ಮೈಸೂರು: ವೈದ್ಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ ಆರಂಭಿಸಿದ್ದು, ಇಲಾಖೆ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಸರ್ಕಾರಕ್ಕೆ ನೀಡುತ್ತಿರುವ ವರದಿಗಳನ್ನು ಸ್ಥಗಿತಗೊಳಿಸಿ, ಆರೋಗ್ಯ ಸೇವೆಯನ್ನು ಮಾತ್ರ ನೀಡಲು ನಿರ್ಧರಿಸಿದ್ದಾರೆ.
ರಾಜ್ಯಾದ್ಯಂತ ಸರ್ಕಾರಿ ವೈದ್ಯರ ಮುಷ್ಕರ ಒಂದು ವಾರದ ಮಟ್ಟಿಗೆ ನಡೆಯಲಿದ್ದು, ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲೂ ಮುಷ್ಕರ ನಡೆಸಲು ವೈದ್ಯರು ಸಜ್ಜಾಗಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೂ ವೇತನ ಹೆಚ್ಚಳ, ಕಾಯಂ ವೈದ್ಯರ ಕೊರತೆ ನಿವಾರಣೆ, ಪಾಳಿ ವ್ಯವಸ್ಥೆ ಮುಂತಾದ ಬೇಡಿಕೆಗಳ ಈಡೇರಿಕೆಗೆಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ. ಮೊದಲ ದಿನವಾದ ಸೋಮವಾರ ಮುಷ್ಕರ ಸಂಬಂಧ ಜಿಲ್ಲಾಧಿಕಾರಿಗೆ ವೈದ್ಯರು ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಮಂಗಳವಾರದಿಂದ ಚಿಕಿತ್ಸೆ, ಕಚೇರಿ ಕೆಲಸಗಳನ್ನು ಎಂದಿನಂತೆ ನಿರ್ವಹಿಸಿದರೂ ಸರ್ಕಾರಕ್ಕೆ ವರದಿಗಳ ಕಡತ ಕಳುಹಿಸದೆ ಮುಷ್ಕರ ನಡೆಸಲಿದ್ದಾರೆ. ಆದರೆ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ವೇಳೆ ಮಾತನಾಡಿದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ದೇವಿ ಅನಂದ್, ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಗಳು ಎಂದಿನಂತೆ ನಡೆಯುತ್ತವೆ. ಆದರೆ,ಸೆ.15ರಿಂದ ಸರ್ಕಾರಕ್ಕೆ ಸಲ್ಲಿಸಬೇಕಾದ ಕೋವಿಡ್ ಸೇರಿದಂತೆ ಯಾವುದೇ ವೈದ್ಯಕೀಯ ವರದಿಗಳನ್ನು ಸಲ್ಲಿಸುವುದಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳು ಕರೆಯುವ ಯಾವುದೇಸಭೆಗಳಲ್ಲೂ ಭಾಗವಹಿಸದಿರುವ ಮೂಲಕ ವೈದ್ಯರು ಮುಷ್ಕರ ನಡೆಸಲಿದ್ದೇವೆ ಎಂದು ತಿಳಿಸಿದರು.
ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಅವರ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಅಮಾನತು ಮಾಡದೆ ವಿಚಾರಣೆ ನಡೆಸುತ್ತೇವೆಂದು ಹೇಳಿ ರಕ್ಷಿಸುವ ಪ್ರಯತ್ನಮಾಡಲಾಗಿದೆ. ವೈದ್ಯರಂತೆ ಐಎಎಸ್ ಅಧಿಕಾರಿಗಳ ಮೇಲೂಕ್ರಮಕೈಗೊಂಡು ತನಿಖೆ ನಡೆಸಬೇಕು ಎಂದು ತಿಳಿಸಿದರು.
ವೈದ್ಯರ ಬೇಡಿಕೆಗಳು : ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಾ ಇರುವ ವೈದ್ಯರವೇತನ ಹೆಚ್ಚಿಸಬೇಕು. 3 ವರ್ಷ ಸೇವೆ ಸಲ್ಲಿಸಿದ ವೈದ್ಯರನ್ನು ಕಾಯಂಗೊಳಿಸಿ ವೈದ್ಯರ ಕೊರತೆ ನೀಗಿಸಬೇಕು, ಕೇರಳ ಮಾದರಿಯಂತೆ ದಿನಕ್ಕೆ 8 ಗಂಟೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ರೂಪಿಸಬೇಕು, ಕೇಂದ್ರ ಸರ್ಕಾರ ವೈದ್ಯರಿಗೆ ನೀಡುವ ವೇತನವನ್ನು ರಾಜ್ಯ ಸರ್ಕಾರದ ವೈದ್ಯರಿಗೆ ನೀಡಿ ವೇತನ ತಾರತಮ್ಯ ಸರಿಪಡಿಸಬೇಕು,ಜಿಲ್ಲಾ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿದ್ದು, ಅದನ್ನು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ನೀಡಬೇಕು, ಜಿಲ್ಲಾ ಆಸ್ಪತ್ರೆಗಳನ್ನು ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಸೇರಿಸಬಾರದು, ಸರ್ಕಾರದಿಂದ ವೈದ್ಯರ ದಿನಾಚರಣೆ ಆಚರಿಸಬೇಕು, ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟಿರುವ ವೈದ್ಯರಿಗೆ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಬೇಕು.