ಚಿಕ್ಕಬಳ್ಳಾಪುರ: ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿ ಸೇರಿ ಇನ್ನಿತರೆ ಬೇಡಿಕೆ ತಕ್ಷಣ ಬಗೆಹರಿಸಲು ಕ್ರಮ ವಹಿಸಲಾಗುವುದೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳೊಂದಿಗೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಣ ಕ್ರಮದ ಬಗ್ಗೆ ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ 19 ತಡೆಗೆ ಜಿಲ್ಲಾಡಳಿತ ಇಟ್ಟಿರುವ ಹಲವು ಬೇಡಿಕೆಗಳನ್ನು ತಕ್ಷಣ ಜಾರಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
ಕೋವಿಡ್-19 ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಆಗ ಮಾತ್ರ ಕೋವಿಡ್ 19 ನಿಯಂತ್ರಿಸಲು ಸಾಧ್ಯ. 2-3 ದಿನಗಳಲ್ಲಿ ಕೋವಿಡ್ 19 ಪರೀಕ್ಷಾ ಲ್ಯಾಬ್ ತೆರೆಯಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್-19 ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಾಗಿದೆ. ಸುಮಾರು 10 ಸಾವಿರ ಬೆಡ್ ವ್ಯವಸ್ಥೆ ಮಾಡುವುದರ ಮೂಲಕ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚು ಮಾಡಲು ಹಾಗೂ ವರದಿ ಬೇಗ ಬರಲು ಬೆಂಗಳೂರಿನಲ್ಲಿ ಲ್ಯಾಬ್ ಸೇರಿದಂತೆ ಪ್ರತಿ ಜಿಲ್ಲೆಯಲ್ಲಿ ಒಂದು ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿ, ಕೋವಿಡ್ 19 ತಡೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಸುಮಾರು 10 ಸಾವಿರ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ 31 ಕ್ವಾರಂಟೈನ್ ಸೆಂಟರ್‌ಗಳಲ್ಲಿ 5164 ಹಾಸಿಗೆ ಸಿದ್ಧಗೊಳಿಸಲಾಗಿದೆ.
ಜಿಲ್ಲೆಯ 36 ಕನ್ವೆಂಕ್ಷನ್ ಹಾಲ್, 10 ಯಾತ್ರಿ ನಿವಾಸಗಳಲ್ಲಿ 4,594 ಹಾಸಿಗೆ ಹಾಗೂ ಜಿಲ್ಲೆಯ ಒಂದು 50 ಹಾಸಿಗೆಗಳುಳ್ಳ ಒಂದು ಖಾಸಗಿ ಆಸ್ಪತ್ರೆಯನ್ನು ಕ್ವಾರಂಟೈನ್ ಸೆಂಟರ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ನಿರ್ಮಲಾ, ಸಿಇಒ ಬಿ.ಫೌಜಿಯಾ ತರನ್ನುಮ್, ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ, ಜಿಲ್ಲಾ ಶಸOಉಚಿಕಿತ್ಸಕ ಡಾ.ರಮೇಶ್, ಜಿಲ್ಲಾ-ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ವೆಂಟಿಲೇಟರ್‌ಗಳು ಸದ್ಯದಲ್ಲೇ ಬರಲಿದ್ದು ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗತ್ಯವಾದ ವೆಂಟಿಲೇಟರ್ ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತದೆ. ಕೋವಿಡ್ 19 ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಜೊತೆಗೆ ಸಾರ್ವಜನಿಕರೂ ಸಹಕಾರ ನೀಡಬೇಕು.
-ಬಿ.ಶ್ರೀರಾಮುಲು, ಆರೋಗ್ಯ ಸಚಿವ