ಮಂಡ್ಯ: ಆರೋಗ್ಯ ಇಲಾಖೆ ಮಾದರಿಯಂತೆ ಏಕರೂಪ ವೇತನಕ್ಕಾಗಿ ಆಗ್ರಹಿಸಿ ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿ ಕಾರಿಗಳ ಸಂಘದಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಧರಣಿ 10ನೇ ದಿನವೂ ಮುಂದುವರಿದಿದ್ದು, ಧರಣಿ ನಿರತರು ರಕ್ತದಾನ ಮತ್ತು ಅಂಗಾಂಗ ದಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಾಟನಾ ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ರಾಜ್ಯ ಸರ್ಕಾರ ತುರ್ತು ಚಿಕಿತ್ಸಾ ವೈದ್ಯಾ ಧಿಕಾರಿಗಳ ಸರಳ ಸಮಸ್ಯೆ ಬಗೆಹರಿಸದಷ್ಟು ಒತ್ತಡದಲ್ಲಿ ಕಾರ್ಯಭಾರ ಮಾಡುತ್ತಿದ್ದಾರೆಯೇ ಎಂದು ಖಾರವಾಗಿ ನುಡಿದರು.
ದುರಾಡಳಿತ: ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತವಾಗಲಿ, ಸಚಿವರಾಗಲಿ ಬಾರದಿರುವುದು ದುರಾಡಳಿತದ ಪರಮಾವಧಿ. ತುರ್ತು ಚಿಕಿತ್ಸಾ ವೈದ್ಯಾಧಿ ಕಾರಿಗಳು ಸರಳ ಸಮಸ್ಯೆಗಳಿಗೆ ಸ್ಪಂದಿಸದೆ ಮೀನಮೇಷ ಮಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು. ದೇಶಾದ್ಯಂತ 75ನೇ ಸ್ವಾತಂತ್ರ್ಯ ಭಾರತ ಅಮೃತ ಮಹೋತ್ಸವ ಆಚರಿಸುತ್ತಿರುವ ದಿನಗಳಲ್ಲಿ ತುರ್ತು ವೈದ್ಯರ ಸಮಸ್ಯೆ ಕೇಳಿ ಪರಿಹಾರ ಕೊಡುವಲ್ಲಿ ವಿಫಲತೆಯಾಗಿರುವ ರಾಜ್ಯ ಸರ್ಕಾರ, ಸಚಿವರ ಮಂದ ಬುದ್ಧಿಗೆ, ಜಾಣ ಮೌನಕ್ಕೆ ರೋಗಿಗಳ ಜೀವ ಬಲಿಯಾಗುವುದು ಬೇಡ ಎಂದರು.
ನೋವು ತಂದಿದೆ: ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘದ ಖಜಾಂಚಿ ಡಾ.ಯೋಗೇಂದ್ರಕುಮಾರ್ ಮಾತನಾಡಿ, ಸರ್ಕಾರದ ಗಮನ ಸೆಳೆಯಲು ಆ.15 ರಂದು ರಕ್ತದಾನ ಮಾಡುವ ಮೂಲಕ ವಿನೂತನ ಚಳವಳಿಗೆ ಕರೆ ನೀಡಿದ್ದೆವು. ದೇಶವೇ 75ರ ಸ್ವಾತಂತ್ರÂ ಭಾರತ ಅಮೃತ ಮಹೋತ್ಸವದಲ್ಲಿದ್ದರೂ ನಮ್ಮ ಬೇಡಿಕೆ ಕೇಳದ ಸಚಿವರು ಮತ್ತು ಸಂಬಂಧಪಟ್ಟ ಅ ಧಿಕಾರಿಗಳ ವರ್ತನೆ ನೋವು ತಂದಿದೆ ಎಂದರು.
ಆಗ್ರಹ: ವೈದ್ಯಕೀಯ ಶಿಕ್ಷಣ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕೇತರ ವೈದ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಮಾದರಿಯಂತೆ ಏಕರೂಪ ವೇತನ ನೀಡುವುದು ಅಗತ್ಯವಿದೆ. 2018ರ ಹೈಕೋರ್ಟ್ ಆದೇಶದಲ್ಲಿ ನೂತನ ಪರಿಷ್ಕೃತ ರಾಜ್ಯ ಸರ್ಕಾರಿ ವೇತನ ಶ್ರೇಣಿಯಂತೆ ವೇತನ ನೀಡಲು ಆಗ್ರಹಿಸುತ್ತಿದ್ದೇವೆ ಎಂದರು.
ಪ್ರಮಾಣ ಪತ್ರ ವಿತರಣೆ: ಮಿಮ್ಸ್ ರಕ್ತನಿಧಿ ಕೇಂದ್ರದ ಡಾ.ಸ್ವಾಮಿ, ಡಾ. ಯೋಗೇಂದ್ರಕುಮಾರ್, ಡಾ.ಬಿಂದು, ದಾದಿಯರಾದ ರಾಜಸಾಬ್, ರಘು ಮತ್ತಿತರರು ರಕ್ತದಾನ ಮಾಡಿ ಪ್ರತಿಭಟನೆಗೆ ಶಕ್ತಿ ತುಂಬಿದರು. ಬಳಿಕ ಅಂಗಾಂಗ ದಾನ ಮಾಡಿದ ಡಾ.ಅವಿನಾಶ್, ಡಾ.ಸತೀಶ ಅವರಿಗೆ ನೋಂದಣಿ ಪ್ರಮಾಣ ಪತ್ರ ನೀಡಿದರು.
ಭಾರತೀಯ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಮರೀಗೌಡ, ಕರವೇ ಜಿಲ್ಲಾಧ್ಯಕ್ಷ ಜಯರಾಂ, ನೆಲದನಿ ಬಳಗದ ಲಂಕೇಶ್ ಮಂಗಲ, ಯೋಗೇಶ್ ಸಂತೆಕಸಲಗೆರೆ, ಪ್ರತಾಪ್, ದಾದಿಯರ ಸಂಘದ ಪದಾಧಿಕಾರಿಗಳಿದ್ದರು.