ಕಾರವಾರ: ವೃತ್ತಿ ಜೀವನದಲ್ಲಿ ರೋಗಿಯ, ಅಶಕ್ತರ ಸೇವೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಬೆಂಗಳೂರು ಕ್ರಿಮ್ಸ್‌ನ ವಿಶ್ರಾಂತ ನಿದೇಶಕ ಪದ್ಮಶ್ರೀ ಪುರಸ್ಕೃತ ಬಿ.ಎನ್. ಗಂಗಾಧರ್ ಹೇಳಿದರು.
ನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಬುಧವಾರ ನಡೆದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ರೋಗಿಯೇ ವೈದ್ಯ ವೃತ್ತಿಗೆ ಮುಖ್ಯ ಶಿಕ್ಷಕ. ಅವರಿದ್ದಾಗ ಮಾತ್ರ ಉತ್ತಮ ಶಿಕ್ಷಣ ಸಿಗುತ್ತದೆ. ವಿದ್ಯಾರ್ಥಿಗಳು ವೈದ್ಯರಾಗುವುದು ಹೊಸ ಪಟ್ಟ ಎನ್ನುವುದಕ್ಕಿಂತ ಹೊಸ ಜವಾಬ್ದಾರಿ ಎನ್ನುವುದು ಸೂಕ್ತ. ಯಾವ ಸಂಗತಿಗಳು ಗೊತ್ತಿಲ್ಲದ ಹೊಸ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಠ್ಯ ಮಾತ್ರವಲ್ಲದೆ ನೈಪುಣ್ಯತೆಯನ್ನು ಹೇಳಿಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಎಮ್‌ಬಿಬಿಎಸ್ ನಂತರ ಶೂನ್ಯ ಹಾಗೂ ನಾನು ತಜ್ಞ ಅಲ್ಲ ಎನ್ನುವ ಭಾವನೆ ಬೇಡ. ಎಲ್ಲದರ ಬಗ್ಗೆಯೂ ತಿಳಿಯುವುದೇ ವೈದ್ಯಕೀಯ ವಿಜ್ಞಾನ. ವೈದ್ಯ ಎನ್ನುವುದಕ್ಕಿಂದ ಪ್ರಾಮಾಣಿಕ ಹೃದಯ ಇರುವ ವ್ಯಕ್ತಿ ಎನ್ನುವ ಭಾವನೆಯಿಂದ ಕೆಲಸ ಮಾಡಿ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್ ರಾಜ್ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶೃದ್ಧೆ ಹಾಗೂ ಶ್ರಮ ಇರಬೇಕು. ಹಾಗಿದ್ದಾಗ ಮಾತ್ರ ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಸಾದ್ಯ ಎಂದರು. ಹುಬ್ಬಳ್ಳಿಯ ಕಿಮ್ಸ್ ವಿಶ್ರಾಂತ ನಿರ್ದೇಶಕ ವಿ.ಎನ್. ಬಿರಾದಾರ್ ಮಾತನಾಡಿ, ಇಂದು ವಿದ್ಯಾರ್ಥಿಗಳ ನಿಜವಾದ ಕೆಲಸ ಪ್ರಾರಂಭವಾಗುತ್ತದೆ. ನೀವು ಗಳಿಸುವ ಹಣ ಪರೋಕ್ಷವಾಗಿ ಒಬ್ಬ ಬಡವ ಕೊಟ್ಟಿರುತ್ತಾನೆ. ಹೀಗಾಗಿ ದಿನಕ್ಕೆ ಒಂದು ತಾಸು ಬಡ ರೋಗಿಗಳ ಸೇವೆಗೆ ಮೀಸಲಿಡಿ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಪದವಿ ಪಡೆದ ನಂತರ ಹೇಗೆ ನಿಮ್ಮ ಕರ್ತವ್ಯ ನಿರ್ವಹಿಸುತ್ತೀರಿ ಎನ್ನುವುದು ಮುಖ್ಯ. ನೀವು ಮಾಡುವ ಕೆಲಸಗಳು ನಿಮ್ಮ ವ್ಯಕ್ತಿತ್ವ ಮಾತ್ರವಲ್ಲದೇ ನಿಮ್ಮ ಶಿಕ್ಷಕರು ಹಾಗೂ ಕಾಲೇಜುನ್ನು ಪ್ರತಿನಿಧಿಸುತ್ತದೆ. ಈ ನಿಟ್ಟಿನಲ್ಲಿ ನೀವು ಕಲಿತ ಸಂಸ್ಥೆಯ ಗೌರವ ಹೆಚ್ಚಿಸಿ ಎಂದರು.
ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸಿ, ಐ.ಎನ್.ಎಚ್.ಎಸ್ ಪತಂಜಲಿ ಕಮಾಂಡಿಂಗ್ ಆಫಿಸರ್ ಕ್ಯಾಪ್ಟನ್ ಜಸ್ಕಿರಣ್ ಸಿಂಗ್ ರಾಂಧವ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಡೊಳ್ಳು, ವಾದ್ಯ ಮೇಳಗಳೊಂದಿಗೆ ಗಣ್ಯರನ್ನು ಸ್ವಾಗತಿಸಲಾಯಿತು.
ಘಟಿಕೋತ್ಸವದಲ್ಲಿ 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಂಬಿಬಿಎಸ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕ ವಿತರಣೆ ಮಾಡಿ ಗೌರವಿಸಲಾಯಿತು. ವೈದ್ಯ ಪದವಿ ಪಡೆದ ವಿದ್ಯಾರ್ಥಿಗಳು ಸಂಭ್ರಮ ಆಚರಿಸಿದರು. ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.