Advertisement

ಆಪರೇಶನ್ ಮಾಡೋದು ಅರ್ಧಕ್ಕೆ ಬಿಟ್ಟು ಜಿರಳೆ ಚಿತ್ರೀಕರಣ ಮಾಡಿದ ವೈದ್ಯ!

04:18 PM Jan 10, 2017 | Team Udayavani |

ಮುಂಬಯಿ : ಥಾಣೆ ಮುನಿಸಿಪಲ್‌ ಕಾರ್ಪೊರೇಶನ್‌ ನಡೆಸುತ್ತಿರುವ ಥಾಣೆಯ ಅತೀ ದೊಡ್ಡ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರ 45 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ಕಾಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸುತ್ತಿದ್ದ ವೇಳೆ, ಆಪರೇಶನ್‌ ಥಿಯೇಟರ್‌ನಲ್ಲಿ ಜಿರಳೆ ಓಡಾಡುತ್ತಿರುವುದನ್ನು ಕಂಡು ಅದನ್ನು ಜ್ವಲಂತ ದಾಖಲೆಗಾಗಿ ಚಿತ್ರೀಕರಿಸುವುದಕ್ಕಾಗಿ ವೈದ್ಯರು ಕೆಲ ಹೊತ್ತು ಶಸ್ತ್ರ ಚಿಕಿತ್ಸೆಯನ್ನು ನಿಲ್ಲಿಸಿಬಿಟ್ಟರು. 

Advertisement

ಹಿರಿಯ orthopaedic ಸರ್ಜನ್‌ ಡಾ. ಸಂಜಯ್‌ ಬರಾನ್‌ವಾಲಾ ಅವರು ಛತ್ರಪತಿ ಶಿವಾಜಿ ಮಹಾರಾಜ್‌ ಹಾಸ್ಪಿಟಲ್‌ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ವೇಳೆ ಕಂಡು ಬಂದ ಈ ಗಂಭೀರ ಹಾಗೂ ಕಳವಳಕಾರಿ ವಿದ್ಯಮಾನವನ್ನು ವಿಡಿಯೋದಲ್ಲಿ ದಾಖಲಿಸಿಕೊಂಡು ಆಡಳಿತ ವರ್ಗದ ಗಮನಕ್ಕೆ ತಂದರು. 

ಆದರೆ ಈ ಆಸ್ಪತ್ರೆಯಲ್ಲಿನ ಅನೈರ್ಮಲ್ಯಕ್ಕೆ ಇದೊಂದೇ ಅಥವಾ ಇದೇ ಮೊದಲ ಉದಾಹರಣೆ ಆಗಿಲ್ಲ ಎನ್ನುವುದು ಗಮನಾರ್ಹ. ಈ ಹಿಂದೆಯೂ ಅನೇಕ ಬಾರಿ ಆಸ್ಪತ್ರೆಯ ವೈದ್ಯರು ರೋಗಿಗಳ ಪಾಲಿಗೆ ಮಾರಣಾಂತಿಕವಾಗಬಲ್ಲ, ಆಪರೇಶನ್‌ ಥಿಯೇಟರ್‌ನಲ್ಲಿನ ಅತ್ಯಂತ ಕಳಪೆ ನೈರ್ಮಲ್ಯದ ಬಗ್ಗೆ  ಆಡಳಿತ ವರ್ಗವನ್ನು ಎಚ್ಚರಿಸಿದ್ದರು. ಇಲ್ಲಿನ ಈ ಗಂಭೀರ ಲೋಪ ದೋಷಗಳ ಬಗ್ಗೆ ಆಡಳಿತ ವರ್ಗಕ್ಕೆ ಎಷ್ಟು ಬಾರಿ ವರದಿ ಮಾಡಿದರೂ ಯಾವ ಪ್ರಯೋಜನವೂ ಆಗಿಲ್ಲ ಎಂದು ವೈದ್ಯರು ಮತ್ತು ನರ್ಸ್‌ಗಳು ಹೇಳುತ್ತಿರುತ್ತಾರೆ. 

ಇಲ್ಲಿನ ಆಪರೇಶನ್‌ ಥಿಯೇಟರ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ರೋಗಿಗಳ ಪೈಕಿ ಶೇ.25 ಮಂದಿಗೆ ಶಸ್ತ್ರಚಿಕಿತ್ಸೆಯ ಬಳಿಕದಲ್ಲಿ ಸೋಂಕು ತಗಲಿದ ಗಂಭೀರ ನಿದರ್ಶನಗಳಿವೆ. ಈ ಬಗ್ಗೆ ಡಾ. ಬರಾನ್‌ವಾಲಾ ಅವರು ಕೆಳೆದ ಒಂದು ತಿಂಗಳಲ್ಲೇ ಅನೇಕ ದೂರುಗಳನ್ನು ಆಡಳಿತ ವರ್ಗಕ್ಕೆ ನೀಡಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ. 

ಸಾಮಾನ್ಯವಾಗಿ ಹೆಚ್ಚಿನ ಆಸ್ಪತ್ರೆಗಳಲ್ಲಿ ಆಪರೇಶನ್‌ ಥಿಯೇಟರ್‌ಗಳಲ್ಲಿನ ನೈರ್ಮಲ್ಯಕ್ಕೆ ಅತ್ಯಂತ ಮಹತ್ವವನ್ನು ಕೊಡಲಾಗುತ್ತದೆ. ಆದರೆ ಇಲ್ಲಿ ಅದು ನಗಣ್ಯವಾಗಿದೆ. 

Advertisement

ಹಾಗೆ ನೋಡಿದರೆ ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ್‌ ಆಸ್ಪತ್ರೆಯು ಸಣ್ಣ ಆಸ್ಪತ್ರೆಯೇನೂ ಅಲ್ಲ ; ಇದು 500 ಹಾಸಿಗೆಗಳ ದೊಡ್ಡ ಆಸ್ಪತ್ರೆ; ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜಿಗೆ ಸೇರಿರುವ ಆಸ್ಪತ್ರೆ. ಇಲ್ಲಿ ನಾಲ್ಕು ಆಪರೇಶನ್‌ ಥಿಯೇಟರ್‌ಗಳಿವೆ. 2013ರಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರು ಇವುಗಳನ್ನು ಉದ್ಘಾಟಿಸಿದ್ದರು. ಆದರೆ ನಾಲ್ಕರಲ್ಲಿ ಒಂದು ಮಾತ್ರವೇ ಉಪಯೋಗವಾಗುತ್ತಿದೆ; ಕಾರಣ ಸಿಬಂದಿ ಕೊರತೆ ! 

Advertisement

Udayavani is now on Telegram. Click here to join our channel and stay updated with the latest news.

Next