Advertisement

ವೈದ್ಯ, ದಂತ ವೈದ್ಯ ಪ್ರವೇಶಕ್ಕೆ ಏಕರೂಪ ಕೌನ್ಸೆಲಿಂಗ್‌

03:45 AM Mar 24, 2017 | |

ವಿಧಾನಸಭೆ: ದೇಶಾದ್ಯಂತ ವೈದ್ಯ ಮತ್ತು ದಂತವೈದ್ಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವೈದ್ಯ ಮತ್ತು ದಂತವೈದ್ಯ ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದಲೇ ಏಕರೂಪದ ಕೌನ್ಸೆಲಿಂಗ್‌ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Advertisement

ಅಲ್ಲದೆ, ಖಾಸಗಿ ವೈದ್ಯ ಕಾಲೇಜುಗಳ ಇನ್‌ಸ್ಟಿಟ್ಯೂಷನ್‌ ಕೋಟಾದ ಶೇ. 30ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ.ಈ ನಿಟ್ಟಿನಲ್ಲಿ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ವಿಧೇಯಕ-2017ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ. ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ಸಿಕ್ಕಿದ ಬಳಿಕ 2017-18ನೇ ಸಾಲಿನಿಂದಲೇ ಹೊಸ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿಗೆ ಬರಲಿದೆ.

ವಿಧೇಯಕವನ್ನು ಗುರುವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಪರ್ಯಾವಲೋಚನೆಗೆ ಮಂಡಿಸಿದ್ದು, ಈ ಕುರಿತು ಸುದೀರ್ಘ‌ ಸಮಾಲೋಚನೆ ನಡೆಸಿದ ಬಳಿಕ ಸದನ ಧ್ವನಿಮತದಿಂದ ವಿಧೇಯಕವನ್ನು ಅಂಗೀಕರಿಸಿತು. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕವೇ ಕೌನ್ಸೆಲಿಂಗ್‌ ನಡೆಸಲಾಗುತ್ತದೆ.

ಈ ವಿಧೇಯಕದ ಅನ್ವಯ ಪ್ರಸ್ತುತ ದೇಶಾದ್ಯಂತ ವೈದ್ಯ ಮತ್ತು ದಂತವೈದ್ಯ ಕೋರ್ಸ್‌ಗಳಿಗೆ ನೀಟ್‌ ಆಯೋಜಿಸಲಾಗುತ್ತಿದೆ. ಆದರೆ, ಕಳೆದ ವರ್ಷ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್‌ ನಡೆಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಏಕರೂಪದ ಕೌನ್ಸೆಲಿಂಗ್‌ ನಡೆಸಲಾಗುತ್ತದೆ.

ಜತೆಗೆ ಸರ್ಕಾರಿ ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳಲ್ಲಿ ರಾಜ್ಯದ ಅಭ್ಯರ್ಥಿಗಳಿಗೆ ಲಭ್ಯವಾಗುವ ಶೇ. 50ರಷ್ಟು ಸೀಟುಗಳ ಜತೆಗೆ ಖಾಸಗಿ ಕಾಲೇಜುಗಳ ಶೇ. 30ರಷ್ಟು ಇನ್‌ಸ್ಟಿಟ್ಯೂಷನಲ್‌ ಸೀಟುಗಳಲ್ಲಿ ಶೇ. 30ರಷ್ಟನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.

Advertisement

ಖಾಸಗಿ ಕಾಲೇಜುಗಳೊಂದಿಗೆ ಸರ್ಕಾರ ಪ್ರತಿವರ್ಷ ಮಾಡಿಕೊಳ್ಳುವ ಸೀಟುಹಂಚಿಕೆ ಒಪ್ಪಂದ ಈ ಬಾರಿಯೂ ಮುಂದುವರಿಯಲಿದೆ. ಇದರೊಂದಿಗೆ ಖಾಸಗಿ ಕಾಲೇಜುಗಳಲ್ಲಿ (ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು) ಶೇ. 30ರಷ್ಟು ಹೆಚ್ಚುವರಿ ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯವಾಗುವುದರಿಂದ ಸರ್ಕಾರಿ ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟುಗಳ ಸಂಖ್ಯೆ ಕಡಿಮೆಯಾದರೂ ಅದಕ್ಕಿಂತ ಹೆಚ್ಚಿನ ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.

ಇದಲ್ಲದೆ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲೂ ರಾಜ್ಯ ಸರ್ಕಾರದಿಂದಲೇ ಕೌನ್ಸೆಲಿಂಗ್‌ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಇನ್‌ಸ್ಟಿಟ್ಯೂಷನಲ್‌ ಕೋಟಾದ ಶೇ. 25ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ನೀಡುವ ಕುರಿತು ಡೀಮ್ಡ್ ವಿವಿ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಸಚಿವ ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ರಫೀಕ್‌ ಅಹ್ಮದ್‌, ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ, ರಾಜೀವ್‌, ಗುರು ಪಾಟೀಲ್‌, ಎಸ್‌.ಸುರೇಶ್‌ಕುಮಾರ್‌ ಅವರು ಕೆಲವೊಂದು ಅನುಮಾಗಳನ್ನು ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಕೋಟಾದ ಸೀಟುಗಳು ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕೌನ್ಸೆಲಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಲ್ಲದೆ, ರಾಜ್ಯದಲ್ಲಿ ಪ್ರಸ್ತುತ ಶುಲ್ಕ ನಿಯಂತ್ರಣ ಸಮಿತಿ ನಿರ್ಧರಿಸುವ ಶುಲ್ಕಗಳನ್ನು ಖಾಸಗಿ ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳು ವಿಧಿಸುತ್ತಿಲ್ಲ. ಮೇಲಾಗಿ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನೇ ಪಡೆಯುತ್ತವೆ. ಹೀಗಾಗಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಖಾಸಗಿ ಕಾಲೇಜುಗಳ ಶುಲ್ಕವೂ ಕಡಿಮೆಯಿದೆ ಎಂದು ವಿವರಿಸಿದರು.

ಉಳಿದಂತೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕೋಟಾವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಕೋಟಾದಂತೆ ಶೇ. 20ರಿಂದ ಶೇ. 25ಕ್ಕೆ ಹೆಚ್ಚಿಸಲು ಅವಕಾಶ ಮಾಡಿಕೊಡಲಾಗಿದೆ. ಏಕರೂಪದ ಕೌನ್ಸೆಲಿಂಗ್‌ಗಾಗಿ ಈಗಾಗಲೇ ಕೆಇಎ ವಿಶೇಷ ಸಾಫ್ಟ್ವೇರ್‌ ಸಿದ್ಧಪಡಿಸಿದೆ. ಅದರಲ್ಲಿ ಆಯಾ ಶಿಕ್ಷಣ ಸಂಸ್ಥೆಗಳ ಕೋಟಾ, ಸರ್ಕಾರಿ ಕೋಟಾ ಮತ್ತು ಇನ್‌ಸ್ಟಿಟ್ಯೂಷನಲ್‌ ಕೋಟಾ, ಅನಿವಾಸಿ ಭಾರತೀಯ ಕೋಟಾ ಮುಂತಾದ ಅಂಶಗಳನ್ನು ಸೇರಿಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next