Advertisement

ವೈದ್ಯರ ಬೆದರಿಸಿ ಹಣ ಕೇಳಿದಪತ್ರಕರ್ತ ಪೊಲೀಸ್‌ ಕಸ್ಟಡಿಗೆ

07:07 AM Mar 21, 2019 | Team Udayavani |

ಬೆಂಗಳೂರು: ಸುದ್ದಿ ವಾಹಿನಿಯಲ್ಲಿ “ನಿಮ್ಮ ಖಾಸಗಿ ವಿಡಿಯೋ ಪ್ರಸಾರ ಮಾಡುತ್ತೇನೆ’ ಎಂದು ಪ್ರಖ್ಯಾತ ವೈದ್ಯರೊಬ್ಬರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಪ್ರಕರಣದ ಆರೋಪಿ ಪತ್ರಕರ್ತ ಹೇಮಂತ್‌ ಕಶ್ಯಪ್‌ನನ್ನು ನ್ಯಾಯಾಲಯವು ಹೆಚ್ಚಿನ ತನಿಖೆ ಸಲುವಾಗಿ ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

Advertisement

ಪದ್ಮಶ್ರೀ ಪುರಸ್ಕೃತ ವೈದ್ಯ ಡಾ.ರಮಣರಾವ್‌ ಬಿ. ಅವರು ನೀಡಿದ ದೂರಿನ ಅನ್ವಯ ಮಂಗಳವಾರ ಸದಾಶಿವನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದ ಆರೋಪಿ ಹೇಮಂತ್‌ ಕಶ್ಯಪ್‌ನನ್ನು ಬುಧವಾರ 7ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣ ತನಿಖಾ ಹಂತದಲ್ಲಿದ್ದು, ಕೇಸ್‌ಗೆ ಸಂಬಂಧಿಸಿದಂತೆ ಹಲವು ಮಾಹಿತಿ ಪಡೆಯುವ ಸಂಬಂಧ ಆರೋಪಿಯನ್ನು
ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಬೇಕಿದೆ. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾವಾಗಿರುವ
ವಿಡಿಯೋವನ್ನು ವಶಪಡಿಸಿಕೊಳ್ಳಬೇಕಿದೆ. ಹೀಗಾಗಿ ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿ ಹೇಮಂತ್‌ನನ್ನು ನಾಲ್ಕು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿ ಆದೇಶಿಸಿತು.

ಮತ್ತೂಬ್ಬ ಆರೋಪಿ ಬಂಧನಕ್ಕೆ ಬಲೆ: ಪ್ರಕರಣದ ಮತ್ತೂಬ್ಬ ಆರೋಪಿ, ಖಾಸಗಿ ಸುದ್ದಿವಾಹಿನಿಯ ವರದಿಗಾರ ಮಂಜುನಾಥ್‌ ಹಾಗೂ ಆತನ ಜತೆಗಿದ್ದ ಕ್ಯಾಮೆರಾಮನ್‌ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕ್ರಮವಹಿಸಲಾಗಿದ್ದು, ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು
ತಿಳಿಸಿದರು.

ವಿಡಿಯೋ ಹೆಸರಲ್ಲಿ 50 ಲಕ್ಷ ಡಿಮ್ಯಾಂಡ್‌: ಮಾರ್ಚ್‌ 5ರಂದು ದೂರುದಾರ ಡಾ.ರಮಣ್‌ ರಾವ್‌ ಅವರಿಗೆ ಕರೆ ಮಾಡಿದ
ಆರೋಪಿ ಹೇಮಂತ್‌ ಕಶ್ಯಪ್‌, “ನಿಮ್ಮ ಬಳಿ ತುರ್ತಾಗಿ ಮಾತನಾಡಬೇಕು’ ಎಂದಿದ್ದಾನೆ. ಹೀಗಾಗಿ ರಮಣ್‌ರಾವ್‌ ತಮ್ಮ ಕ್ಲಿನಿಕ್‌ಗೆ ಬರುವಂತೆ ಸೂಚಿಸಿದ್ದಾರೆ.
 
ಅದೇ ದಿನ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕ್ಲಿನಿಕ್‌ಗೆ ಹೋದ ಹೇಮಂತ್‌, “ನಾನು ಪ್ರತಿಷ್ಠಿತ ಸುದ್ದಿವಾಹಿನಿಯ ವರದಿಗಾರ’ ಎಂದು ಪರಿಚಯಿಸಿಕೊಂಡಿದ್ದ. “ನಿಮಗೆ ಸಂಬಂಧಿಸಿದ ಸೆಕ್ಸ್‌ ವಿಡಿಯೋ ಒಂದು ನನ್ನ ಬಳಿ ಇದೆ. ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡಿದರೆ ನಿಮ್ಮ ಗೌರವ ಹಾಳಾಗುತ್ತದೆ. ಆ ವಿಡಿಯೋ ಈಗಾಗಲೇ ಐದು ಮಂದಿ ವರದಿಗಾರರ ಬಳಿಯಿದೆ. ವಿಡಿಯೋ ಪ್ರಸಾರ ಮಾಡದಿರಲು
ತಲಾ 10 ಲಕ್ಷ ರೂ. ನೀಡಬೇಕು. ಕೊಡದಿದ್ದರೆ ಎಲ್ಲ ವಾಹಿನಿಗಳಲ್ಲಿ ವಿಡಿಯೋ ಪ್ರಸಾರ ಮಾಡುತ್ತೇವೆ’ ಎಂದು ಬೆದರಿಸಿದ್ದಾನೆ. 

Advertisement

ಇದಾದ ಬಳಿಕ ಎರಡು ಮೂರು ಬಾರಿ ಕ್ಲಿನಿಕ್‌ ಗೆ ಹೋದ ಹೇಮಂತ್‌, ಎಲ್ಲ ವರದಿಗಾರರ ಬಳಿ ಮಾತನಾಡಿದ್ದೇನೆ ಕಡೆಯದಾಗಿ ತಲಾ 1 ಲಕ್ಷ ರೂ.ಗಳಂತೆ ಐದು ಲಕ್ಷ ರೂ. ನೀಡಿ ಎಂದು ಹೇಳಿದ್ದು, ವೈದ್ಯರಿಂದ ಹಂತ ಹಂತವಾಗಿ 5 ಲಕ್ಷ ರೂ. ಪಡೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದಾದ ಬಳಿಕ ಮಂಗಳವಾರ ಸಂಜೆ 4.30ರ ಸುಮಾರಿಗೆ ಮತ್ತೂಂದು ಖಾಸಗಿ ಸುದ್ದಿವಾಹಿನಿಯ ವರದಿಗಾರ ಮಂಜುನಾಥ್‌ ಹಾಗೂ ಕ್ಯಾಮೆರಾಮನ್‌, ವೈದ್ಯರ ಕ್ಲಿನಿಕ್‌ಗೆ ತೆರಳಿದ್ದಾರೆ. ಈ ವೇಳೆ ಮಾತು ಆರಂಭಿಸಿದ ಮಂಜುನಾಥ್‌, “ನಿಮ್ಮ ಕೆಟ್ಟ ವಿಡಿಯೋ ಸಿಕ್ಕಿದೆ. ನಾಳೆ ವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ. ನಿಮ್ಮ ಗೌರವ ಹಾಳಾಗುತ್ತದೆ’ ಎಂದು ವೈದ್ಯರಿಗೆ ಹೆದರಿಸಿದ್ದಾನೆ. ಈ ವೇಳೆ ವೈದ್ಯರು, ನೀವು ಹೇಳಿದಂತೆ ಏನೂ ನಡೆದಿಲ್ಲ ಎಂದು ತರಾಟೆ ತೆಗೆದುಕೊಂಡ ಬಳಿಕ ಮಂಜುನಾಥ್‌ ಅಲ್ಲಿಂದ ತೆರಳಿದ್ದ.

ಕಡೆಗೆ ವೈದ್ಯರು ಹೇಮಂತ್‌ಗೆ ಕರೆ ಮಾಡಿ ಮತ್ತೂಬ್ಬ ವರದಿಗಾರ ಬಂದು ಹಣ ಕೇಳುತ್ತಿದ್ದಾನೆ. ನೀನು ಬಾ ಉಳಿದ ಹಣ ನೀಡುತ್ತೇನೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಜತೆಗೆ ಸದಾಶಿವನಗರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಹಣ ಪಡೆಯುವ ಆಸೆಯಿಂದ ಕ್ಲಿನಿಕ್‌ಗೆ ಬಂದ ಹೇಮಂತ್‌ನನ್ನು ಮಪ್ತಿಯಲ್ಲಿದ್ದ ಪೊಲೀಸರು ಬಂಧಿಸಿದರು ಎಂದು ಹಿರಿಯ ಅಧಿಕಾರಿ ವಿವರಿಸಿದರು.

ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿ ಹೇಮಂತ್‌ ಕಶ್ಯಪ್‌ನನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ವೈದ್ಯರಿಗೆ ಸಂಬಂಧಿಸಿದ ವಿಡಿಯೋ ಸತ್ಯಾಸ ತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿ ಮಂಜುನಾಥ್‌ ಬಂಧಿಸಿದರೆ ವಿಡಿಯೋ ಬಗ್ಗೆ ಮಾಹಿತಿ ಸಿಗಲಿದೆ.
 ● ಡಿ.ದೇವರಾಜ್‌, ಕೇಂದ್ರವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next