Advertisement

ವೈದ್ಯರೇ, ಜೆನರಿಕ್‌ ಔಷಧಿ ಕೊಡಿ

03:45 AM Apr 18, 2017 | Harsha Rao |

ಸೂರತ್‌/ನವದೆಹಲಿ: ಬ್ರಾಂಡೆಡ್‌ ಔಷಧಗಳಿಗಿಂತ ಅಗ್ಗದಲ್ಲಿ ದೊರೆಯುವ ಜೆನರಿಕ್‌ ಔಷಧಗಳಿಗೆ ಆದ್ಯತೆ ನೀಡುವಂತೆ ವೈದ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಜತೆಗೆ, ಈ ಕುರಿತ ಕಾನೂನಾತ್ಮಕ ನಿಯಮಗಳನ್ನೂ ಜಾರಿ ಮಾಡುವ ಸುಳಿವನ್ನು ಅವರು ನೀಡಿದ್ದಾರೆ.

Advertisement

ಸೂರತ್‌ನಲ್ಲಿ ಸೋಮವಾರ ದತ್ತಿ ಆಸ್ಪತ್ರೆಯೊಂದರ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, “ನಮ್ಮ ಸರ್ಕಾರವು 15 ವರ್ಷಗಳ ಬಳಿಕ ಮೊದಲ ಬಾರಿಗೆ ಆರೋಗ್ಯ ನೀತಿಯನ್ನು ಜಾರಿ ಮಾಡಿದೆ. ಹಲವು ಔಷಧಗಳು ಹಾಗೂ ಸ್ಟೆಂಟ್‌ಗಳ ದರವನ್ನು ಇಳಿಸಿದೆ. ಇದು ಹಲವು ಫಾರ್ಮಾಸುÂಟಿಕಲ್‌ ಕಂಪನಿಗಳ ಕೋಪಕ್ಕೂ ಕಾರಣವಾದವು’ ಎಂದಿದ್ದಾರೆ.

ಹೊಸ ನಿಯಮ ತರುತ್ತೇವೆ: ವೈದ್ಯರು ಔಷಧ ಚೀಟಿ ಬರೆಯುವಾಗ  ಹಸ್ತಾಕ್ಷರ ಬಡಜನರಿಗೆ ಅರ್ಥವಾಗುವುದೇ ಇಲ್ಲ. ಹಾಗಾಗಿ, ಅವರು ಖಾಸಗಿ ಮಳಿಗೆಗಳಿಗೆ ಹೋಗಿ ಹೆಚ್ಚು ಬೆಲೆ ಕೊಟ್ಟು ಔಷಧ ಖರೀದಿಸುತ್ತಾರೆ. ವೈದ್ಯರು ಜೆನರಿಕ್‌ ಔಷಧಗಳಿಗೆ ಆದ್ಯತೆ ನೀಡಿ, ಬಡಜನರಿಗೆ ಅಗ್ಗವಾಗಿ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ “ಪ್ರಧಾನಮಂತ್ರಿ ಜನೌಷಧಿ ಪರಿಯೋಜನೆ’ ಎಂಬ ಕಾರ್ಯಕ್ರಮ ಜಾರಿ ಮಾಡಲು ಚಿಂತನೆ ನಡೆಸಿದ್ದೇವೆ. ಎಲ್ಲರೂ ಕನಿಷ್ಠ ಬೆಲೆಗೆ ಆರೋಗ್ಯ ಸೇವೆ ಪಡೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.

ಜಲಯುಕ್ತ ಶಿವಾರ್‌ ಅನುಸರಿಸಿ: ಬರ ಪರಿಸ್ಥಿತಿಯನ್ನು ಎದುರಿಸಲು ಮಹಾರಾಷ್ಟ್ರ ಸರ್ಕಾರ ಜಾರಿ ಮಾಡಿರುವ “ಜಲಯುಕ್ತ ಶಿವಾರ್‌’ ಕಾರ್ಯಕ್ರಮವನ್ನು ಎಲ್ಲ ರಾಜ್ಯಗಳೂ ಅನುಸರಿಸಲಿ ಎಂದು ಮೋದಿ ಸಲಹೆ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಈ ಯೋಜನೆಯತ್ತ ಆಸಕ್ತಿ ವಹಿಸಿದ್ದು, ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಿವೆ ಎಂದು ಜಲಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಹಿಂದಿಯಲ್ಲಿ ಭಾಷಣ ಮಾಡಿದ್ದೇಕೆ?
ಸೂರತ್‌ನ ಕತಾರ್‌ಗಾಂ ಪ್ರದೇಶದಲ್ಲಿ ಸಮಸ್ತ ಪತಿದಾರ್‌ ಆರೋಗ್ಯ ಟ್ರಸ್ಟ್‌ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 550 ಹಾಸಿಗೆಯ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ತದನಂತರ, ಅಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಮಾತನಾಡುವಾಗ, ಗುಜರಾತಿ ಭಾಷೆಯ ಬದಲು ಹಿಂದಿಯನ್ನು ಆಯ್ದುಕೊಂಡರು. ಇದಕ್ಕೆ ಅವರು ನೀಡಿದ ಕಾರಣ ಹೀಗಿತ್ತು- ನಾನಿಲ್ಲಿಗೆ ಬಂದಾಗ ಗುಜರಾತಿಯಲ್ಲಿ ಮಾತಾಡುವುದೋ, ಹಿಂದಿಯಲ್ಲೋ ಎಂಬ ಗೊಂದಲವಿತ್ತು. ಆದರೆ, ನೀವು ಮಾಡಿರುವ ಅತ್ಯದ್ಭುತ ಕೆಲಸವು ಇಡೀ ದೇಶಕ್ಕೆ ಗೊತ್ತಾಗಬೇಕೆಂದರೆ, ನಾನು ಹಿಂದಿಯಲ್ಲೇ ಮಾತಾಡುವುದು ಒಳಿತು ಎಂದು ಅನಿಸಿತು ಎಂದರು ಮೋದಿ.
**
ಪುಟಾಣಿಯ ಮಾತಾಡಿಸಲು ಕಾರು ನಿಲ್ಲಿಸಿದ ಪ್ರಧಾನಿ ಮೋದಿ!
ಸೋಮವಾರ ಸೂರತ್‌ನಿಂದ ಏರ್‌ಪೋರ್ಟ್‌ಗೆ ತೆರಳುವ ಮಾರ್ಗ ಮಧ್ಯೆ 4 ವರ್ಷದ ಪುಟಾಣಿಗೋಸ್ಕರ ಪ್ರಧಾನಿ ಮೋದಿ ಅವರು ಭದ್ರತಾ ಶಿಷ್ಟಾಚಾರವನ್ನು ಬದಿಗಿರಿಸಿ ಕಾರನ್ನು ನಿಲ್ಲಿಸಿದ ಘಟನೆ ನಡೆದಿದೆ. ಪ್ರಧಾನಿ ಹಾಗೂ ಬೆಂಗಾವಲು ವಾಹನಗಳು ವಿಮಾನ ನಿಲ್ದಾಣದತ್ತ ತೆರಳುತ್ತಿದ್ದಾಗ, ಮೋದಿಯವರನ್ನು ನೋಡಲಿಕ್ಕಾಗಿ ಮಾರ್ಗದುದ್ದಕ್ಕೂ ಭಾರೀ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಪುಟ್ಟ ಬಾಲಕಿಯೊಬ್ಬಳು ಪ್ರಧಾನಿಯತ್ತ  ಬರಲು ಹವಣಿಸುತ್ತಿದ್ದಾಗ, ಭದ್ರತಾ ಕಮಾಂಡೋಗಳು ಆಕೆಯನ್ನು ಹಿಂದಕ್ಕೆ ಕಳುಹಿಸಿದರು. ಕೂಡಲೇ ಅವರನ್ನು ತಡೆದ ಮೋದಿ, ಕಾರಿನಿಂದ ಇಳಿದು ಬಾಲಕಿಯನ್ನು ಬರಮಾಡಿಕೊಂಡು, ಒಂದೆರಡು ಮಾತನಾಡಿ ಕಳುಹಿಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next