Advertisement

ವೈದ್ಯರ ರಾಷ್ಟ್ರವ್ಯಾಪಿ ಮುಷ್ಕರ ಯಶಸ್ವಿ

10:47 AM Jun 20, 2019 | Team Udayavani |

ನವದೆಹಲಿ/ಬೆಂಗಳೂರು/ಬಾಗಲಕೋಟೆ: ಸಹೋದ್ಯೋಗಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಡೆಸುತ್ತಿದ್ದ ವೈದ್ಯರಿಗೆ, ಸೋಮವಾರ ದೇಶಾದ್ಯಂತ ವೈದ್ಯ ಸಮೂಹವೇ ಸಾಥ್‌ ನೀಡಿತು. ಈ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ಕರೆ ಕೊಟ್ಟಿದ್ದ ರಾಷ್ಟ್ರವ್ಯಾಪಿ ವೈದ್ಯ ಮುಷ್ಕರ ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಯಶಸ್ವಿಯಾಯಿತು.

Advertisement

ಆದರೆ, ವೈದ್ಯರ ಮುಷ್ಕರದಿಂದಾಗಿ ಆರೋಗ್ಯ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿ, ರೋಗಿಗಳು ಪರದಾಡುವಂಥ ಸ್ಥಿತಿ ನಿರ್ಮಾಣವಾಯಿತು. ಪಶ್ಚಿಮ ಬಂಗಾಳದಲ್ಲಂತೂ, ಕಳೆದೊಂದು ವಾರದಿಂದ ಮುಷ್ಕರ ನಡೆಯುತ್ತಿದ್ದ ಕಾರಣ, ರೋಗಿಗಳ ಸ್ಥಿತಿ ಹೇಳತೀರದಂತಾಗಿತ್ತು.

ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ: ಐಎಂಎ ಕರೆ ಕೊಟ್ಟಿದ್ದ ಮುಷ್ಕರಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧೆಡೆ ಸರ್ಕಾರಿ ಆಸ್ಪತ್ರೆಗಳನ್ನು ಸೇರಿದಂತೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ಘಟಕದ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತು.

ಮುಷ್ಕರದ ಹಿನ್ನೆಲೆ ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ರಜೆ ನೀಡದೇ ಸಾಂಕೇತಿಕವಾಗಿ ಪ್ರತಿಭಟಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಆದರೂ, ರಾಜ್ಯದ ಕೆಲವೆಡೆ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಘಟಕವನ್ನು ಬಂದ್‌ ಮಾಡಿ ವೈದ್ಯರು ಮುಷ್ಕರದಲ್ಲಿ ಭಾಗವಹಿಸಿದ್ದರು.

ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತವಾಗಿತ್ತು. ಇದರಿಂದ ರೋಗಿಗಳು ಚಿಕಿತ್ಸೆಗೆ ಪರದಾಡಿದರು. ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ಹಾಗೂ ತುರ್ತು ಸೇವಾ ಘಟಕಗಳಲ್ಲಿ ದಟ್ಟಣೆ ಹೆಚ್ಚು ಕಂಡು ಬಂದಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ರೋಗಿಗಳು ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ನಿಂದ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ದಟ್ಟಣೆ ಹೆಚ್ಚಿತ್ತು. ವೈದ್ಯರು ಎಂದಿನಂತೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಮಧ್ಯಾಹ್ನ ಊಟದ ವೇಳೆಯಲ್ಲಿ ಪ್ರತಿಭಟನೆ ನಡೆಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ವ್ಯಕ್ತಿಯೊಬ್ಬ ಬಲಿ

ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಜೆಡಿಎಸ್‌ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಬಾಗಲಕೋಟೆಯ ಬಾದಾಮಿ ತಾಲೂಕು ಕೆರೂರ ಪಟ್ಟಣದ ದಾವಲಸಾಬ ಕೊಣ್ಣೂರ (55) ಮೃತಪಟ್ಟ ವ್ಯಕ್ತಿ. ಅಸ್ತಮಾ, ಜ್ವರದಿಂದ ಬಳಲುತ್ತಿದ್ದ ಇವರನ್ನು ಸೋಮವಾರ ಮಧ್ಯಾಹ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಸಿಬ್ಬಂದಿ ಹೇಳಿದ ಬಳಿಕ ಮತ್ತೂಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದ್ದರು. ಅಲ್ಲೂ ವೈದ್ಯರು ಇರಲಿಲ್ಲ. ನವನಗರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾರೆ.

ದೀದಿ-ವೈದ್ಯರ ಸಂಧಾನ ಯಶಸ್ವಿ

ವಾರದಿಂದ ನಡೆದ ವೈದ್ಯರ ಮುಷ್ಕರ ಅಂತ್ಯಗೊಂಡಿದೆ. ಸೋಮವಾರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ವೈದ್ಯರ ನಡುವೆ ನಡೆದ ಮಾತುಕತೆ ಯಶಸ್ವಿಯಾ ಯಿತು. 31 ವೈದ್ಯರ ನಿಯೋಗದೊಂದಿಗೆ ದೀದಿ ಸಭೆ ನಡೆಸಿದ್ದು, ವೈದ್ಯರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ವೈದ್ಯರಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಜಾರಿ ಮಾಡುವ ಕುರಿತೂ ಭರವಸೆ ನೀಡಿ ದ್ದಾರೆ. ಮಾತುಕತೆ ಫ‌ಲಪ್ರದವಾದ ಕಾರಣ, ಮುಷ್ಕರ ವಾಪಸ್‌ ಪಡೆಯುತ್ತಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next