Advertisement

ಈದು-ಹೊಸ್ಮಾರು: ಎಲ್ಲ ಸಮಯ ವೈದ್ಯರ ಸೇವೆ ಸಿಗದು!

10:32 PM Feb 17, 2021 | Team Udayavani |

ಕಾರ್ಕಳ: ಈದು- ಹೊಸ್ಮಾರು ಪರಿಸರದ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಈದು- ಹೊಸ್ಮಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಸಹಿತ ಇತರ ಕೆಲ ಹುದ್ದೆಗಳು ಖಾಲಿ ಇದ್ದು, ರೋಗಿಗಳು ವೈದ್ಯಕೀಯ ಸೇವೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಶುಶ್ರೂಕಿಯರ ಅವಲಂಬನೆ
ಈ ಪರಿಸರದ ಜನರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲೆಂದು ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿತ್ತು. ಇಲ್ಲಿನ ವೈದ್ಯರು ವರ್ಗಾವಣೆ ಗೊಂಡು ತೆರಳಿದ ಬಳಿಕ ಖಾಯಂ ವೈದ್ಯರು ಆರೋಗ್ಯ ಕೇಂದ್ರಕ್ಕೆ ನೇಮಕವಾಗದ ಕಾರಣ ವೈದ್ಯರು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ರೋಗಿಗಳು ಶುಶ್ರೂಷಕಿಯರನ್ನೇ ಅವಲಂಬಿತ ರಾಗಿದ್ದಾರೆ.
ವೈದ್ಯ ಹುದ್ದೆ-1, ಫಾರ್ಮಾಸಿಸ್ಟ್‌-1, ದ್ವಿತೀಯ ದರ್ಜೆ ಸಹಾಯಕ-1, ನೂರಾಲ್‌ಬೆಟ್ಟು ಮತ್ತು ಈದು ಕೇಂದ್ರಕ್ಕೆ ಕಿರಿಯ ಪುರುಷ ಆರೋಗ್ಯ ಸಹಾಯಕ ಹುದ್ದೆ ತಲಾ-2, ನೂರಾಲ್‌ಬೆಟ್ಟು ಮಹಿಳಾ ಆರೋಗ್ಯ ಸಹಾಯಕಿ-1 ಹುದ್ದೆಗಳು ಖಾಲಿ ಇವೆ.

ವೈದ್ಯ ಹುದ್ದೆ ಖಾಲಿ
ಆಸ್ಪತ್ರೆಯಲ್ಲಿ ವೈದ್ಯೆ ಡಾ| ವಿಜಯಲಕ್ಷ್ಮಿ ಎಂಬವರು ವೈದ್ಯ ಹುದ್ದೆಯಲ್ಲಿದ್ದರು. ಅವರು ಇರುವಾಗ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ದೊರಕುತಿತ್ತು ಎಂದು ಸ್ಥಳಿಯರು ಹೇಳುತ್ತಾರೆ. ಕೆಲ ದಿನಗಳ ಹಿಂದೆ ಅವರು ವರ್ಗಾವಣೆಗೊಂಡು ತೆರಳಿದ್ದು ವೈದ್ಯ ಹುದ್ದೆ ಖಾಲಿಯಿದೆ.

ಎರಡು ಕಡೆಯೂ ಕರ್ತವ್ಯ
ಬಜಗೋಳಿ ಮತ್ತು ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಈದು-ಹೊಸ್ಮಾರಿನ ಈ ಆಸ್ಪತ್ರೆಯಲ್ಲಿ ವಾರದ ಒಂದೆರಡು ದಿನಗಳು ವೈದ್ಯರಾಗಿ ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಆಸ್ಪತ್ರೆಯಲ್ಲಿ ಎಲ್ಲ ದಿನ ಮತ್ತು ಸಮಯಗಳಲ್ಲಿ ವೈದ್ಯರ ಸೇವೆ ದೊರಕುತ್ತಿಲ್ಲ.ಅಲ್ಲಿಯೂ ಇಲ್ಲಿಯೂ ಎರಡೂ ಕಡೆ ಅವರಿಗೆ ಒತ್ತಡದಲ್ಲಿ ನಿರ್ವಹಿಸುವುದು ಕಷ್ಟ. ಈದುವಿನಲ್ಲಿ ಕೆಲ ದಿನಗಳು ಮಾತ್ರ ವೈದ್ಯರು ಇರುವುದರಿಂದ ಸರಿಯಾದ ಸಮಯಕ್ಕೆ ವೈದ್ಯರ ಸೇವೆ ಸಿಗದೆ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ವೃದ್ಧಾಪ್ಯ ವೇತನಕ್ಕೆ ವೈದ್ಯರ ಅವಲಂಬನೆ
ರೋಗಗಳಿಗೆ ಔಷಧವಲ್ಲದೆ ವೃದ್ಧಾಪ್ಯ ವೇತನ ಸಹಿತ ಕೆಲವೊಂದು ಸರಕಾರದ ಯೋಜನೆಯ ಪಿಂಚಣಿ ಇನ್ನಿತರ ಸೇವೆ ಪಡೆಯಬೇಕಿದ್ದರೆ, ವೈದ್ಯರ ದೃಢೀಕರಣ ಪತ್ರದ ಅಗತ್ಯವಿದೆ. ವೈದ್ಯರಿಲ್ಲದೆ ಇರುವುದರಿಂದ ಅದು ಸಿಗುತ್ತಿಲ್ಲ. ಕೆಲಸ ಬಿಟ್ಟು ಬಿಸಿಲಿಗೆ ವೈದ್ಯರನ್ನು ಹುಡುಕಿಕೊಂಡು ವೃದ್ಧರು, ವೃದ್ಧೆಯರು ಹೋಗುವ ಸ್ಥಿತಿಯೂ ಇಲ್ಲಿ ಕಂಡು ಬರುತ್ತಿದೆ.

Advertisement

ಸಿಬಂದಿ ಅಗತ್ಯ
ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿದೆ. ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿವೆ. ತುರ್ತು ನಾಲ್ಕು ಬೆಡ್‌ ವ್ಯವಸ್ಥೆ. ಆಸ್ಪತ್ರೆಯಲ್ಲಿ ಲಸಿಕೆ ಕೇಂದ್ರ, ಫಾರ್ಮಸಿ, ಇಂಜೆಕ್ಷನ್‌ ಡ್ರೆಸ್ಸಿಂಗ್‌ ಕೊಠಡಿ, ಸ್ಟೋರ್‌ ರೂಂ, ಐಎಲ್‌ಆರ್‌ ಕೊಠಡಿ, ಪ್ರಯೋಗಾಲಯ, ವೈದ್ಯಾಧಿಕಾರಿ ಕೊಠಡಿ, ಅವಲೋಕನ, ನೋಂದಣಿ ಕೊಠಡಿ, ಶೌಚಾಲಯ ಸಹಿತ ಎಲ್ಲ ವ್ಯವಸ್ಥೆಯಿದ್ದರೂ ವೈದ್ಯ, ಸಿಬಂದಿ ಕೊರತೆಯಿಂದ ಆಸ್ಪತ್ರೆ ಬಣಗುಡುತ್ತಿದೆ.

ಇಲ್ಲಿನವರೆಲ್ಲ ಆಸ್ಪತ್ರೆ ಅವಲಂಬಿತರು
ಪ್ರಾ. ಆ. ಕೇಂದ್ರ ಎರಡು ಉಪ ಕೇಂದ್ರ ಗಳನ್ನು ಹೊಂದಿದೆ. ಗುಮ್ಮೆತ್ತು, ಕೂಡ್ಯೇ, ಮಾಪಾಲು, ಕನ್ಯಾಲು, ಕೆರೆ, ಬಾರೆ, ಮಲ್ಲಂಜ, ಮುಗರಡ್ಕ, ಬೆಂಗಾಳಿ, ಕರಿಂಬ್ಯಾಲು, ಹೊಸ್ಮಾರು, ಬರಿಮಾರು ಮೊದಲಾದ ಗ್ರಾಮಸ್ಥರು ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದು, ಸಕಾಲದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಸಿಗದೆ 7-8 ಕಿ.ಮೀ. ದೂರದ ಬಜಗೋಳಿ ಹಾಗೂ ಹೆಚ್ಚಿನ ಚಿಕಿತ್ಸೆಗಳಿಗೆ 25. ಕಿ.ಮೀ. ದೂರದ ತಾಲೂಕು ಕೇಂದ್ರಗಳ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ಇದೆ. ಕೊರೊನಾ ಸೋಂಕು ಹರಡುವ ಭೀತಿ ಜತೆಗೆ ವಾತಾವರಣದಲ್ಲಿನ ಹವಾಮಾನ ವೈಪರೀತ್ಯದಿಂದ ಜ್ವರ, ತಲೆನೋವು ಇತ್ಯಾದಿ ಸಣ್ಣ ಪುಟ್ಟ ಕಾಯಿಲೆಗಳು ಕಾಣಿಸಿಕೊಂಡಾಗ ತತ್‌ಕ್ಷಣಕ್ಕೆ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸೇವೆ ಪಡೆಯುವ ಎಂದರೆ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರ ಸಹಿತ ಜನಸಾಮಾನ್ಯರಿಗೆ ತೊಂದರೆಯಾಗಿದೆ.

ಬಜಗೋಳಿಗೆ ತೆರಳಬೇಕು
ವೃದ್ಧಾಪ್ಯ ವೇತನ ಪಡೆಯಲು ನನಗೆ ವೈದ್ಯರ ದೃಢೀಕರಣ ಪತ್ರ ಬೇಕಿತ್ತು. ಅದಕ್ಕಾಗಿ ದಾಖಲೆ ಪತ್ರ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದೇನೆ. ಇಲ್ಲಿ ವೈದ್ಯರಿಲ್ಲದ ಕಾರಣ ಡಾಕ್ಟರನ್ನು ಹುಡುಕಿಕೊಂಡು ಬಜಗೋಳಿಗೆ ತೆರಳಬೇಕಾಗಿದೆ. -ಶೇಖರ್‌,
ಸ್ಥಳಿಯ ನಿವಾಸಿ, ಹೊಸ್ಮಾರು

ಶೀಘ್ರ ವೈದ್ಯರ ನೇಮಕ
ಈದು ಆಸ್ಪತ್ರೆಯಲ್ಲಿ ವಾರದಲ್ಲಿ ಎರಡು ದಿನ ಮಾಳದಿಂದ ವೈದ್ಯರು ಬರುತ್ತಾರೆ. ಒಂದು ದಿನ ನಾನು ಕೂಡ ವೈದ್ಯರ ಸೇವೆಗೆ ಅಲ್ಲಿ ಸಿಗುತ್ತೇನೆ. ವೈದ್ಯರ ನೇಮಕ ಪ್ರಕ್ರಿಯೆ ಶೀಘ್ರ ನಡೆಯಲಿರುವುದರಿಂದ ಖಾಲಿಯಿರುವ ಜಾಗಕ್ಕೆ ವೈದ್ಯರು ಬರುವ ನಿರೀಕ್ಷೆಯಿದೆ.
-ಡಾ| ಗಿರೀಶ್‌ ಗೌಡ ಎಂ., ವೈದ್ಯಾಧಿಕಾರಿ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next