇಕೇ ಬೇಕಾ?
ಹೌದು. ಇದು ಮುಂದಿನ ಮಧುಮೇಹ ಕಾಯಿಲೆಯ ಮುನ್ನುಡಿ ಇರಬಹುದು. ದೀರ್ಘ‌ಕಾಲ ಮುಟ್ಟಿನ ಏರುಪೇರಿನಿಂದ ಗರ್ಭಕೋಶದ ಕ್ಯಾನ್ಸರ್‌ ಬರಬಹುದು. ಮಕ್ಕಳಾಗದಿರಬಹುದು. ಅನೇಕ ಬಾರಿ ಸಾಂಸಾರಿಕ ವಿರಸಕ್ಕೂ ಕಾರಣವಾಗಬಹುದು.

ಹಾಗಾದರೆ ಏನು ಚಿಕಿತ್ಸೆ ಇದೆ?
ಚಿಕಿತ್ಸೆಯ ರೀತಿಯನ್ನು ರೋಗಿ ಯಾವ ತೊಂದರೆಯಿಂದ ಬಳಲುತ್ತಿದ್ದಾರೆಂದು ಪರೀಕ್ಷಿಸಿ ನಿರ್ಧರಿಸಬೇಕಾಗುತ್ತದೆ.
1. ಮುಟ್ಟು ಸರಿಯಾಗಿ ಆಗುತ್ತಿಲ್ಲ ಎಂದು ಬರುವ ಮಹಿಳೆಯರಿಂದ ಕೂಲಂಕಷವಾಗಿ ಋತುಚಕ್ರದ ಮಾಹಿತಿ ಪಡೆದುಕೊಳ್ಳಬೇಕು. ವರ್ಷಕ್ಕೆ 5-6 ಬಾರಿ ಮುಟ್ಟಾಗುತ್ತಿದ್ದಲ್ಲಿ, ಅವರ ತೂಕದ ಬಗ್ಗೆ, ಊಟ-ತಿಂಡಿಯ ಬಗ್ಗೆ ಎಚ್ಚರ ವಹಿಸಲು ತಿಳಿಸಿ, ಆಗಾಗ್ಗೆ ತಪಾಸಣೆಗೆ ಬರಲು ತಿಳಿಸುತ್ತೇವೆ. 5-6 ಬಾರಿಗಿಂತ ಕಡಿಮೆ ಮುಟ್ಟಾಗುತ್ತಿದ್ದಲ್ಲಿ ಮಾಸಿಕ ಋತುಚಕ್ರ ಸರಿಪಡಿಸಲು 6ರಿಂದ 9 ತಿಂಗಳವರೆಗೆ ಚಿಕಿತ್ಸೆ ಬೇಕು.
2. ಅತೀ ರೋಮದ ಬೆಳವಣಿಗೆ ಇದ್ದವರಿಗೆ ಪುರುಷರ ಹಾರ್ಮೋನುಗಳನ್ನು ಎದುರಿಸುವ ಔಷಧಿ ಕೊಡಬೇಕು ಹಾಗೂ ರೋಮ ನಿವಾರಣೆಗೆ ತಾತ್ಕಾಲಿಕವಾಗಿ ಪ್ರಸಾದನ ತಜ್ಞರ ಸಲಹೆ ಪಡೆಯಬಹುದು.
3. ಸಕ್ಕರೆ ಅಂಶದ ಏರುಪೇರು ಇದ್ದಲ್ಲಿ ಅಥವಾ ಮಗು ಆಗಲು ನೀಡುವ ಔಷಧಿ ಕೆಲಸ ಮಾಡದಿದ್ದಲ್ಲಿ ಸಕ್ಕರೆ ಕಾಯಿಲೆಗೆ ನೀಡುವ ಔಷಧಿ ನೀಡಲಾಗುತ್ತದೆ. ಇನ್ನೂ ಮಗುವಾಗದಿದ್ದಲ್ಲಿ ಉದರದರ್ಶಕ (laparoscopy)ದ ಮೂಲಕ ಅಂಡಾಶಯಕ್ಕೆ ವಿಶೇಷ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ಜೀವನಶೈಲಿಯಲ್ಲಿ ಬದಲಾವಣೆ
ಇತ್ತೀಚಿನ ದಿನಗಳಲ್ಲಿ ಅನೇಕ ಕಾಯಿಲೆಗಳು ಅವ್ಯವಸ್ಥ ಜೀವನಶೈಲಿಯ ಕಾರಣದಿಂದಲೇ ಉಂಟಾಗುತ್ತವೆ. ಅವುಗಳಲ್ಲಿ ಪಿಸಿಓಎಸ್‌ ಕೂಡಾ ಒಂದು. ಹಾಗಾಗಿ ಈ ಸಮಸ್ಯೆಯ ಪರಿಹಾರಕ್ಕೆ, ಔಷಧೋಪಚಾರಗಳ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತಿಮುಖ್ಯ.

1. ತೂಕ ನಿಯಂತ್ರಣ- ಶರೀರದ ತೂಕವು ಎತ್ತರಕ್ಕೆ ಅನುಗುಣವಾಗಿ ಇರಬೇಕು. ತೂಕ, ಎತ್ತರಗಳನ್ನು ಜೊತೆಗೂಡಿಸಿ ವೈದ್ಯರು ಆMಐ (ಬಾಡಿ ಮಾಸ್‌ ಇಂಡೆಕ್ಸ್‌) ಎಷ್ಟಿದೆ ಎಂದು ತಿಳಿಸುತ್ತಾರೆ. ಬಿಎಂಐ 19ರಿಂದ 25ರೊಳಗೆ ಇರಬೇಕು. ಹೆಚ್ಚಿದ್ದಲ್ಲಿ ಕಡಿಮೆ ಮಾಡಿಕೊಳ್ಳಬೇಕು. ಶಾರೀರಿಕ ವ್ಯಾಯಾಮ, ತಿನ್ನುವ ಆಹಾರದಲ್ಲಿನ ಬದಲಾವಣೆಗಳಿಂದ ಇದು ಸಾಧ್ಯ. ಅತಿ ಶೀಘ್ರವಾಗಿ ತೂಕ ಇಳಿಸುವ ಕ್ರಮಗಳನ್ನು ಅನುಸರಿಸುವುದು ದೇಹಕ್ಕೆ ಒಳ್ಳೆಯದಲ್ಲ. ನಿಧಾನವಾಗಿ ತಿಂಗಳಿಗೆ 1-2 ಕೆ.ಜಿ. ತೂಕ ಇಳಿಸುವುದು ಸೂಕ್ತ.

2. ಶಾರೀರಿಕ ವ್ಯಾಯಾಮ- ನಿತ್ಯ 40 ನಿಮಿಷದಿಂದ 1 ಗಂಟೆಯವರೆಗೆ ವ್ಯಾಯಾಮ ಮಾಡಿದರೆ ಉತ್ತಮ. ಇದನ್ನು ನಿಗದಿತವಾಗಿ ಮಾಡಬೇಕು ಮತ್ತು ತೂಕ ಇಳಿಕೆಯ ನಂತರವೂ ಮುಂದುವರಿಸಬೇಕು. ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಬೇಕು.

3. ಆರೋಗ್ಯಕರ ಆಹಾರ- ಉತ್ತಮ ಪೋಷಕಾಂಶಯುಕ್ತ ಆಹಾರ, ಹಸಿರು ತರಕಾರಿ, ಹಣ್ಣುಗಳ ಸೇವನೆ ಒಳ್ಳೆಯದು. ಯಾವುದನ್ನೂ ಅತಿಯಾಗಿ ತಿನ್ನಬೇಡಿ. ಕರಿದ ಪದಾರ್ಥ, ಸಿಹಿ ತಿನಿಸುಗಳ ಸೇವನೆಗೆ ಕಡಿವಾಣ ಹಾಕಿ. ಬದುಕುವುದಕ್ಕೆ ಆಹಾರ ಸೇವಿಸಿ, ಆಹಾರ ಸೇವಿಸಲೆಂದೇ ಬದುಕಬೇಡಿ ಎಂಬ ಮಾತನ್ನು ನೆನಪಿಡಿ.

ಕೊನೆಯ ಮಾತು
1. ಪ್ರಾರಂಭದಲ್ಲಿ ಕೇವಲ ಸಣ್ಣ ತೊಂದರೆಯಂತೆ ಕಾಣುವ ಪಿ.ಸಿ.ಓ.ಎಸ್‌. ಸಕಾಲದಲ್ಲಿ ಗಮನಿಸದಿದ್ದರೆ ದೊಡ್ಡ ಸಮಸ್ಯೆಯೇ ಆಗಬಹುದು.
2. ಅನೇಕ ವೇಳೆ, ಜೀವನಶೈಲಿಯ ಬದಲಾವಣೆಯಿಂದಲೇ ಈ ಸಮಸ್ಯೆಗೆ ಪರಿಹಾರ ಸಿಗಬಹುದು.
3. ಇದು ಪೂರ್ಣವಾಗಿ ಗುಣವಾಯಿತು ಎಂದು ಹೇಳುವ ಕಾಯಿಲೆ ಅಲ್ಲ. ಹಾಗಾಗಿ ಸತತವಾಗಿ ನಿಗಾ ವಹಿಸುವುದು ಅತ್ಯಗತ್ಯ.
4. ದೀರ್ಘ‌ಕಾಲದವರೆಗೆ ಚಿಕಿತ್ಸೆ ನೀಡಬೇಕಾಗಬಹುದು.

-ಡಾ. ಕೆ. ಶ್ರೀನಿವಾಸ್‌, ಸಹ ಪ್ರಾಧ್ಯಾಪಕರು, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next