ಔರಂಗಾಬಾದ್: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಸಂಶಯಾಸ್ಪದ ಪುಡಿ ಹಾಗೂ ಪತ್ರಗಳ ರವಾನೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ವೈದ್ಯರೊಬ್ಬರನ್ನು ಮಧ್ಯಪ್ರದೇಶ ಉಗ್ರ ನಿಗ್ರಹ ದಳ(ಎಟಿಎಸ್) ಶನಿವಾರ ಬಂಧಿಸಿದೆ. ಬಂಧಿತನನ್ನು ಡಾ. ಸೈಯದ್ ಅಬ್ದುಲ್ ರೆಹಮಾನ್ ಖಾನ್(35) ಎಂದು ಗುರುತಿಸಲಾಗಿದೆ. ಈತ ನಾಂದೇಡ್‌ನ ಧಾನೇಗಾಂವ್‌ನಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಕಳೆದ 3 ತಿಂಗಳಿನಿಂದಲೂ ಈತನ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಏಕೆಂದರೆ, ಈತ ಸರಕಾರಿ ಅಧಿಕಾರಿಗಳಿಗೆ ಇದೇ ರೀತಿಯ ಪತ್ರ ಬರೆದು, ನನ್ನ ತಾಯಿ ಮತ್ತು ಸಹೋದರನಿಗೆ ಉಗ್ರರ ನಂಟಿದ್ದು, ಅವರನ್ನು ಬಂಧಿಸಬೇಕು ಎಂದು ಪತ್ರದಲ್ಲಿ ಬರೆದಿದ್ದನು. ಈತ ಮೊಬೈಲನ್ನು ಮನೆಯಲ್ಲೇ ಬಿಟ್ಟು, ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸಿ ಅಲ್ಲಿಂದ ಪತ್ರಗಳನ್ನು ಪೋಸ್ಟ್ ಮಾಡುತ್ತಿದ್ದ ಎಂದು ಇನ್‌ಸ್ಪೆಕ್ಟರ್ ಪ್ರದೀಪ್ ಕಾಕಡೆ ಹೇಳಿದ್ದಾರೆ. ಉರ್ದು ಭಾಷೆಯಲ್ಲಿ ಬರೆದ ಪತ್ರಗಳು ಹಾಗೂ ವಿಷಕಾರಿ ರಾಸಾಯನಿಕಗಳುಳ್ಳ ಲಕೋಟೆಗಳು ತಮ್ಮ ನಿವಾಸಕ್ಕೆ ಬಂದಿವೆ ಎಂದು ಪ್ರಜ್ಞಾ ಅವರು ಕಳೆದ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು.