Advertisement

ಮನೆಗೆ ವೈದ್ಯರ ತಂಡ: ಸಮೀಕ್ಷೆಗೆ ಸಹಕರಿಸಿ

07:02 PM Jun 01, 2021 | Team Udayavani |

ಬಾಗಲಕೋಟೆ: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮನೆ ಮನೆ ಆರೋಗ್ಯ ತಪಾಸಣೆ ಕೈಗೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಚಾಲನೆ ನೀಡಿದರು.

Advertisement

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್‌ ಇಲಾಖೆ, ಜಿಪಂ, ಬೀಳಗಿ ತಾಲೂಕಾ ಪಂಚಾಯತ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಹಮ್ಮಿಕೊಂಡ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‌ ಒಬ್ಬರಿಂದ ಒಬ್ಬರಿಗೆ ಹರಡಬಹುದಾದ ಸಾಂಕ್ರಾಮಿಕ ರೋಗವಾಗಿದೆ. ನಗರದಿಂದ ಈಗ ಗ್ರಾಮ ಮಟ್ಟದಲ್ಲಿ ಈ ಸೋಂಕು ಹರಡುತ್ತಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವೈದ್ಯರು, ನರ್ಸ್‌ ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡವು ಗ್ರಾಮದ ಪ್ರತಿಯೊಂದು ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಕೈಗೊಳ್ಳಲಿದ್ದಾರೆ. ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕು. ತಪಾಸಣೆಯಿಂದ ಆರೋಗ್ಯದ ಸ್ಥಿತಿಗತಿಗೆ ಅನುಗುಣವಾಗಿ ಔಷಧ ಸಹ ನೀಡಲಿದ್ದಾರೆ. ಕೆಮ್ಮು, ನೆಗಡಿ, ಜ್ವರಗಳು ಬಂದಲ್ಲಿ ಔಷಧಗಳ ಕಿಟ್‌ ಸಹ ನೀಡಲಿದ್ದಾರೆ. ಇದರಿಂದ ಆರಂಭದಲ್ಲಿಯೇ ಅದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಸೋಂಕು ದೇಹದೊಳಗೆ ಸೇರಿ ಉಲ್ಬಣವಾಗುವವರೆಗೆ ಬಿಡಬಾರದು ಎಂಬ ದೃಷ್ಟಿಯಿಂದ ಆರಂಭದಲ್ಲಿಯೇ ಪತ್ತೆ ಹಚ್ಚುವ ಉದ್ದೇಶವಾಗಿದೆ ಎಂದು ಹೇಳಿದರು.

ಬೀಳಗಿ ತಾಲೂಕಿನ ಗಲಗಲಿ, ಸಿದ್ದಾಪುರ, ಸೊನ್ನ ಮತ್ತು ಗಿರಿಸಾರ ಗ್ರಾಮಗಳಿಗೆ ತೆರಳಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಿದರು. ವೈದ್ಯರು ಪ್ರತಿದಿನ ನಾಲ್ಕು ಗ್ರಾಮಗಳಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಔಷಧ ಕಿಟ್‌ಗಳನ್ನು ಸಹ ಸಚಿವರು ವಿತರಿಸಿದರು.

ಬೀಳಗಿ ತಹಶೀಲ್ದಾರ್‌ ಶಂಕರ ಗಾಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಾರ್ತಿಕ ಎಂ., ತಾಲೂಕು ವೈದ್ಯಾಧಿಕಾರಿ ಡಾ| ಕರಿಯನ್ನವರ, ಡಾ| ಅನಿಲ ಕುಚನೂರ, ಜಯಶ್ರೀ ಮಾದರ, ಮೋಹನ್‌ ಜಾಧವ, ಹೊಳೆಬಸು ಬಾಳಶೆಟ್ಟಿ, ರಾಮಣ್ಣ ಶೇಬಾನಿ, ಶ್ರೀಶೈಲ ಗೋಳಿಪಲ್ಲೆ, ಆನಂದ ಇಂಗಳಗಾವಿ, ಸಂಜಯ ಬಳಿಗಾರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next