Advertisement

ವೈದ್ಯರಿದ್ದರೂ ತೀವ್ರ ನಿಗಾ ಘಟಕ ತೆರೆಯಲು ನಿರುತಾಹ!

06:22 PM Aug 18, 2021 | Team Udayavani |

ಸಿಂಧನೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಗಸ್ಟ್‌ 10ರೊಳಗೆ ನವಜಾತ ಶಿಶುವಿನ ತೀವ್ರ ಘಟಕ ಆರಂಭಿಸಬೇಕೆಂಬ ಆದೇಶವಿದ್ದರೂ ಅನುಷ್ಠಾನವಾಗದ ಪರಿಣಾಮ ಪಾಲಕರು ಖಾಸಗಿ ಆಸ್ಪತ್ರೆಗಳ ಬಾಗಿಲು ಬಡಿಯುವಂತಾಗಿದೆ. ಇಲ್ಲಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಿದ್ದರೂ ಒಳರೋಗಿಗಳ ಚಿಕಿತ್ಸೆ ದೊರೆಯದ ಪರಿಣಾಮ ಬಡವರು ಸಂಕಷ್ಟ ಎದುರಿಸುವಂತಾಗಿದೆ.

Advertisement

ಕೋವಿಡ್‌ 3ನೇ ಅಲೆ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ಸರಕಾರವೇ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ 15 ಬೆಡ್‌ಗಳ ನವಜಾತ ಶಿಶುವಿನ ತೀವ್ರ ಘಟಕ ತೆರೆಯಬೇಕಿತ್ತು. ಆದರೆ ಇದನ್ನು ಅನುಷ್ಠಾನಗೊಳಿಸದಿದ್ದರಿಂದ ಬಡವರು ತೊಂದರೆ ಎದುರಿಸುವಂತಾಗಿದೆ. ದುಬಾರಿ ಮೊತ್ತ ಪಾವತಿಸಿ, ಖಾಸಗಿಯಾಗಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ತಲೆದೋರಿದೆ.

ತೀವ್ರ ಘಟಕ ಆರಂಭವಿಲ್ಲ: ಶಿಶು ಮರಣವನ್ನು ತಪ್ಪಿಸುವ ಉದ್ದೇಶದೊಂದಿಗೆ ಆ.10ರೊಳಗೆ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ನವಜಾತ ಶಿಶು ತೀವ್ರ ನಿಗಾ ಘಟಕ ತೆರೆಯಲು ಹೇಳಿದ್ದರೂ ಆರಂಭವಾಗಿಲ್ಲ. ಒಬ್ಬರು ಹೊರಗುತ್ತಿಗೆ ಮಕ್ಕಳ ವೈದ್ಯರಿದ್ದರೆ, ಮತ್ತೂಬ್ಬರು ಕಾಯಂ ಮಕ್ಕಳ ವೈದ್ಯರಿದ್ದಾರೆ. ಜತೆಗೆ 1.50 ಕೋಟಿ ರೂ. ವೆಚ್ಚದ ಆಕ್ಸಿಜನ್‌ ಘಟಕವನ್ನೂ ಅಳವಡಿಸಲಾಗಿದೆ. ಈ ಎಲ್ಲ ಸೌಲಭ್ಯ ಬಳಸಿ ವೆಂಟಿಲೇಟರ್‌, ಆಕ್ಸಿಜನ್‌ ಸೌಲಭ್ಯ ಕಲ್ಪಿಸಿ, ಉಚಿತ ಔಷಧ ವಿತರಿಸಲು ಅವಕಾಶವಿದ್ದರೂ ಆಸಕ್ತಿ ತೋರಿಲ್ಲ.

ಖಾಸಗಿಯತ್ತ ಮಕ್ಕಳು: ಅಕ್ಕಪಕ್ಕದ ತಾಲೂಕುಗಳಲ್ಲಿ 15 ಬೆಡ್‌ಗಳ ತೀವ್ರ ನಿಗಾ ಘಟಕ ಆರಂಭಿಸಲಾಗಿದೆ. ಕೋವಿಡ್‌ 3ನೇ ಅಲೆ ಹಿನ್ನೆಲೆಯಲ್ಲಿ 25 ಬೆಡ್‌ಗಳ ಮಕ್ಕಳ ವಾರ್ಡ್‌ ಕೂಡ ತೆರೆಯಬೇಕಿದೆ. ಯಾವ ಕ್ರಮವೂ ಇಲ್ಲಿ ಆಗಿಲ್ಲ. ಬದಲಿಗೆ ಇಲ್ಲಿಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳಿಸುವ ಕೆಲಸ ಮಾಡಲಾಗುತ್ತಿದೆ. ಸೋಮವಾರ ಒಂದು ದಿನ ಲಭ್ಯವಾದ ಮಾಹಿತಿ ಪ್ರಕಾರ, 1 ಸಾವಿರ ಮಕ್ಕಳು ಕೆಮ್ಮು, ನೆಗಡಿ, ಜ್ವರದಿಂದ ಬಳಲಿ ಆಸ್ಪತ್ರೆಗೆ ಬಂದಿದ್ದಾರೆ.

ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು, 13 ಮಕ್ಕಳ ತಜ್ಞರು ಖಾಸಗಿ ಆಸ್ಪತ್ರೆಯಲ್ಲೇ ಅವರಿಗೆ ಚಿಕಿತ್ಸೆ ಒದಗಿಸಿದ್ದಾರೆ. ಬಡ ಮಕ್ಕಳಿಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಿಲ್ಲ.

Advertisement

ಆರ್ಥಿಕ ಹೊರೆಗೆ ತತ್ತರ: ಖಾಸಗಿ ಆಸ್ಪತ್ರೆಗಳಲ್ಲಿ ನವಜಾತ ಶಿಶು ತೀವ್ರ ಘಟಕಕ್ಕೆ ಮಕ್ಕಳನ್ನು ಕರೆದೊಯ್ದಾಗ ಬರೋಬ್ಬರಿ ದಿನವೊಂದಕ್ಕೆ 3 ಸಾವಿರ ರೂ. ಹೊರೆ ಪಾಲಕರಿಗೆ ಬೀಳುತ್ತಿದೆ. ಇದನ್ನು ತಪ್ಪಿಸಲು ಸರಕಾರಿ ಆಸ್ಪತ್ರೆಯಲ್ಲಿ ಅವಕಾಶವಿದ್ದರೂ ಪಾಲನೆ ಮಾಡಿಲ್ಲ. ನವೆಂಬರ್‌, ಡಿಸೆಂಬರ್‌ನಲ್ಲಿ ತೀವ್ರ ಚಳಿ ಹಿನ್ನೆಲೆಯಲ್ಲಿ ನವಜಾತ ಶಿಶುಗಳಲ್ಲಿ ಅನಾರೋಗ್ಯ ಹೆಚ್ಚುವುದು ಸಾಮಾನ್ಯ. ಆದರೆ ಈಗಲೇ ಮಕ್ಕಳಲ್ಲಿ ಸಮಸ್ಯೆ ಕಾಣಿಸುತ್ತಿದ್ದರೂ ಸರಕಾರಿ ವೈದ್ಯರು ಚಿಕಿತ್ಸೆ ಕೊಡಲು ಮನಸ್ಸು ಮಾಡದ್ದರಿಂದ ಪಾಲಕರು ಸಂಕಷ್ಟ ಎದುರಿಸುವಂತಾಗಿದೆ.

ಸರಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಆರಂಭಿಸಬೇಕು. ಇದರಿಂದ ಬಡವರಿಗೆ ಹೆಚ್ಚು ಸೌಲಭ್ಯ ದೊರೆಯುತ್ತದೆ. ಕೇಂದ್ರ-ರಾಜ್ಯ ಸರಕಾರ ಸೂಚನೆ ಇರುವುದರಿಂದ ಅದನ್ನು ಪಾಲಿಸಿದರೆ ಬಡವರಿಗೆ ಅನುಕೂಲವಾಗಲಿದೆ.
ಡಾ|ಕೆ.ಶಿವರಾಜ್‌, ಮಕ್ಕಳ ತಜ್ಞರು, ಸಹನಾ ಆಸ್ಪತೆ

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next