2020ರ ಆಗಸ್ಟ್, ಸೆಪ್ಟೆಂಬರ್. ಕೊರೊನಾ ಸೋಂಕಿನಿಂದ ಕರ್ನಾಟಕ, ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ನಲುಗುತ್ತಿತ್ತು. ರಾತ್ರಿ ಹೊತ್ತಿನಲ್ಲಿ ಎಲ್ಲರೂ ನಿದ್ರಿಸುತ್ತಿದ್ದಾಗ ದಿಢೀರ್ ದಾಳಿ ನಡೆದರೆ ಏನಾಗುತ್ತದೆಯೋ ಹಾಗೇ ಆಯಿತು ಎನ್ನಬಹುದು. ಇಡೀ ವೈದ್ಯಕೀಯ ಲೋಕವನ್ನು ನಿಬ್ಬೆರಗಾಗುವಂತೆ ಮಾಡಿತು ಆ ಸೋಂಕು.
ಉಡುಪಿಯ ಡಾ|ಟಿಎಂಎ ಪೈ ಆಸ್ಪತ್ರೆಯನ್ನು ನಿಯೋಜಿತ ಕೋವಿಡ್ ಆಸ್ಪತ್ರೆ ಎಂದು ಜಿಲ್ಲಾಡಳಿತ ಮತ್ತು ಮಣಿಪಾಲದ ಮಾಹೆ ಎಪ್ರಿಲ್‌ನಲ್ಲಿ ಘೋಷಿಸಿದ್ದವು. ಖಾಸಗಿ ಆಸ್ಪತ್ರೆಯೊಂದನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದ್ದು ರಾಜ್ಯದಲ್ಲೇ ಪ್ರಥಮ.
ಕೊರೊನಾ ಸೋಂಕೆಂದರೆ ಭಯಾನಕ ಸ್ಥಿತಿಯಲ್ಲಿ ಕಾಣುತ್ತಿದ್ದ ಸಂದರ್ಭ. ಆತಂಕ, ಭಯ ಎಲ್ಲವೂ ಮಿಶ್ರಿತವಾಗಿದ್ದ ಭಾವ ಎಲ್ಲರಲ್ಲೂ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಹಿತ 60 ತಜ್ಞ ವೈದ್ಯರ ತಂಡ ಡಾ|ಟಿಎಂಎ ಪೈ ಆಸ್ಪತ್ರೆಯಲ್ಲಿ 24 ಗಂಟೆ ಕಾರ್ಯಾಚರಿಸುತ್ತಿತ್ತು. ಆಸ್ಪತ್ರೆ ನೋಡಲ್ ಅಧಿಕಾರಿಯಾಗಿ ಡಾ|ಶಶಿಕಿರಣ್ ಉಮಾಕಾಂತ್ ಹೊಣೆ ವಹಿಸಿಕೊಂಡಿದ್ದರು.
ಡಾ|ಶಶಿಕಿರಣ್ ಮೂಲತಃ ಮೈಸೂರಿನವರು. ಸೆಪ್ಟೆಂಬರ್ ಮೊದಲ ವಾರ ಇವರ ತಂದೆ ಉಮಾಕಾಂತ್ (78), ತಮ್ಮ, ತಮ್ಮನ ಹೆಂಡತಿ, ಮಗನಿಗೆ ಸೋಂಕು ತಗುಲಿತ್ತು. ತಂದೆ ಮನೆ ಬಿಟ್ಟು ಹೊರಗೆ ಹೋಗಿರಲಿಲ್ಲ. ಒಂದು ದಿನ ಬಿದ್ದು ಪೆಟ್ಟಾದಾಗ ಆಸ್ಪತ್ರೆಗೆ ಕರೆದೊಯ್ಯಲೇಬೇಕಾಯಿತು. ನಾಲ್ಕೈದು ದಿನಗಳಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿತು. ಪರೀಕ್ಷಿಸಿದಾಗ ಸೋಂಕಿರುವುದು ಖಚಿತವಾಯಿತು. ವೃದ್ಧರಾದ ಕಾರಣ ತಂದೆಗೆ ಕೇವಲ ಆಸ್ಪತ್ರೆ ಬೆಡ್ ಅಲ್ಲ, ಐಸಿಯು, ವೆಂಟಿಲೇಟರ್ ಸಹ ಅನಿವಾರ್ಯ ಎನ್ನುವಂತಿತ್ತು.ಆಗ ಎಲ್ಲ ಕಡೆಯಂತೆ ಮೈಸೂರಿನ ಆಸ್ಪತ್ರೆಗಳೂ ಹೌಸ್‌ಫುಲ್. ಸರಕಾರಿ ಆಸ್ಪತ್ರೆಗಳಲ್ಲಿ ಜಾಗವಿರಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲೂ ಅದೇ ಸ್ಥಿತಿ. ಉಡುಪಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ 130 ಕ್ರಿಟಿಕಲ್ ಸ್ಥಿತಿಯ ರೋಗಿಗಳಿಗೆ ಉಪಚರಿಸುತ್ತಿದ್ದ ಡಾ| ಶಶಿಕಿರಣ್‌ರಿಗೆ ಮೈಸೂರಿನಲ್ಲಿ ತಂದೆಗೊಂದು ಸಾಮಾನ್ಯ ಹಾಸಿಗೆ ಕೊಡಿಸಲು ಹರಸಾಹಸ ಪಡಲೇಬೇಕಾಯಿತು. ಕೊನೆಗೆ ಅದೇ ದಿನ ಸೆ. 7 ರಂದು ಗುರುತು ಪರಿಚಯದ ಮೇರೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಮರ್ಜೆನ್ಸಿ ವಿಭಾಗದ ಪರೀಕ್ಷೆಗೆ ವ್ಯವಸ್ಥೆ ಮಾಡಿ ಒಳರೋಗಿ ವಿಭಾಗಕ್ಕೆ ಸೇರಿಸುವಾಗ ಮುಕ್ಕಾಲು ದಿನ ಕಳೆದಿತ್ತು. ಮರುದಿನವೇ ಆಕ್ಸಿಜನ್ ಬೇಕಾಗುವ ಪರಿಸ್ಥಿತಿ. ಆಗ ಸೋಂಕಿತರ ಜತೆ ಯಾರನ್ನೂ ಬಿಡುತ್ತಿರಲಿಲ್ಲ. ಉಡುಪಿಯಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದ ಮಗ ಸೆ. 11ರಂದು ಬೆಳಗ್ಗೆ ಮೈಸೂರಿಗೆ ಹೊರಡಬೇಕಿತ್ತು. ಆದರೆ ಹಿಂದಿನ ದಿನ ರಾತ್ರಿಯೇ ಐಸಿಯು, ವೆಂಟಿಲೇಟರ್ ಸಹ ಬೇಕಾಯಿತು. ಬೆಳಗ್ಗೆ 7.45ಕ್ಕೆ ತಂದೆ ಮೃತಪಟ್ಟ ಸುದ್ದಿ ಕಿವಿಗೆ ಬಡಿಯಿತು. ಅಂತಿಮ ಸಂಸ್ಕಾರಕ್ಕೆಂದು ಹೋಗಲೇಬೇಕು ತಾನೇ? ಗಂಟೆ 8ಕ್ಕೆ ಸ್ವತಃ ಕಾರನ್ನು ಚಲಾಯಿಸಿಕೊಂಡು ಮೈಸೂರು ಮುಟ್ಟಿದರು. ಮೈಸೂರಿಗೆ ಹೋಗುವಾಗ ಉಡುಪಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಧಿಕರಿಂದ, ರೋಗಿಗಳನ್ನು ದಾಖಲಿಸಿದ ವಿಐಪಿಗಳಿಂದ, ಚಿಕಿತ್ಸೆ ಕೊಡುತ್ತಿದ್ದ ತಂಡದ ವೈದ್ಯರಿಂದ ದೂರವಾಣಿ ಕರೆ ಬರುತ್ತಲೇ ಇತ್ತು. ಎಲ್ಲದಕ್ಕೂ ಉತ್ತರಿಸುತ್ತಲೇ ಪ್ರಯಾಣ ಸಾಗಿತ್ತು. ಅಗತ್ಯವಿದ್ದಾಗ “ನಾನು ಇಂತಹ ದಿನ ಬರುತ್ತೇನೆ, ಆಗ ವಿವರ ಕೊಡುತ್ತೇನೆ’ ಎನ್ನುತ್ತಿದ್ದರು, ಕರೆ ಸ್ವೀಕರಿಸದೆ ಇದ್ದಾಗ ಮತ್ತೆ ಅವರೇ ಕರೆ ಮಾಡುತ್ತಿದ್ದರು. ತಂದೆಯ ಸಾವಿಗೆ ಸಂಬಂಧಿಸಿ ಬ್ಯುಸಿ ಇದ್ದೇನೆಂದು ಅವರು ಎಲ್ಲಿಯೂ ಹೇಳಿರಲೇ ಇಲ್ಲ. ಹೇಗೋ ದುಃಖದ ಸುದ್ದಿ ಗೊತ್ತಾದಾಗ “ಛೇ, ಹೇಳಬಾರದಿತ್ತೆ?’ ಎಂದು ಕರೆ ಮಾಡಿದವರು ಪಶ್ಚಾತ್ತಾಪ ಪಟ್ಟಿದ್ದೂ ಉಂಟು. ಮೂರು ದಿನ ಕರ್ಮಾಂಗಗಳನ್ನು ಮುಗಿಸಿ ಉಡುಪಿಗೆ ಮರಳಿದವರು ಮತ್ತೆ ಐದು ದಿನ ರೋಗಿಗಳನ್ನು ಉಪಚರಿಸದೇ ಸುಮ್ಮನೆ ಕುಳಿತುಕೊಳ್ಳಲಿಲ್ಲ. ವೈಕುಂಠ ಸಮಾರಾಧನೆ ಮುಗಿಸಿದವರೇ ಮತ್ತೆ ತೊಡಗಿಕೊಂಡಿದ್ದು ಕೊರೊನಾ ರೋಗಿಗಳ ಆರೋಗ್ಯ ಕಾಪಾಡುವ ಕರ್ತವ್ಯದಲ್ಲಿ.
ಈಗ ಕೊರೊನಾ ಕಾಲಿಟ್ಟು ವರ್ಷ ಕಳೆದಿದೆ. ಈಗ ಡಾ|ಟಿಎಂಎ ಪೈ ಆಸ್ಪತ್ರೆ ಕೋವಿಡ್ ನಿಯೋಜಿತ ಆಸ್ಪತ್ರೆ ಅಲ್ಲ, ಇತರ ರೋಗಿಗಳೂ ಇದ್ದಾರೆ. ಡಾ|ಶಶಿಕಿರಣ್ ಈಗ ವೈದ್ಯಕೀಯ ಅಧೀಕ್ಷಕ. ಪ್ರಸ್ತುತ ಕೊರೊನಾ ಸಂಬಂಧಿತ 80 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋದ ವರ್ಷಕ್ಕಿಂತ ಈಗ ಸೋಂಕು ಪೀಡಿತರ ಸಂಖ್ಯೆ ಕಡಿಮೆ ಇದ್ದರೂ ಸೋಂಕಿನ ತೀವ್ರತೆ ಹೆಚ್ಚಿದೆ, ಜತೆಗೆ
ಕೊನೆಯ ಗಳಿಗೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆ ತರುವ ಪ್ರವೃತ್ತಿಯೂ ರೋಗಿಗಳ ಮತ್ತು ವೈದ್ಯ ವ್ಯವ ಸ್ಥೆಯ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಇಂತಹ ಕಾರಣ ದಿಂದಾಗಿ 130 ರೋಗಿಗಳನ್ನು ನಿಭಾಯಿಸುವುದಕ್ಕಿಂತ 80 ರೋಗಿಗಳನ್ನು ನಿಭಾಯಿಸುವುದೇ ಹೆಚ್ಚು ಕಷ್ಟವಾಗು ತ್ತಿದೆ. ಎಲ್ಲೆಡೆಯೂ ಎಲ್ಲರ ಅನುಭವವೂ ಇದುವೇ.
ತಂದೆಯ ಸಾವೇ ಇರಲಿ, ಹಠಾತ್ ಆಗಿ ಎರಗಿದ ಸೋಂಕೇ ಇರಲಿ, ಸಾಮಾನ್ಯ ರೋಗಿಯೇ ಇರಲಿ, ಗಂಭೀರ ರೋಗಿಯೇ ಇರಲಿ ಡಾ|ಶಶಿಕಿರಣರ ಕರ್ತವ್ಯ ಪಾಲನೆಯಲ್ಲಿ, ಮಾತು, ಮಾರ್ಗದರ್ಶನದಲ್ಲಿ ಏರುಪೇರು ಕಾಣುವುದಿಲ್ಲ. ನಿರರ್ಗಳ ಮಾತಿನಲ್ಲಿ ನಿಖರತೆ, ಸ್ಪಷ್ಟತೆ ಎಲ್ಲಿಯೂ ವ್ಯತ್ಯಯವಾಗುವುದಿಲ್ಲ. ಇಂತಹ ವಿಶ್ವಾಸಾರ್ಹ ವೈದ್ಯರ ಮಾತೇ ಔಷಧಿಯ ಪರಿಣಾಮವನ್ನು ಹೆಚ್ಚಿಸುತ್ತದೆ, ಇದನ್ನೇ “ಡಾಕ್ಟರ ಕೈಗುಣ’ ಎಂದು ಹಿರಿಯರು ಕರೆಯುತ್ತಿದ್ದರು.
ಸ್ಥಿತಪ್ರಜ್ಞತೆ ನಮ್ಮನ್ನು ಸದಾ ಕಠಿನ ಸಂದರ್ಭದಲ್ಲಿ ಕಾಯುವಂಥ ಪ್ರಾಣವಾಯುವಿನಂತೆ ಎಂದೆನಿಸು ವುದುಂಟು. ಅದೇ ನಾವೂ ಬದುಕಿನಲ್ಲಿ ಮಾಡಿಕೊಳ್ಳ ಬೇಕಾದ ಮತ್ತೂಂದು ಕಠಿನ ಅಭ್ಯಾಸ.
– ಮಟಪಾಡಿ ಕುಮಾರಸ್ವಾಮಿ