ನವದೆಹಲಿ:ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೆಲವು ದಿನಗಳ ಮಟ್ಟಿಗೆ ದೆಹಲಿಯನ್ನು ತೊರೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಅದಕ್ಕೆ ಕಾರಣ “ರಾಷ್ಟ್ರರಾಜಧಾನಿ” ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವುದು!
ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ಆರೋಗ್ಯದ ದೃಷ್ಟಿಯಿಂದ ದೆಹಲಿಯನ್ನು ತೊರೆಯಬೇಕು ಎಂದು ವೈದ್ಯರು ಸಲಹೆ ನೀಡಿರುವುದಾಗಿ ಪಕ್ಷದ ಮೂಲಗಳು ಶುಕ್ರವಾರ(ನವೆಂಬರ್ 20, 2020) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಗೋವಾ ಅಥವಾ ಚೆನ್ನೈನಲ್ಲಿ ಕೆಲವು ದಿನಗಳ ಕಾಲ ಕಳೆಯುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ.
ಮೂಲಗಳ ಪ್ರಕಾರ,ಸೋನಿಯಾ ಗಾಂಧಿ ಶುಕ್ರವಾರ ಸಂಜೆ ದೆಹಲಿಯಿಂದ ಹೊರಡುವ ಸಾಧ್ಯತೆ ಇದ್ದು, ತಾಯಿ ಜತೆಯಲ್ಲಿ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ತೆರಳಬಹುದು ಎಂದು ವರದಿ ವಿವರಿಸಿದೆ.
ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದ ಸೋನಿಯಾ ಗಾಂಧಿ ಅವರು ಆಗಸ್ಟ್ ತಿಂಗಳಿನಲ್ಲಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದರು. ಸೋನಿಯಾ ಗಾಂಧಿ ಅವರ ಎದೆಯ ಸೋಂಕಿನ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದು, ದೆಹಲಿಯ ವಾಯುಮಾಲಿನ್ಯ ತುಂಬಾ ತೊಂದರೆ ನೀಡಲಿದೆ ಎಂದು ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಲಾಕ್‌ಡೌನ್ ಬಳಿಕ ಹೊಸ ಚಿತ್ರದತ್ತ ಸೆಂಚುರಿ ಸ್ಟಾರ್ : ಶಿವಪ್ಪನಾದ ಶಿವಣ್ಣ
ದಿಲ್ಲಿಯ ಅತಿಯಾದ ವಾಯುಮಾಲಿನ್ಯದಿಂದ ಸೋನಿಯಾ ಗಾಂಧಿ ಅವರ ಅಸ್ತಮಾ ಹಾಗೂ ಎದೆ ನೋವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ದಿಲ್ಲಿಯನ್ನು ತೊರೆದು ಬೇರೆಡೆ ಸ್ವಲ್ಪಕಾಲ ಕಳೆಯುವಂತೆ ವೈದ್ಯರು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.