ಬೆಂಗಳೂರು: ಕೊರೊನಾ ಅಪಾಯ ಭತ್ಯೆ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಥಾನಿಕ ವೈದ್ಯರು ಅ.7ರಂದು ಸೇವೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ ಅಧ್ಯಕ್ಷ ಡಾ. ಸಿ. ನಮ್ರತಾ, ಕೊರೊನಾ ಎರಡನೇ ಅಲೆ ತೀವ್ರತೆ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿದ್ದರಿಂದ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ವೈದ್ಯರಿಗೂ ಸವಾಲಾಗಿತ್ತು. ಈ ಅವಧಿಯಲ್ಲಿ ಸೋಂಕಿತರನ್ನು ಉಳಿಸಿಕೊಳ್ಳಲು ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ.
ಜೀವವನ್ನೇ ಒತ್ತೆ ಇಟ್ಟು ಸೇವೆ ಸಲ್ಲಿಸಿದ ವೈದ್ಯರಿಗೆ ಸರ್ಕಾರವು ಕೋವಿಡ್ ಅಪಾಯ ಭತ್ಯೆ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಅವರು, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ, ಸಾವಿನ ಪ್ರಮಾಣ ತಗ್ಗಿಸುವಲ್ಲಿ ಸ್ಥಾನಿಕ ವೈದ್ಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ;- ಮಾನವ ಕಳ್ಳ ಸಾಗಣೆ ಚಾರ್ಜ್‌ಶೀಟ್ ಸಲ್ಲಿಕೆ
ಹೀಗಾಗಿ, ಸರ್ಕಾರ ಕೂಡಲೇ ಕೋವಿಡ್ ಅಪಾಯ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್ ಸೀಟು ಪಡೆದವರಿಗೆ ಶೈಕ್ಷಣಿಕ ಶುಲ್ಕ ಪರಿಷ್ಕರಣೆಯಿಂದ ತಾರತಮ್ಯ ಆಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚು ಶುಲ್ಕ ಪಡೆಯಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಶ್ರಮಿಸಿದ ಸ್ಥಾನಿಕ ವೈದ್ಯರ ಸೇವೆ ಪರಿಗಣಿಸಿ, ಶೈಕ್ಷಣಿಕ ಶುಲ್ಕವನ್ನು 2018ರಂತೆ ಪುನರ್ ಪರಿಷ್ಕರಿಸಬೇಕು. ಕಡ್ಡಾಯ ಗ್ರಾಮೀಣ ಸೇವೆಯಲ್ಲಿ ತೊಡಗಿರುವ ವೈದ್ಯರಿಗೆ ಶೀಘ್ರವೇ ಬಾಕಿ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ತುರ್ತು ಸೇವೆ ನೀಡುತ್ತೇವೆ-
ಗುರುವಾರ ಬೆಳಿಗ್ಗೆ 9 ರಿಂದ 4 ಗಂಟೆವರೆಗೂ ಪ್ರತಿಭಟನೆ ನಡೆಯಲಿದೆ. ತುರ್ತು ಚಿಕಿತ್ಸೆ, ತೀವ್ರ ನಿಗಾ ಘಟಕ ಸೇವೆ ಹಾಗೂ ಕೋವಿಡ್ ಚಿಕಿತ್ಸಾ ವಿಭಾಗದಲ್ಲಿರುವವರು ಎಂದಿನಂತೆ ಕರ್ತವ್ಯ ನಿರ್ವಹಿಸುವುದರಿಂದ ಈ ಸೇವೆಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ರಾಜ್ಯ ಸ್ಥಾನಿಕ ವೈದ್ಯರ ಸಂಘ ತಿಳಿಸಿದ್ದಾರೆ.