ಚಿಕ್ಕಬಳ್ಳಾಪುರ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ದಾಳಿ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ದೇಶವ್ಯಾಪಿ ಕರೆ ನೀಡಿರುವ ವೈದ್ಯರ ಮುಷ್ಕರ ಬೆಂಬಲಿಸಿ ಸಂಘದ ಜಿಲ್ಲಾ ಘಟಕ ಸೋಮವಾರ ಬೆಳಗ್ಗೆ 6 ರಿಂದ ಮಂಗಳವಾರ ಬೆಳಗ್ಗೆ 6 ರವರೆಗೆ ಜಿಲ್ಲಾದ್ಯಂತ ಎಲ್ಲಾ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿದೆ.
ವೈದ್ಯರ ಮುಷ್ಕರದಿಂದಾಗಿ ಜಿಲ್ಲೆಯ ಜನ ಜೀವನದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಜಿಲ್ಲಾದ್ಯಂತ ಎಲ್ಲ ಆಸ್ಪತ್ರೆಗಳ ಹೊರರೋಗಿಗಳ ವಿಭಾಗವನ್ನು ಸಂಪೂರ್ಣ ಬಂದ್ ಮಾಡಿ ವೈದ್ಯರು ಪ್ರತಿಭಟನೆಯಲ್ಲಿ ತೊಡಗಲಿದ್ದಾರೆ ಎಂದು ಚಿಕ್ಕಬಳ್ಳಾಪುರದ ಐಎಂಎ ಜಿಲ್ಲಾಧ್ಯಕ್ಷ ಡಾ.ವೆಂಕಟಚಾಲಪತಿ ತಿಳಿಸಿದ್ದಾರೆ.
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಆರಂಭವಾದ ವೈದ್ಯರ ಮುಷ್ಕರವು ದೇಶಾದ್ಯಂತ ವ್ಯಾಪಿಸಿದ್ದು, ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ಭದ್ರತೆ ಒದಗಿಸುವಂತೆ ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ನಡೆಸುತ್ತಿರುವ ವೈದ್ಯರ ಬೆಂಬಲಕ್ಕೆ ಐಎಂಎ ಚಿಕ್ಕಬಳ್ಳಾಪುರ ಜಿಲ್ಲಾ ಸಂಘವೂ ಬೆಂಬಲ ಸೂಚಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಐಎಂಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸೌಮ್ಯ ತಿಳಿಸಿದ್ದಾರೆ.
ಜನರ ಜೀವ ಉಳಿಸುವ ವೈದ್ಯರಿಗೆ ಭದ್ರತೆ ಇಲ್ಲದಂತಾಗಿದೆ. ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಲವಾದ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು. ಜಿಲ್ಲಾದ್ಯಂತ ಒಳರೋಗಿಗಳ ಹಾಗೂ ತುರ್ತುಚಿಕಿತ್ಸೆ ಹೊರತುಪಡಿಸಿ ಇನ್ನುಳಿದ ಹೊರರೋಗಿಗಳ ವಿಭಾಗವನ್ನು ಸಂಪೂರ್ಣ ಬಂದ್ ಮಾಡಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿರುವುದರಿಂದ ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಭಾರತೀಯ ವೈದ್ಯಕೀಯ ಸಂಘ ಕೋರಿದೆ.
ರೋಗಿಗಳ ಮೇಲೆ ದುಷ್ಪರಿಣಾಮ: ಐಎಂಎ ಜಿಲ್ಲಾ ಘಟಕ ಜಿಲ್ಲೆಯಲ್ಲಿ 24 ಗಂಟೆಗಳ ಕಾಲ ಮುಷ್ಕರ ಬೆಂಬಲಿಸಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಮುಚ್ಚುವುದರಿಂದ ರೋಗಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ 250 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಇದ್ದು, ತುರ್ತು ಚಿಕಿತ್ಸೆಗೆ ವಿನಾಯಿತಿ ನೀಡಿ ಹೊರ ರೋಗಿಗಳ ವಿಭಾಗ ಬಂದ್‌ಗೊಳಿಸಲು ವೈದ್ಯರ ಸಂಘ ಕರೆ ನೀಡಿದೆ.
ರೋಗಿಗಳು ಆತಂಕ ಪಡುವ ಅಗತ್ಯವಿಲ್ಲ – ಡಿಎಚ್‌ಒ: ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು, ರೋಗಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರವಿಶಂಕರ್, ಜಿಲ್ಲೆಯ ಜನತೆಗೆ ಅಭಯ ನೀಡಿದ್ದಾರೆ.
ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ರೋಗಿಗಳಿಗೆ ತೊಂದರೆ ಆಗದಂತೆ ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ಹಾಗೂ ಸಿಬ್ಬಂದಿಗೆ ರಜೆ ಹಾಕದಂತೆ ಸೂಚಿಸಲಾಗಿದೆ. ತಾಲೂಕಿನ ಸಾರ್ವಜನಿಕ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗವನ್ನು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.