ದೆಹಲಿ: ಐಸಿಯು ಬೆಡ್ ಸಿಗದೆ ಕೋವಿಡ್ ರೋಗಿ ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಕುಟುಂಬಸ್ಥರು ವೈದ್ಯರ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳವಾರ ನವದೆಹಲಿಯಲ್ಲಿ ನಡೆದಿದ್ದು, ಬಡಿದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ದೆಹಲಿಯ ಸರಿತಾ ವಿಹಾರದ ಅಪೋಲೋ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಕೋವಿಡ್-19 ರೋಗಿ ಸಾವನ್ನಪ್ಪಿದ್ದರು. ಇದರಿಂದ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ ವಿರುದ್ಧ ಮೃತರ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಗಲಾಟೆಯಲ್ಲಿ ಕಿಟಕಿ, ಬಾಗಿಲುಗಳು ಸೇರಿದಂತೆ ಆಸ್ಪತ್ರೆಯ ಕೆಲವು ವಸ್ತುಗಳಿಗೆ ಹಾನಿಯಾಗಿದೆ.
ಸೋಮವಾರ ಸಂಜೆ 62 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಐಸಿಯು ಬೆಡ್ ಸಿಗದ ಕಾರಣ ಮಂಗಳವಾರ ಬೆಳಗ್ಗೆ ಆಕೆ ಮೃತಪಟ್ಟಿದ್ದರು. ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಮೇಲೆ ಆಕ್ರೋಶಗೊಂಡ ಮೃತ ಮಹಿಳೆ ಸಂಬಂಧಿಕರು ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಆವರಣವನ್ನು ಧ್ವಂಸಗೊಳಿಸಿದ್ದಾರೆ.
ಘಟನೆ ವೇಳೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 8 ಮಂದಿ ಗಾಯಗೊಂಡಿದ್ದಾರೆ. ಕಾಯುವ ಕೊಠಡಿ ವೇಳೆ ಕುರ್ಚಿಗಳು ಕೆಳಗೆ ಬಿದ್ದಿರುವುದು, ಗೋಡೆಗಳು ನುಚ್ಚು ನೂರಾಗಿರುವುದು ಹಾಗೂ ನೆಲದ ಮೇಲೆ ರಕ್ತದ ಕಲೆಗಳಾಗಿರುವುದನ್ನು ಕಾಣಬಹುದಾಗಿದೆ.